ಭಾನುವಾರ, ಸೆಪ್ಟೆಂಬರ್ 26, 2021
23 °C
ರಸ್ತೆ, ಚರಂಡಿಯದ್ದೆ ಸಮಸ್ಯೆ; ಮಳೆ ಬಂದಾಗ ಮನೆಗಳಿಗೆ ನುಗ್ಗುವ ಕೊಳಚೆ ನೀರು

ಕಲಬುರ್ಗಿ: ಮೂಲಸೌಲಭ್ಯ ವಂಚಿತ ಖಣದಾಳ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಣ್ಣಿನ ಕಚ್ಚಾ ರಸ್ತೆಗಳು, ಕಣ್ಣಿಗೆ ರಾಚುವ ದೂಳು, ಸ್ಲ್ಯಾಬ್ ಇಲ್ಲದ ಚರಂಡಿಗಳು, ದಾರಿಯುದ್ದಕ್ಕೂ ಹರಿಯುವ ಕೊಳಚೆ ನೀರು, ದುಸ್ಥಿತಿಯಲ್ಲಿರುವ ಸರ್ಕಾರಿ ಕಚೇರಿ ಕಟ್ಟಡಗಳು.

ತಾಲ್ಲೂಕಿನ ಖಣದಾಳ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಕಂಡು ಬರುವ ದೃಶ್ಯಗಳಿವು.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಖಣದಾಳ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಅಫಜಲಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಸುಮಾರು 12 ಸಾವಿರ ಜನಸಂಖ್ಯೆಯಿದೆ. 4 ಸಾವಿರ ಮತದಾರರಿದ್ದಾರೆ.

ಅಂಗನವಾಡಿ ಕೇಂದ್ರ, ಸರ್ಕಾರಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿವೆ. ಉತ್ತಮ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ. ಗ್ರಾಮದಲ್ಲಿ ಐತಿಹಾಸಿಕ ಹುಣಚೇಶ್ವರ ದೇವಸ್ಥಾನವಿದ್ದು, ಶ್ರದ್ಧಾಭಕ್ತಿಯ ಕೇಂದ್ರವಾಗಿ ಪರಿಣಮಿಸಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ತಾಂಡಾ ಇದ್ದು, ಬಂಜಾರಾ ಸಮುದಾಯದ ಶ್ರದ್ಧಾಕೇಂದ್ರಗಳು ಇಲ್ಲಿವೆ.

ಇಡೀ ಗ್ರಾಮ ಸುತ್ತು ಹಾಕಿದರೂ ಒಂದೇ ಒಂದು ಗುಣಮಟ್ಟದ ಸಿ.ಸಿ. ರಸ್ತೆಯೂ ಕಾಣಸಿಗುವುದಿಲ್ಲ. ಇಲ್ಲಿನ ಒಳರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ರಸ್ತೆಗಳು ಹದಗೆಟ್ಟಿದ್ದು, ತಗ್ಗುಗಳಿಂದ ಕೂಡಿವೆ. ಮಳೆ ಬಂದರಂತೂ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿ ಬಿಡುತ್ತವೆ. ಇಂಥ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ಇಲ್ಲಿನ ನಿವಾಸಿಗಳಿಗೆ ಕಷ್ಟಕರವಾಗಿದೆ.

ಇಲ್ಲಿನ ಚರಂಡಿಗಳಿಗೆ ಸ್ಲ್ಯಾಬ್ ಹಾಕಿಲ್ಲ. ಹೀಗಾಗಿ ಕೊಳಚೆ ನೀರಿನ ದುರ್ನಾತದಿಂದ ಜನರು ನಿತ್ಯ ಹಿಂಸೆ ಅಉಭವಿಸುವಂತಾಗಿದೆ. ಅಲ್ಲದೆ ಚರಂಡಿಗಳಲ್ಲಿ ಅಲ್ಲಲ್ಲಿ ಹೂಳು ತುಂಬಿಕೊಂಡ ಪರಿಣಾಮ ಕೊಳಚೆ ನೀರು ರಸ್ತೆ ಮೇಲೆ ಬಂದು ನಿಲ್ಲುತ್ತಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಪ್ರತಿ ವರ್ಷ ಧಾರಾಕಾರ ಮಳೆ ಬಂದಾಗಲೆಲ್ಲ ಇಲ್ಲಿನ ಕೆಳ ಪ್ರದೇಶದಲ್ಲಿರುವ ನಿವಾಸಿಗಳ ಗೋಳು ಹೇಳತೀರದು. ಕೊಳಚೆ ನೀರು ಮನೆಗಳಿಗೆ ನುಗ್ಗುವ ಕಾರಣ ಸಂಕಷ್ಟ ಅನುಭವಿಸುವಂತಾಗಿದೆ. ಈ ಕುರಿತು ಸಂಬಂಧಿಸಿದವರಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪಾಳು ಬಿದ್ದ ಸಾಮೂಹಿಕ ಶೌಚಾಲಯ: ಗ್ರಾಮದಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣ ಸಾಕಾರವಾಗಿಲ್ಲ. ಇದರಿಂದ ಇಲ್ಲಿ ಬಹಿರ್ದೆಸೆ ಮುಂದುವರೆದಿದೆ. ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಿರುವ ಸಾಮೂಹಿಕ ಶೌಚಾಲಯವಿದ್ದು, ನೀರಿನ ಸಂಪರ್ಕ ಇರದ ಕಾರಣ ಪಾಳು ಬಿದ್ದಿದೆ. ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಂಡು ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ‘ಖಣದಾಳ’ ಗ್ರಾಮಸ್ಥರ ‘ಮನದಾಳ’ ಆಲಿಸಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಬೇಕು ಎಂಬುದು ಇಲ್ಲಿನ ಮುಖಂಡರ ಆಗ್ರಹವಾಗಿದೆ.

ಶವ ಸಂಸ್ಕಾರಕ್ಕೂ ಪರದಾಟ
ಖಣದಾಳ ಗ್ರಾಮದಲ್ಲಿ ರುದ್ರಭೂಮಿಯಿಲ್ಲ. ಇದರಿಂದಾಗಿ ಭೂರಹಿತ ಜನರು ಶವ ಸಂಸ್ಕಾರಕ್ಕೆ ಪರದಾಡುವಂತಾಗಿದೆ.

‘ಈ ಮುಂಚೆ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಮೀನೊಂದರದರಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವು. ಆದರೆ ಖಾಸಗಿ ವ್ಯಕ್ತಿಯೊಬ್ಬರು ಜಾಗವನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಈಗ ಅಲ್ಲಿ ಸಂಸ್ಕಾರಕ್ಕೆ ಅನುಮತಿ ಕೊಡುತ್ತಿಲ್ಲ’ ಎನ್ನುವುದು ಗ್ರಾಮಸ್ಥರ ಆರೋಪ.

ಹೆಚ್ಚು ಜನಸಂಖ್ಯೆ ಹೊಂದಿರುವ ಖಣದಾಳ ಗ್ರಾಮದಲ್ಲಿ ರುದ್ರಭೂಮಿಗೆ ಸರ್ಕಾರ ಜಮೀನು ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

***
ಗ್ರಾಮದಲ್ಲಿ ರಸ್ತೆ, ಚರಂಡಿ ಸಮಸ್ಯೆ ಹೆಚ್ಚು ಕಾಡುತ್ತಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸೌಲಭ್ಯ ಒದಗಿಸಲು ಅಧಿಕಾರಿಗಳು ಗಮನ ಹರಿಸಬೇಕು.
- ವಿಶ್ವನಾಥ ಕೋಣಿನ, ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.