ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಒಂಬತ್ತು ತಿಂಗಳಾದರೂ ಕ್ರೀಡಾಂಗಣ ನೌಕರರಿಗಿಲ್ಲ ವೇತನ!

Published 27 ಮೇ 2024, 5:06 IST
Last Updated 27 ಮೇ 2024, 5:06 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈಜುಕೊಳದ ತರಬೇತುದಾರರು ಸೇರಿದಂತೆ ‘ಡಿ’ ದರ್ಜೆಯ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಇದು ಗುತ್ತಿಗೆ ನೌಕರರನ್ನು ಸಂಕಷ್ಟಕ್ಕೀಡು ಮಾಡಿದೆ.

ಕ್ರೀಡಾಂಗಣದ ಸ್ವಚ್ಛತೆ ಹಾಗೂ ಭದ್ರತೆ ಸೇರಿದಂತೆ ಸಂಪೂರ್ಣ ನಿರ್ವಹಣೆಗಾಗಿ 15ಕ್ಕೂ ಹೆಚ್ಚು ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲರೂ ಕ್ರೀಡಾಂಗಣದ ಬೇರೆಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಡಳಿತದಿಂದಲೇ ನೇರವಾಗಿ ವೇತನ ಪಾವತಿಯಾಗುತ್ತದೆ. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಈ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಪಾವತಿಯಾಗುತ್ತಿಲ್ಲ. ಇದರಲ್ಲಿ ಕೆಲವರಿಗೆ 9 ತಿಂಗಳು ಹಾಗೂ ಇನ್ನು ಕೆಲವರಿಗೆ 6 ತಿಂಗಳ ವೇತನ ಪಾವತಿಯಾಗಿಲ್ಲ.

‘ಹಲವು ತಿಂಗಳುಗಂದ ನಮಗೆ ವೇತನ ಸಿಕ್ಕಿಲ್ಲ. ಈ ಸಂಬಂಧ ನಮ್ಮ ಸಹಾಯಕ ನಿರ್ದೇಶಕರ ಗಮನಕ್ಕೆ ತಂದಿದ್ದೇವೆ. ಅವರು ಈಗಾಗಲೇ ಈ ಸಂಬಂಧ ಕ್ರಮಕೈಗೊಂಡಿದ್ದು, ಶೀಘ್ರ ವೇತನ ಪಾವತಿಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆ ನೌಕರರೊಬ್ಬರು ಮಾಹಿತಿ ನೀಡಿದರು.

ಹಿಂದೆ ಇದ್ದ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ಅವರು ಕಡತವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದರು. ಆದರೆ ವರ್ಗಾವಣೆ ಆಗಿದ್ದರಿಂದ ಕಡತ ವಿಲೇವಾರಿ ಆಗಿರಲಿಲ್ಲ. ಹೀಗಾಗಿ ನೌಕರರ ವೇತನದ ಕಡತವು ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಉಳಿದಿತ್ತು. ಇದರೊಂದಿಗೆ ಚುನಾವಣೆ ಘೋಷಣೆ ಆಗಿದ್ದರಿಂದ ಕಡತಗಳು ವಿಲೇವಾರಿಯಾಗಿಲ್ಲ. ಜತೆಗೆ ಹೊಸ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ ಅವರು, ಅಧಿಕಾರ ವಹಿಸಿಕೊಂಡಿದ್ದರಿಂದ ತಾಂತ್ರಿಕ ತೊಂದರೆ ಉಂಟಾಗಿತ್ತು. ಹೀಗಾಗಿ ಈವರೆಗೂ ಗುತ್ತಿಗೆ ನೌಕರರ ವೇತನವಾಗಿಲ್ಲ ಎಂಬ ಮಾಹಿತಿ ದೊರೆಯಿತು.

‘ಕಲಬುರಗಿಗೆ ಬಂದು ಅಧಿಕಾರ ವಹಿಸಿಕೊಂಡು ಎರಡ್ಮೂರು ತಿಂಗಳಷ್ಟೇ ಆಗಿದೆ. ಗುತ್ತಿಗೆ ನೌಕರರ ವೇತನ ಆಗದಿರುವುದು ಆಗಲೇ ಗಮನಕ್ಕೆ ಬಂದಿದೆ. ಹಿಂದಿನ ಅಧಿಕಾರಿ ವರ್ಗಾವಣೆ ಆಗಿದ್ದರಿಂದ ತಾಂತ್ರಿಕ ತೊಂದರೆಯಾಗಿತ್ತು. ಅಲ್ಲದೇ ಕಡತವನ್ನು ತರಿಸಿಕೊಂಡು, ವೇತನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿದ್ದೇನೆ. ಅವರೂ ಕೂಡ ಭರವಸೆ ನೀಡಿದ್ದಾರೆ. ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದೆ. ಹೀಗಾಗಿ ಜೂನ್‌ನಲ್ಲಿ ವೇತನ ಪಾವತಿಯಾಗುವ ಸಾಧ್ಯತೆ ಇದೆ’ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ ಮಾಹಿತಿ ನೀಡಿದರು.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಗುತ್ತಿಗೆ ನೌಕರರ ವೇತನ ವಿಳಂಬದ ಕುರಿತು ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಿಸಿದ ಕ್ರೀಡಾಂಗಣದ ಸಹಾಯಕ ನಿರ್ದೇಶಕರೊಂದಿಗೆ ಚರ್ಚಿಸಲಾಗುವುದು
-ಫೌಜಿಯಾ ತರನ್ನುಮ್‌ ಜಿಲ್ಲಾಧಿಕಾರಿ

ಈಜುಕೊಳ: 40 ಲಕ್ಷ ವರಮಾನ

ಕ್ರೀಡಾಂಗಣದಲ್ಲಿರುವ ಈಜುಕೊಳ ಒಂದರಿಂದಲೇ ₹ 40 ಲಕ್ಷಕ್ಕೂ ಮೊತ್ತದ ವರಮಾನ ಕ್ರೀಡಾಂಗಣಕ್ಕೆ ಬರುತ್ತದೆ. ಆದರೆ ಭ್ರಷ್ಟಾಚಾರದ ವಾಸನೆ ಬಂದಿದ್ದರಿಂದ ‘ಸ್ಕ್ಯಾನಿಂಗ್‌’ ವಿಧಾನ ಮೂಲಕ ಶುಲ್ಕ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಈ ಮೂಲಕ ಈಜುಕೊಳದಿಂದ ಸಂಗ್ರಹವಾಗುವ ಶುಲ್ಕದ ಎಲ್ಲ ಹಣವು ನೇರವಾಗಿ ಜಿಲ್ಲಾಧಿಕಾರಿ ಖಾತೆಗೆ ಪಾವತಿಯಾಗುತ್ತದೆ. ವರಮಾನದ ಬಹುಪಾಲು ಈಜುಕೊಳ ನಿರ್ವಹಣೆ ರಸಾಯನಿಕಗಳ ವೆಚ್ಚ ಹಾಗೂ ಅಲ್ಲಿನ ನೌಕರರ ವೇತನಕ್ಕಾಗಿಯೇ ಬಳಸಿಕೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT