ಗುರುವಾರ , ಏಪ್ರಿಲ್ 9, 2020
19 °C
ಗಡಿ ಜಿಲ್ಲೆಯ ಜಿಲ್ಲಾಡಳಿತದೊಂದಿಗೆ ಕಪಿಲ್‌ ಮೋಹನ್ ವಿಡಿಯೊ ಕಾನ್ಫೆರೆನ್ಸ್

ವಿದೇಶದಿಂದ ಬಂದವರ ಮಾಹಿತಿ ಸಂಗ್ರಹಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ನಗರದಲ್ಲಿ ವಿಡಿಯೊ ಕಾನ್ಫ್‌ರೆನ್ಸ್‌ ನಡೆಸಿದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್, ಕೊರೋನಾ ನಿಯಂತ್ರಣಕ್ಕೆ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಗೆ ವಿದೇಶದಿಂದ ಬಂದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.

ಈ ನಿಟ್ಟಿನಲ್ಲಿ ಗೃಹ ಸಚಿವಾಲಯದ ಬ್ಯೂರೊ ಆಫ್ ಇಮ್ಮಿಗ್ರೇಶನ್ ಆಯುಕ್ತರಿಗೆ ಜಿಲ್ಲಾಡಳಿತದಿಂದ ಪತ್ರ ಬರೆದು ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಭಾರತಿಯ ಪ್ರಜೆ ಅಲ್ಲದ ಹೊರದೇಶದಿಂದ ಬರುವ ಯಾವುದೇ ವ್ಯಕ್ತಿ ವಿದೇಶಿ ವ್ಯಕ್ತಿಗಳ ನೋಂದಣಿ ಅಧಿಕಾರಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದರು.

ಕಳೆದ‌ 15–20 ದಿನಗಳಿಂದ ವಿದೇಶದಿಂದ‌ ಮರಳಿದವರ ಮಾಹಿತಿ ಸಂಗ್ರಹಿಸಿ ಅವರ ಮೇಲೆ‌ ನಿಗಾ ವಹಿಸಬೇಕು. ಗಡಿ ಜಿಲ್ಲೆ ಬೀದರ್ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಕ್ಕೆ ಹೊಂದಿಕೊಂಡಿದ್ದು, ಪುಣೆ, ಹೈದರಾಬಾದ್, ಮುಂಬೈನಿಂದ ಜನ ಬರುತ್ತಾರೆ. ಇಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ಒಟ್ಟಾರೆ ನಗರ ಪ್ರದೇಶದಲ್ಲಿ ಜನಸಂದಣಿಗೆ ಕಡಿವಾಣ ಹಾಕಲು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅರೋಗ್ಯ ತುರ್ತು ಪರಿಸ್ಥಿತಿ ಕಾಯ್ದೆಯಲ್ಲಿ ನೀಡಿದ ಅಧಿಕಾರದನ್ವಯ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಕೊರೋನಾ‌ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಸ್ತುತ ಇರುವ ಸರ್ಕಾರಿ ವ್ಯವಸ್ಥೆಗಳ ಜೊತೆಗೆ ಖಾಸಗಿ ಅಸ್ಪತ್ರೆ ಮತ್ತು ವೈದ್ಯಕೀಯ ಸಂಸ್ಥೆಗಳ ಸಹಾಯ ಅವಶ್ಯಕ. ಹೀಗಾಗಿ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಸಿ ಅವರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಅವರ ಸೇವೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊರೋನಾ ಸೋಂಕು ಹರಡದಂತೆ ಕಲಬುರ್ಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಶರತ್ ಬಿ. ವಿವರಿಸಿದರು.

ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಸಂಸ್ಥೆಗಳ ಜೊತೆಗೆ ನಗರದಲ್ಲಿ 7 ಖಾಸಗಿ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಸ್ಥಾಪಿಸಿದೆ. ಇದಲ್ಲದೆ ಪ್ರತಿ ತಾಲ್ಲೂಕಿನಲ್ಲಿಯೂ ಐಸೋಲೇಷನ್ ವಾರ್ಡ್ ತೆರೆಯಲು ಮುಂದಾಗಿದ್ದೇವೆ. ಮುಂಬೈ, ಪುಣೆ ಮೂಲಕ ವಿದೇಶದಿಂದ ಜಿಲ್ಲೆಗೆ ಹೆಚ್ಚಿನ ಜನರು ಬರುತ್ತಿದ್ದು, ಇವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ ಎಂದರು.

ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್ ಮಾತನಾಡಿ, ಜಿಲ್ಲೆಯಲ್ಲಿ ಇದೂವರೆಗೆ ಯಾವುದೇ ಕೋವಿಡ್–19 ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಮುಂಜಾಗೃತಾ ಕ್ರಮವಾಗಿ 100 ಕ್ವಾರಂಟೈನ್ ಬೆಡ್ ಸ್ಥಾಪನೆ ಮಾಡಲಾಗಿದೆ. ರೈಲು, ಬಸ್ ನಿಲ್ದಾಣಗಳಲ್ಲಿ ನಿಯಮಿತ ಸ್ಕ್ರೀನಿಂಗ್ ನಡೆಯುತ್ತಿದೆ ಎಂದರು.

ಕಲಬುರ್ಗಿಯಿಂದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಿವಾನಂದ ಸುರಗಾಳಿ, ವಿಶೇಷ ಅಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಮತ್ತು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಡಾ.ಎ.ಎಲ್.ನಾಗರಾಜ, ಬೀದರ್ ಜಿಲ್ಲೆಯಿಂದ ಜಿ.ಪಂ. ಸಿ.ಇ.ಒ ಗ್ಯಾನೇಂದ್ರಕುಮಾರ ಗಂಗ್ವಾರ್‌, ಎಸ್.ಪಿ. ಡಿ.ಎಲ್.ನಾಗೇಶ್ ಹಾಗೂ ಯಾದಗಿರಿಯಿಂದ ಜಿ.ಪಂ. ಸಿ.ಇ.ಒ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ್ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು