ಮಂಗಳವಾರ, ಸೆಪ್ಟೆಂಬರ್ 17, 2019
24 °C
ಚಿತ್ತಾಪುರ ರೈಲು ನಿಲ್ದಾಣದಲ್ಲಿ ಹಳಿಯಲ್ಲಿದ್ದಾಗಲೇ ಚಲಿಸಿದ ಗೂಡ್ಸ್‌ ರೈಲು

ರೈಲಿನಡಿ ಸಿಲುಕಿದ ವೃದ್ಧೆ ಪಾರು

Published:
Updated:
Prajavani

ಚಿತ್ತಾಪುರ: ಪಟ್ಟಣದ ರೈಲು ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಗೂಡ್ಸ್ ರೈಲಿನಡಿ ಸಿಲುಕಿದ ಸ್ಟೇಷನ್ ತಾಂಡಾದ ಮಾನಿಬಾಯಿ ಚಂದರ್ ಚವಾಣ್ ಎಂಬ ವೃದ್ಧೆ ಪವಾಡ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೃದ್ಧೆಯು ನಿಲ್ದಾಣದಿಂದ ಮನೆಗೆ ಹೋಗಲೆಂದು ಹಳಿಗಳನ್ನು ದಾಟುತ್ತಿದ್ದರು. ಈ ಸಂದರ್ಭದಲ್ಲಿ ಗೂಡ್ಸ್‌ ರೈಲು ಚಲಿಸಲಾರಂಭಿಸಿತು. ಹಳಿಯನ್ನು ದಾಟಲು ಅಸಾಧ್ಯವಾಗಿ ಹಳಿಗಳ ಮಧ್ಯೆಯೇ ಮಲಗಿದಳು. ರೈಲು ಮುಂದೆ ಸಾಗಿದ ಬಳಿಕ ನಿಧಾನವಾಗಿ ಮೇಲಕ್ಕೆ ಎದ್ದಿದ್ದಾಳೆ. ಏಕಾಏಕಿ ಜಲ್ಲಿಕಲ್ಲುಗಳ ಮೇಲೆ ಮಲಗಿದ್ದರಿಂದ ಮುಂಗೈಗೆ ಗಾಯಗಳಾಗಿವೆ.

ಮಾತು ಬರಲ್ಲ, ಕಿವಿ ಕೇಳಲ್ಲ: ಮಾನಿಬಾಯಿ ಅವರ ಮನೆಗೆ ಮಂಗಳವಾರ ‘ಪ್ರಜಾವಾಣಿ’ ಭೇಟಿ ನೀಡಿದಾಗ ಅವರಿಗೆ ಸರಿಯಾಗಿ ಮಾತನಾಡಲು ಬಾರದಿರುವುದು ಮತ್ತು ಕಿವಿ ಕೇಳದಿರುವ ಸಂಗತಿ ಬೆಳಕಿಗೆ ಬಂತು.

ಎಲ್ಲಿಗೆ ಹೋಗಿದ್ದೆ, ಯಾಕೆ ಹೋಗಿದ್ದೆ ಎಂದು ಪ್ರಶ್ನಿಸಿದಾಗ ಮಾತ್ರೆ ತರಲು ಹೋಗಿದ್ದೆ ಎಂಬಂತೆ ಸನ್ನೆ ಮಾಡಿ ಮಾತ್ರೆ ತೋರಿಸಿದರು. ಅನಾರೋಗ್ಯವೂ ಅವರನ್ನು ಕಾಡುತ್ತಿದೆ.

ಸ್ಟೇಷನ್ ತಾಂಡಾದ ಒಂದು ಚಿಕ್ಕ ಕೋಣೆಯಲ್ಲಿ ಒಂಟಿಯಾಗಿದ್ದಾರೆ. ಇವರಿಗೆ ಮಕ್ಕಳಾಗಿಲ್ಲ ಎಂದು ಗಂಡ ಚಂದರ್ ಎರಡನೆ ಮದುವೆ ಮಾಡಿಕೊಂಡು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಪುತ್ರರೊಂದಿಗೆ ಮುಂಬೈ ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ತಾಂಡಾ ಜನರು ಹೇಳಿದರು.

ಮನೆಯಲ್ಲಿ ದವಸಧಾನ್ಯವೂ ಇಲ್ಲ. ಹಸಿವಾದಾಗ ಅಕ್ಕಪಕ್ಕದ ಮನೆಯವರ ಹತ್ತಿರ ಬೇಡಿ ಹಸಿವು ನೀಗಿಸಿಕೊಳ್ಳುತ್ತಾರೆ. ಯಾರಾದರೂ ಊಟ ತಂದು ಕೊಟ್ಟರೆ ಊಟ ಮಾಡುತ್ತಾರೆ. ರೈಲು ನಿಲ್ದಾಣಕ್ಕೆ ತೆರಳಿ ಜನರಿಂದ ಹಣ ಬೇಡಿಕೊಂಡು ಬಂದು ಜೀವನ ಸಾಗಿಸುತ್ತಿದ್ದಾರೆ ಎಂದು ತಾಂಡಾದ ದ್ರೌಪದಿ ರಾಠೋಡ್, ಈಶ್ವರ ರಾಠೋಡ್ ತಿಳಿಸಿದರು.

ಮೇಲಾಧಿಕಾರಿಗೆ ಮಾಹಿತಿ: ‘ಗೂಡ್ಸ್ ರೈಲಿನಡಿ ಮಹಿಳೆ ಸಿಲುಕಿದ ಘಟನೆಯನ್ನು ಇಲಾಖೆಯ ವಿಭಾಗೀಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜನರು ನಿತ್ಯ ಈ ರೀತಿ ನಿಂತ ರೈಲಿನ ಕೆಳಗಡೆಯಿಂದ ಹಳಿ ದಾಟುವ ಸಾಹಸ ಮಾಡುತ್ತಲೇ ಇರುತ್ತಾರೆ. ಇದು ಅಪರಾಧ. ಏನಾದರೂ ದುರ್ಘಟನೆ ನಡೆದರೆ ಇಲಾಖೆ ಹೊಣೆಯಲ್ಲ’ ಎಂದು ಸ್ಟೇಷನ್ ಮಾಸ್ಟರ್ ಸಂತೋಷಕುಮಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

Post Comments (+)