ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ಈರುಳ್ಳಿ ಬೆಲೆ ಏರಿಕೆ: ಲಾಭದ ನಿರೀಕ್ಷೆಯಲ್ಲಿ ರೈತರು

Published 24 ನವೆಂಬರ್ 2023, 5:52 IST
Last Updated 24 ನವೆಂಬರ್ 2023, 5:52 IST
ಅಕ್ಷರ ಗಾತ್ರ

ಚಿಂಚೋಳಿ: ಸಾಮಾನ್ಯ ವರ್ಷಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಆದರೆ ಅಧಿಕ ವರ್ಷದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತದೆ ಎಂಬ ನಂಬಿಕೆ ಈ ಭಾಗದ ರೈತರಲ್ಲಿದೆ. ಪ್ರಸಕ್ತ ವರ್ಷದಲ್ಲಿಯೂ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ರೈತರು ಲಾಭದಲ್ಲಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ₹ 4ರಿಂದ 6 ಸಾವಿರವರೆಗೆ ದರವಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ನೀರಾವರಿ ಸೌಲಭ್ಯ ಇರುವ ರೈತರು, ಮುಂಗಾರಿನ ಹೆಸರು, ಉದ್ದು, ಸೋಯಾ ರಾಶಿ ಮಾಡಿ, ಹೊಲವನ್ನು ಹದಗೊಳಿಸಿ ಈರುಳ್ಳಿ ಬೇಸಾಯದಲ್ಲಿ ತೊಡಗಿದ್ದಾರೆ.

‘ಹೆಸರು ರಾಶಿ ಮಾಡಿದ್ದು, ಮೂರು ಎಕರೆಯಲ್ಲಿ ಈರುಳ್ಳಿ ಬೇಸಾಯ ನಡೆಸುತ್ತಿದ್ದೇನೆ. ಒಂದುವರೆ ಎಕರೆಯಲ್ಲಿ ಒಂದು ತಿಂಗಳ ಹಿಂದೆಯೇ ಸಸಿ ಊರಲಾಗಿದ್ದು, ಸದ್ಯ ಬೆಳೆ ಬೆಳವಣಿಗೆ ಹಂತದಲ್ಲಿದೆ. ಉಳಿದ ಒಂದುವರೆ ಎಕರೆಯಲ್ಲಿ ಒಂದು ತಿಂಗಳು ತಡವಾಗಿ ನಾಟಿ ಮಾಡಲಾಗಿದೆ ಎಂದು ಚಿಕ್ಕಲಿಂಗದಳ್ಳಿ ರೈತ ಅಶೋಕ ಈದಲಾಯಿ ತಿಳಿಸಿದರು.

ಸಮೀಪದ ಹೈದರಾಬಾದ್‌ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಪ್ರತಿ ಕ್ವಿಂಟಲ್‌ಗೆ ಗರಿಷ್ಠ 8 ಸಾವಿರ ಲಭಿಸಿದರೆ, ಕನಿಷ್ಠ 4 ಸಾವಿರ ದರವಿದೆ. ಹೀಗಾಗಿ ಈ ಬಾರಿ ಉತ್ತಮ ಲಾಭ ದೊರೆಯುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ 550ರಿಂದ 600 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೇಸಾಯವಿದೆ. ಕಳೆದ ವರ್ಷದ ಅದರ ಪ್ರಮಾಣ 400 ಹೆಕ್ಟೇರ್ ಇತ್ತು. ಅಧಿಕ ಮಾಸ ಬಂದಿದ್ದರಿಂದ ಪ್ರಸಕ್ತ ವರ್ಷ 200 ಹೆಕ್ಟೇರ್ ಬೇಸಾಯ ವಿಸ್ತರಿಸಿದೆ. ಇನ್ನೂ ರೈತರು ಅಲ್ಲಲ್ಲಿ ಈರುಳ್ಳಿ ಬೇಸಾಯ ನಡೆಸುತ್ತಿದ್ದಾರೆ.

ತಾಲ್ಲೂಕಿನ ಚಿಕ್ಕಲಿಂಗದಳ್ಳಿ, ದಸ್ತಾಪುರ, ಚಿಮ್ಮಾಈದಲಾಯಿ, ಚಿಮ್ಮನಚೋಡ, ಹಸರಗುಂಡಗಿ, ದೇಗಲಮಡಿ, ಐನೋಳ್ಳಿ, ನಾಗಾಈದ್ಲಾಯಿ, ಪಟಪಳ್ಳಿ, ಸಾಲೇಬೀರನಹಳ್ಳಿ, ಐನಾಪುರ, ಸಲಗರ ಬಸಂತಪುರ, ಬೆನಕೆಪಳ್ಳಿ, ತುಮಕುಂಟಾ, ಚಂದ್ರಂಪಳ್ಳಿ, ಕೊಳ್ಳೂರ ಹಾಗೂ ಕೋಡ್ಲಿ ವಲಯದ ಗ್ರಾಮಗಳಲ್ಲೂ ಮೊದಲಾದ ಕಡೆ ಈರುಳ್ಳಿ ಬೇಸಾಯ ನಡೆಸಲಾಗುತ್ತಿದೆ.

ಸಸಿಗೂ ಬೇಡಿಕೆ ಹೆಚ್ಚು: ಒಂದು ಎಕರೆ ಈರುಳ್ಳಿ ಬೇಸಾಯಕ್ಕೆ ಅಂದಾಜು 30 ಮಡಿ ಸಸಿ ಖರೀದಿಸಬೇಕು ಅಥವಾ ಬೀಜ ಹಾಕಿ, ಸಸಿ ಬೆಳೆಸಬೇಕು. 30 ಮಡಿಗಳಲ್ಲಿನ ಸಸಿ ಸುಮಾರು 300 ಮಡಿಗಳಲ್ಲಿ ನಾಟಿಗೆ ಉಪಯೋಗವಾಗುತ್ತದೆ. ಒಂದು ಎಕರೆಗೆ 300 ಮಡಿ ಕೂಡುತ್ತವೆ. 30 ಮಡಿ ಸಸಿ ಬೇಸಾಯಕ್ಕೆ ಸುಮಾರು 6ರಿಂದ 7 ಸಾವಿರ ಖರ್ಚು ಬರುತ್ತದೆ. ಸಸಿ ಮಾರಾಟಗಾರರು 30 ಮಡಿಯ ಸಸಿ ಸುಮಾರು 14ರಿಂದ 15ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪ್ರಸಕ್ತ ವರ್ಷ ಈರುಳ್ಳಿ ಸಸಿಗೂ ಹೆಚ್ಚಿನ ಬೇಡಿಕೆ ಬಂದಿದೆ.

ಕಳೆದ ವರ್ಷ ಆರಂಭದಲ್ಲಿ ಸಸಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಈ ವರ್ಷ ಆರಂಭದಲ್ಲಿ ಬೇಡಿಕೆ ಹೆಚ್ಚಾಗಿರಲಿಲ್ಲ. ಈಗ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಮುಕರಂಬಾದ ಈರುಳ್ಳಿ ಬೆಳೆಗಾರರಾದ ಕಾಶಿನಾಥ ಗೋಗಿ.

ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಗ್ರಾಮದ ಅಶೋಕ ಈದಲಾಯಿ ಅವರ ತೋಟದಲ್ಲಿ ಹುಲುಸಾಗಿ ಬೆಳೆದ ಈರುಳ್ಳಿ ಬೆಳೆ
ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ಗ್ರಾಮದ ಅಶೋಕ ಈದಲಾಯಿ ಅವರ ತೋಟದಲ್ಲಿ ಹುಲುಸಾಗಿ ಬೆಳೆದ ಈರುಳ್ಳಿ ಬೆಳೆ
600 ಹೆಕ್ಟೇರ್‌ನಲ್ಲಿ ಈರುಳ್ಳಿ ಬೇಸಾಯ ಅಧಿಕ ಬೆಲೆ ಸಿಗುವ ವಿಶ್ವಾಸದಲ್ಲಿ ರೈತರು ಈರುಳ್ಳಿ ಸಸಿಗೂ ಹೆಚ್ಚಿದ ಬೇಡಿಕೆ
ನಾವು ಹಲವು ವರ್ಷಗಳಿಂದ ಈರುಳ್ಳಿ ಬೇಸಾಯ ನಡೆಸುತ್ತಿದ್ದೇವೆ. ಅಧಿಕ ಮಾಸದ ವರ್ಷದಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತದೆ. ನಮ್ಮ ಹೊಲದಲ್ಲಿ 3 ಎಕರೆಯಲ್ಲಿ ಈರುಳ್ಳಿ ಬೇಸಾಯ ಮಾಡಿದ್ದೇನೆ
ಅಶೋಕ ಈದಲಾಯಿ ಈರುಳ್ಳಿ ಬೆಳೆಗಾರ ಚಿಕ್ಕಲಿಂಗದಳ್ಳಿ
ಈರುಳ್ಳಿ ಬೇಸಾಯ ಕ್ಷೇತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಸುಮಾರು 200 ಹೆಕ್ಟೇರ್ ಅಧಿಕವಾಗಿದೆ. ತಾಲ್ಲೂಕಿನಲ್ಲಿ 600 ಹೆಕ್ಟೇರ್‌ನಲ್ಲಿ ಬೇಸಾಯ ನಡೆಯುತ್ತಿದೆ
ರಾಜಕುಮಾರ ಗೋವಿನ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಚಿಂಚೋಳಿ
ಈರುಳ್ಳಿ ದರ; ಪ್ರತಿ ಕ್ವಿಂಟಲ್‌
ಹುಮನಾಬಾದ್‌ ; ₹3500 ಚಿಕ್ಕಮಗಳೂರು; ₹4902 ಮಾಲೂರು; ₹5000 ಬೆಂಗಳೂರು; ₹4000 ಬಂಗಾರಪೇಟೆ; ₹4700 ಹಾಸನ; ₹5600 ರಾಮನಗರ; ₹5000 ತುಮಕೂರು; ₹4500 ಶಿವಮೊಗ್ಗ; ₹5000 ಉಡುಪಿ; ₹5200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT