ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಸ ವಿಲೇವಾರಿ ಘಟಕದ ಕಾಮಗಾರಿ ಪೂರ್ಣಗೊಳಿಸಿ: ಭಂವರ್‌ ಸಿಂಗ್ ಮೀನಾ

Published 8 ಜನವರಿ 2024, 15:06 IST
Last Updated 8 ಜನವರಿ 2024, 15:06 IST
ಅಕ್ಷರ ಗಾತ್ರ

ಅಫಜಲಪುರ: ಪ್ರತಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಸ ವಿಲೇವಾರಿ ಘಟಕಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ವೈಯಕ್ತಿಕ ಶೌಚಾಲಯ ಕಾಮಗಾರಿಗಳ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ ಸಿಂಗ್ ಮೀನಾ ಅವರು ಪಿಡಿಒಗಳಿಗೆ ತಾಕೀತು ಮಾಡಿದರು‌.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾ.ಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಕಸ ವಿಲೇವಾರಿ ಘಟಕಗಳು ಪೂರ್ಣಗೊಂಡಿದ್ದರೆ ಜ. 26ರಂದು ಉದ್ಘಾಟಿಸಬೇಕು. ಪೂರ್ಣಗೊಳ್ಳದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸುವಾಗ ಬೋಗಸ್ ಮಾಡಬಾರದು. ಈಗಾಗಲೇ ಕಂಪ್ಯೂಟರ್‌ನಲ್ಲಿ ನಕಲಾಗಿ ದಾಖಲಿಸಿರುವ ಫಲಾನುಭವಿಗಳ ಹೆಸರನ್ನು ರದ್ದುಪಡಿಸಬೇಕು. ಹೊಸದಾಗಿ ಎಲ್ಲ ಗ್ರಾ.ಪಂಗಳಲ್ಲಿ ತಿಂಗಳಿಗೆ 50ರಂತೆ ಹೊಸದಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಗ್ರಾ.ಪಂಗಳಲ್ಲಿರುವ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಪಿಡಿಒಗಳು ನಿಮ್ಮ ಅಧಿಕಾರ ನೀಡಬಾರದು. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ನಿಮಗಿದೆ. ನೀವು ಅವರಿಗೆ ಅಧಿಕಾರ ನೀಡಿದರೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂರಾಗುತ್ತದೆ. ಡೊಂಗಲ್ ತೆಗೆದುಕೊಳ್ಳದೇ ಇರುವವರು, ಕಡ್ಡಯಾವಾಗಿ ಪಡೆದುಕೊಳ್ಳಬೇಕು. ಡೊಂಗಲ್ ಇಲ್ಲದಿದ್ದರೆ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಕೃಷಿ ಕೆಲಸಗಳು ಮುಗಿಯುವ ಹಂತದಲ್ಲಿವೆ. ಬರಗಾಲ ಇರುವುದರಿಂದ ಕೃಷಿ ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ನರೇಗಾ ಯೋಜನೆ ಅಡಿಯಲ್ಲಿ ಬರ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ತಾಲ್ಲೂಕಿನಲ್ಲಿ ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ನಿರ್ಮಿಸಲಾಗಿದೆ. ಅವುಗಳನ್ನು ಸರಿಯಾಗಿ ನಿರ್ವಹಿಸಬೇಕು. ಸರ್ಕಾರ ನಿಗದಿ ಪಡಿಸಿದ ಆಹಾರದ ಪದ್ಧತಿಯ ಪ್ರಕಾರ ಉಪಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

15ನೇ ಹಣಕಾಸಿನಲ್ಲಿ ಅಗತ್ಯವಿದ್ದರೆ ಮಾತ್ರ ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು. ನರೇಗಾ ಅಡಿಯಲ್ಲಿ ಕಲ್ಯಾಣಿ ಬಾವಿಗಳನ್ನು ಮಾಶಾಳ, ಭೈರಾಮಡಗಿ, ದೇವಲ ಗಾಣಗಾಪುರಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ ಗ್ರಾ.ಪಂ.ಗಳಲ್ಲಿನ ಕಲ್ಯಾಣಿಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಬೇಕು. ತಾಲ್ಲೂಕಿನಲ್ಲಿ ಕೇವಲ 7 ಗ್ರಾ.ಪಂಗಳಲ್ಲಿ ಗ್ರಂಥಾಲಯ ಕಟ್ಟಡಗಳಿವೆ. ಇನ್ನುಳಿದ ಕಡೆಗಳಲ್ಲಿ ಕಟ್ಟಡಗಳ ನಿರ್ಮಾಣ ಮಡಲಾಗುವುದು ಎಂದು ಹೇಳಿದರು.

ಸಿಇಒ ಅವರು, ಕುಡಿಯುವ ನೀರಿನ ಬಗ್ಗೆ ಮಾಹಿತಿ ಕೇಳಿದಾಗ, ಸದ್ಯಕ್ಕೆ ಕುಡಿಯುವ ನೀರಿನ ತೊಂದರೆಯಿಲ್ಲ ಎಂದು ಮಾಹಿತಿ ನೀಡಿದರು.

ಸಭೆಗೆ ಬಾರದ ಪಿಡಿಒಗಳಿಗೆ ನೋಟಿಸ್ ನೀಡಲು ಇಒ ಬಾಬುರಾವ ಜ್ಯೋತಿ ಅವರಿಗೆ ಸೂಚಿಸಿದರು. ಪ್ರತಿ ಗ್ರಾ.ಪಂಗಳ ಗ್ರಂಥಾಲಯಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಾದಿಲ್ವಾರು ಬಿಲ್ ಪಾವತಿಸಲು ಕೆಟು ಬಿಲ್‌ನಲ್ಲಿಯೇ ಬಳಸಿಕೊಳ್ಳಬೇಕು ಎಂದು ಪಿಡಿಒಗಳಿಗೆ ಆದೇಶಿಸಿದರು‌.

ತಾ.ಪಂ ಇಒ ಬಾಬುರಾವ ಜ್ಯೋತಿ, ನರೇಗಾ ಸಹಾಯಕ ನಿರ್ದೇಶಕ ರಮೇಶ ಪಾಟೀಲ, ಪಿಡಿಒಗಳಾದ ಶಂಕರ ದ್ಯಾಮಣ್ಣ, ಮಹಾಂತೇಶ ಯಾಡಗಿ, ಭೌರಮ್ಮ ಕುಂಬಾರ, ಚಿದಾನಂದ ಆಲೆಗಾಂವ, ಕರೆಪ್ಪ ಪೂಜಾರಿ, ಮಹಾಂತೇಶ ಸಾಲಿಮಠ, ಕರೆಪ್ಪ ಪೂಜಾರಿ ಪಾಲ್ಗೊಂಡಿದ್ದರು.

ಪಿಡಿಒಗೆ ಶಿಸ್ತಿನ ಪಾಠಮಾಡಿದ ಸಿಇಒ: ತಾ.ಪಂ ಸಭಾಂಗಣದಲ್ಲಿ ಸೋಮವಾರ ಗ್ರಾ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಬಡದಾಳ ಗ್ರಾ.ಪಂ  ಪಿಡಿಒ ಕರೆಪ್ಪ ಪೂಜಾರಿ ಅವರು ಸಭೆಗೆ ಮಾಹಿತಿ ನೀಡುವಾಗ ತಮ್ಮ ಅಂಗಿಯ ಗುಂಡಿ ಹಾಕಿರಲಿಲ್ಲ. ಇದನ್ನು ಗಮನಿಸಿದ ಸಿಇಒ ಅವರು ಸರಿಯಾಗಿ ಅಂಗಿ ಗುಂಡಿ ಹಾಕಿಕೊಂಡು, ಶಿಸ್ತಿನಿಂದ ಇರಬೇಕು ಎಂದು ಸೂಚಿಸಿದರು.

ಅಫಜಲಪುರ ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು
ಅಫಜಲಪುರ ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT