ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಮ್ಸ್: 700 ಗುತ್ತಿಗೆ ನೌಕರರಿಗಿಲ್ಲ 3 ತಿಂಗಳ ವೇತನ!

3 ತಿಂಗಳಿಂದ ವೇತನ ಪಾವತಿಗೆ ಸತಾಯಿಸುತ್ತಿರುವ ಮೈಸೂರು ಮೂಲದ ಸ್ವಿಚ್‌ಮ್ಯಾನ್ ಪವರ್ ಏಜೆನ್ಸಿ
Published : 1 ಸೆಪ್ಟೆಂಬರ್ 2024, 4:51 IST
Last Updated : 1 ಸೆಪ್ಟೆಂಬರ್ 2024, 4:51 IST
ಫಾಲೋ ಮಾಡಿ
Comments

ಕಲಬುರಗಿ: ಸದಾ ತುರ್ತು ವೈದ್ಯಕೀಯ ಸೇವೆಗಳನ್ನು ನಿರ್ವಹಿಸುವ ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯ ಗುತ್ತಿಗೆ ಸಿಬ್ಬಂದಿ, ತಾಯಿ–ಮಕ್ಕಳ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸಿಂಗ್ ಸಿಬ್ಬಂದಿ, ಲ್ಯಾಬ್‌ ಟೆಕ್ನಿಷಿಯನ್‌ಗಳು, ಆಯಾಗಳು, ಆಂಬುಲೆನ್ಸ್ ಚಾಲಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ 700ಕ್ಕೂ ಅಧಿಕ ಸಿಬ್ಬಂದಿಗೆ ಮೂರು ತಿಂಗಳ ವೇತನ ಸಂದಾಯವಾಗಿಲ್ಲ.

ಇದನ್ನೇ ನಂಬಿಕೊಂಡು ಕೆಲಸ ಮಾಡುತ್ತಿರುವ ಸಿಬ್ಬಂದಿ ವಿಳಂಬ ವೇತನದಿಂದಾಗಿ ಪರದಾಡುತ್ತಿದ್ದಾರೆ. ಮೈಸೂರು ಮೂಲದ ಸ್ವಿಚ್ ಮ್ಯಾನ್‌ ಪವರ್ ಏಜೆನ್ಸಿಯು ಜಿಮ್ಸ್‌ಗೆ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದ್ದು, ಸಂಸ್ಥೆಯು ಟೆಂಡರ್ ಪಡೆದ ಬಳಿಕ ಇದೇ ಮೊದಲ ಬಾರಿಗೆ ಮೂರು ತಿಂಗಳಷ್ಟು ವೇತನ ವಿಳಂಬವಾಗಿದೆ.

ಡಾ. ಕವಿತಾ ಪಾಟೀಲ ಅವರು ಜಿಮ್ಸ್‌ ನಿರ್ದೇಶಕಿಯಾಗಿದ್ದ ಸಂದರ್ಭದಲ್ಲಿ ಬೇರೊಂದು ಮ್ಯಾನ್ ಪವರ್ ಏಜೆನ್ಸಿ ಸಹ ತಡವಾಗಿ ವೇತನ ಪಾವತಿ ಮಾಡಿತ್ತು. ಹಾಲಿ ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್. ಅವರ ಅವಧಿಯಲ್ಲಿ ಸಿಬ್ಬಂದಿ ಪೂರೈಸುವ ಗುತ್ತಿಗೆಯನ್ನು ಮೈಸೂರು ಮೂಲದ ಸ್ವಿಚ್ ಸಂಸ್ಥೆಗೆ ನೀಡಲಾಗಿದೆ. ವೇತನ ವಿಳಂಬದ ಬಗ್ಗೆ ಕೇಳಿದರೆ ಸರ್ಕಾರದಿಂದಲೇ ವೇತನದ ಮೊತ್ತದ ಚೆಕ್ ಬಂದಿಲ್ಲ ಎಂಬುದಾಗಿ ಕಾರಣ ಹೇಳುತ್ತಿದ್ದಾರೆ ಎಂದು ಜಿಮ್ಸ್‌ನಲ್ಲಿ ಲ್ಯಾಬ್‌ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರು ದೂರಿದರು.

‘ವೈದ್ಯರು, ವೈದ್ಯಾಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಇರುತ್ತದೆ. ಅವರಿಗೆ ಸರ್ಕಾರದಿಂದಲೇ ಪ್ರತಿ ತಿಂಗಳು ನೇರವಾಗಿ ವೇತನ ಪಾವತಿಯಾಗುತ್ತದೆ. ಆದರೆ, ನಮಗೆ ಮಾತ್ರ ಎರಡು, ಮೂರು ತಿಂಗಳಿಗೊಮ್ಮೆ ವೇತನ ಸಿಗುತ್ತದೆ. ಬರುವ ವೇತನವೇ ತಿಂಗಳಿಗೆ ₹ 14ರಿಂದ ₹ 24 ಸಾವಿರ. ಅದನ್ನೂ ಸಕಾಲಕ್ಕೆ ಕೊಡದಿದ್ದರೆ ನಮ್ಮ ಕುಟುಂಬವನ್ನು ನಡೆಸುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಆ ಸಿಬ್ಬಂದಿ.

ಮತ್ತೊಬ್ಬ ಮಹಿಳಾ ಸಿಬ್ಬಂದಿ ಮಾತನಾಡಿ, ‘ಇದನ್ನೇ ನಂಬಿಕೊಂಡು ಹಳ್ಳಿಯಿಂದ ಇಲ್ಲಿಗೆ ಬಂದು ಮನೆ ಮಾಡಿದ್ದೇವೆ. ಮಕ್ಕಳ ವಿದ್ಯಾಭ್ಯಾಸ, ಮನೆಯ ಕಿರಾಯಿ, ದಿನಸಿ ಖರೀದಿ ಇದರಲ್ಲೇ ಆಗಬೇಕು. ಜೂನ್, ಜುಲೈ, ಆಗಸ್ಟ್ ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದರಿಂದ ಅವರಿವರಿಂದ ಸಾಲ ತಂದು, ಉದ್ರಿ ಸಂತೆ ತಂದು ಮನೆ ನಡೆಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಗಾರ ಆಗಿಲ್ಲ ಎಂದು ಜಿಮ್ಸ್ ಡೈರೆಕ್ಟರ್‌ ಅವರಿಗೆ ಕೇಳಿದರೆ ನೀವು ನಮಗೇನೂ ಸಂಬಂಧವಿಲ್ಲ. ನಿಮ್ಮನ್ನು ನೇಮಕ ಮಾಡಿಕೊಂಡ ಏಜೆನ್ಸಿಯನ್ನೇ ಕೇಳಿ ಎಂದು ಹೇಳುತ್ತಾರೆ. ಏಜೆನ್ಸಿಯವರು ಹಾರಿಕೆಯ ಉತ್ತರ ನೀಡುತ್ತಾರೆ’ ಎನ್ನುತ್ತಾರೆ ಅವರು.

ವೇತನ ವಿಳಂಬ ಕುರಿತು ‘ಪ್ರಜಾವಾಣಿ‘ಯು ಪ್ರತಿಕ್ರಿಯೆಗಾಗಿ ಸ್ವಿಚ್ ಕಂಪನಿ, ಜಿಮ್ಸ್ ನಿರ್ದೇಶಕರನ್ನು ಸಂಪರ್ಕಿಸಿತಾದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

‘ವೇತನ ಕೇಳಿದರೆ ಕೆಲಸದಿಂದ ವಜಾ’
ಬಾಕಿ ಇರುವ ವೇತನ ಕೇಳಲು ಮುಂದಾದರೆ ಕೆಲಸದಿಂದಲೇ ವಜಾ ಮಾಡುವ ಬೆದರಿಕೆಯನ್ನು ಮ್ಯಾನ್‌ ಪವರ್ ಏಜೆನ್ಸಿಯವರು ಹಾಕುತ್ತಾರೆ. ಹೀಗಾಗಿ ಕೊಟ್ಟಾಗ ಕೊಡಲಿ ಎಂದು ಸುಮ್ಮನಾಗಿದ್ದೇವೆ ಎಂದು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಗುತ್ತಿಗೆ ನೌಕರರೊಬ್ಬರು ವೇತನ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದರು. ಅವರಿಗೆ ನಾಳೆಯಿಂದ ಕೆಲಸಕ್ಕೆ ಬರುವ ಅಗತ್ಯವಿಲ್ಲ ಎಂದು ಹೇಳಿದರು. ಹೀಗಾಗಿ ನಮಗೂ ಅದೇ ಉತ್ತರ ಸಿಗಬಹುದು ಎಂಬ ಕಾರಣಕ್ಕೆ ಸುಮ್ಮನೇ ಇದ್ದೇವೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT