ಬುಧವಾರ, ಆಗಸ್ಟ್ 4, 2021
22 °C
ಮೂರುವರೆ ತಿಂಗಳಿನಿಂದ ಚಟುವಟಿಕೆಯಿಲ್ಲದೇ ಭಣಗುಡುತ್ತಿದೆ ರೈಲು ನಿಲ್ದಾಣ

ಕಲಬುರ್ಗಿ | ಬಾರದ ರೈಲು: ಹಳಿ ತಪ್ಪಿದ ಬದುಕು

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಮತ್ತು ರೈಲ್ವೆ ಇಲಾಖೆಗೆ ಆರ್ಥಿಕ ನಷ್ಟ ಆಗಿರಬಹುದು. ಆದರೆ, ರೈಲ್ವೆ ಪ್ರಯಾಣಿಕರಿಂದ ಬರುತ್ತಿದ್ದ ಆದಾಯವನ್ನೇ ನಂಬಿ ಬದುಕು ಕಟ್ಟಿಕೊಂಡವರ ಪಾಡಂತೂ ಹೇಳತೀರದು. ಮೂರುವರೆ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ’.

ಹೀಗೆ ನೋವು ತೋಡಿಕೊಂಡವರು ಆಟೊ ಚಾಲಕ ಶಬ್ಬೀರ್. ಸಣ್ಣ ಚಟುವಟಿಕೆಯೂ ಇಲ್ಲದೇ ಭಣಗುಡುತ್ತಿದ್ದ ನಗರದ ರೈಲು ನಿಲ್ದಾಣದ ಹೊರ ಆವರಣದಲ್ಲಿ ನಿಂತಿದ್ದ ಅವರು, ‘ಇಲ್ಲಿ ಸಾಲಾಗಿ ಆಟೊ ನಿಲ್ಲಿಸುತ್ತಿದ್ದೆವು. ಪೈಪೋಟಿ ಮೇಲೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದೆವು. ತಳ್ಳುಗಾಡಿಗಳಲ್ಲಿ ಸಿಗುತ್ತಿದ್ದ ಮಿರ್ಚಿ ಬಜ್ಜಿ, ವಡಾ ಪಾವ್‌ ತಿನ್ನುತ್ತಿದ್ದೆವು. ಆದರೆ, ಈಗ ಅದು ಯಾವುದೂ ಇಲ್ಲ‌’ ಎಂದರು.

ಇದು ಬರೀ ಆಟೊ ಚಾಲಕರೊಬ್ಬರ ಬವಣೆಯಲ್ಲ, ರೈಲು ನಿಲ್ದಾಣದ ಆವರಣದಲ್ಲಿ ಹೋಟೆಲ್ ನಡೆಸುವವರು, ಸಣ್ಣಪುಟ್ಟ ಆಟಿಕೆ ಸಾಮಾನು ಮಾರುವವರು, ಚಹಾ ಮಾರುವವರು, ಪತ್ರಿಕೆ ಮಾರಾಟಗಾರರು, ಪ್ರಯಾಣಿಕರ ಸರಕನ್ನು ಹೊರುತ್ತಿದ್ದ ಕೂಲಿಗಳು, ಚಪ್ಪಲಿ ಹೊಲಿಯುವವರು ಹೀಗೆ ದೈನಂದಿನ ದುಡಿಮೆಯನ್ನೆ ನೆಚ್ಚಿಕೊಂಡಿದ್ದ ಹಲವಾರು ಮಂದಿ ಸಂಕಟದಲ್ಲಿ ಇದ್ದಾರೆ.

ದಿನದ 24 ಗಂಟೆಯು ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ನಿಲ್ದಾಣದಲ್ಲಿ ಸದ್ಯಕ್ಕೆ ಬೆರಳೆಣಿಕೆಯಷ್ಟು ಸ್ವಚ್ಛತಾ ಸಿಬ್ಬಂದಿ ಹೊರತುಪಡಿಸಿದರೆ ಮತ್ತ್ಯಾರೂ ಕಾಣಿಸುವುದಿಲ್ಲ. ಎಲ್ಲಾ ಕಡೆಗಳಲ್ಲೂ ಬ್ಯಾರಿಕೇಡ್ ಹಾಕಲಾಗಿದ್ದು, ಅಂಗಡಿ–ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಹೊರ ಆವರಣದಲ್ಲಿ ತಳ್ಳುಗಾಡಿ ಮತ್ತು ಸಣ್ಣಪುಟ್ಟ ಹೋಟೆಲ್‌ಗಳಿದ್ದರೂ ಅಲ್ಲಿ ಜನದಟ್ಟಣೆ ಸ್ವಲ್ಪವೂ ಇಲ್ಲ.

‘ಹಲವು ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದ ನಾವು ಯಾವತ್ತೂ ಬಾಗಿಲು ಹಾಕುತ್ತಿರಲಿಲ್ಲ. 24 ಗಂಟೆ ಹಗಲು–ರಾತ್ರಿಯೆನ್ನದೇ ಗ್ರಾಹಕರಿಗೆ ದೋಸೆ, ಇಡ್ಲಿ, ಚಹಾ, ಕಾಫಿ, ತಂಪು ಪಾನೀಯ ಮುಂತಾದವು ಪೂರೈಸುತ್ತಿದ್ದೆವು. ಆದರೆ, ಮಾರ್ಚ್‌ 22ರಂದು ಹೋಟೆಲ್‌ಗೆ ಬೀಗ ಹಾಕಿದ ದಿನದಿಂದ ಈವರೆಗೆ ಬಾಗಿಲು ತೆರೆದಿಲ್ಲ’ ಎಂದು ಹೋಟೆಲ್ ಮಾಲೀಕ ಸಂಜಯ್ ಜೋಗ್ ಹೇಳಿದರು.

‘ನಮ್ಮ ಹೋಟೆಲ್‌ನಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಎಲ್ಲಿ ಹೋದರೋ ಗೊತ್ತಿಲ್ಲ. ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವೆ. ಇದೆಲ್ಲದರ ಮಧ್ಯೆ ಆಗಸ್ಟ್ 12ರವರೆಗೆ ರೈಲು ಸಂಚಾರ ಆರಂಭಗೊಳ್ಳುವುದಿಲ್ಲ ಎಂಬ ಮಾಹಿತಿ ಇದೆ. ಈಗಾಗಲೇ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿರುವ ನಾವು ಇನ್ನಷ್ಟು ನಷ್ಟ ಅನುಭವಿಸುತ್ತೇವೆ. ಏನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ’ ಎಂದು ತಿಳಿಸಿದರು.

ಕೆಲ ತಿಂಗಳ ಹಿಂದೆಯಷ್ಟೇ ಅಭಿವೃದ್ಧಿಪಡಿಸಲಾಗಿದ್ದ ‘ವರ್ಟಿಕಲ್ ಉದ್ಯಾನ’ವು ನೀರಿಲ್ಲದೇ ಸಂಪೂರ್ಣ ಬರಿದಾಲಗಿದೆ. ಹಸಿರು ಕಾಣೆಯಾಗಿದೆ, ಬಣ್ಣಬಣ್ಣದ ಹೂಗಳು ಬಾಡಿವೆ. ಒಟ್ಟಾರೆ, ನಿಲ್ದಾಣದ ಚಹರೆಯೇ ಬದಲಾಗಿದೆ.

ರೈಲು ನಿಲ್ದಾಣದ ಹೊರಗೆ ಹೋಟೆಲ್‌ ತೆರೆಯಲು ಅಥವಾ ಕೇಟರಿಂಗ್ ನಡೆಸಲು ಕಷ್ಟವಾಗುತ್ತದೆ. ಪರಿಸ್ಥಿತಿ ಸುಧಾರಿಸುವವರೆಗೆ ಆರ್ಥಿಕ ನಷ್ಟ ಅನುಭವಿಸಬೇಕು.
–ಸಂಜಯ್ ಜೋಗ್, ಹೋಟೆಲ್ ಮಾಲೀಕ, ರೈಲು ನಿಲ್ದಾಣ

ಸದ್ಯಕ್ಕೆ ಗೂಡ್ಸ್‌ ರೈಲುಗಳು ಮಾತ್ರ ಸಂಚರಿಸುತ್ತಿವೆ. ರೈಲು ನಿಲ್ದಾಣವನ್ನು ಪ್ರತಿ ದಿನ ಎರಡು ಸಲ ಸಂಪೂರ್ಣವಾಗಿ ಶುಚಿಗೊಳಿಸಲಾಗುತ್ತದೆ. ನಿಗಾ ವಹಿಸಲಾಗುತ್ತದೆ.
–ಎ.ಎಸ್‌.ಪ್ರಸಾದ್ ರಾವ್, ಸ್ಟೇಷನ್ ಮ್ಯಾನೇಜರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು