ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಟೊಮೆಟೊ ಸಾಲಿನಲ್ಲಿ ಈರುಳ್ಳಿ ದರ

ಶತಕದತ್ತ ಟೊಮೆಟೊ, ಹಸಿ ಮೆಣಸಿನಕಾಯಿ ₹120, ಬಿನ್ಸ್‌ ₹180
Published 12 ಜೂನ್ 2024, 6:03 IST
Last Updated 12 ಜೂನ್ 2024, 6:03 IST
ಅಕ್ಷರ ಗಾತ್ರ

ಕಲಬುರಗಿ: ನಿರಂತರ ಮಳೆಯಿಂದ ತರಕಾರಿ, ಸೊಪ್ಪುಗಳಿಗೆ ಹಾನಿ ಹಾಗೂ ಆವಕ ಕಡಿಮೆಯಾಗಿರುವುದರಿಂದ ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ತರಕಾರಿಗಳ ಬೆಲೆ ಗಗನಕ್ಕೆ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ.

ಕಳೆದ ವಾರ ₹40ರಿಂದ ₹50ರ ಆಸು ಪಾಸಿನಲ್ಲಿದ್ದ ಟೊಮೆಟೊ ಈಗ ಕೆಜಿಗೆ ₹80ರಿಂದ ₹90ವರೆಗೆ ಮಾರಾಟವಾಗುತ್ತಿದ್ದು, ₹25ರಿಂದ ₹30 ಇದ್ದ ಉತ್ತಮ ಗುಣಮಟ್ಟದ ಈರುಳ್ಳಿ ದರ (ಮಂಗಳವಾರ) ಏಕಾಏಕಿ ₹50ರಿಂದ ₹60ಕ್ಕೆ ಏರಿಕೆಯಾಗಿದೆ.

ಕೆ.ಜಿ.ಗೆ ಹಸಿ ಮೆಣಸಿನಕಾಯಿ ₹120, ಬದನೆಕಾಯಿ ₹100, ಕ್ಯಾರೆಟ್ ₹80, ಸೌತೆಕಾಯಿ ₹100, ಟೊಮೊಟೊ ₹80, ಹಾಗಲಕಾಯಿ ₹80, ಬೆಂಡೆಕಾಯಿ ₹80, ಹಿರೇಕಾಯಿ ₹100–₹120, ಆಲೂಗಡ್ಡೆ ₹60, ಬೆಳ್ಳುಳ್ಳಿ ₹200, ಹಸಿ ಶುಂಠಿ ₹260, ಕ್ಯಾಬೆಜ್ ಒಂದಕ್ಕೆ ₹ 40, ಫ್ಲಾವರ್ ₹40, ತುಪ್ಪದ ಹೀರೆಕಾಯಿ ₹80 ಕೆಜಿಗೆ ಮಾರಾಟ ಮಾಡಲಾಗುತ್ತಿದೆ.

ಸೊಪ್ಪುಗಳ ಬೆಲೆಯಲ್ಲಿ ಭಾರಿ ಏರಿಕೆ: ಕಳೆದ ವಾರ ಕೊತ್ತಂಬರಿ ಒಂದು ಕಟ್ಟಿಗೆ ₹10ರಿಂದ ₹20ಕ್ಕೆ ಮಾರಾಟವಾಗಿದ್ದರೆ, ಈ ವಾರ ₹20ರಿಂದ ₹30ರವರೆಗೆ ಮಾರಾಟವಾಗುತ್ತಿದೆ. ಮೆಂತೆ ಸೊಪ್ಪು ₹20, ಪಾಲಕ ಸೊಪ್ಪು ₹20, ರಾಜಗಿರಿ ಸೊಪ್ಪು ₹20, ಪೂದಿನಾ ಸೊಪ್ಪು ₹30 ದರದಲ್ಲಿ ಮಾರಾಟವಾಗುತ್ತಿದೆ. ಪುಂಡಿಪಲ್ಯೆ ₹15ರಿಂದ ₹20ಗೆ ಒಂದು ಕಟ್ಟು ಬಿಕರಿಯಾಗುತ್ತಿದೆ.

ಕಣ್ಣೀರು ತರಿಸುತ್ತ ಈರುಳ್ಳಿ: ಕಳೆದ ತಿಂಗಳಿಂದ ಪ್ರತಿ ಕೆಜಿಗೆ ₹20ರಿಂದ ₹30 ದರದಲ್ಲಿ ಸ್ಥಿರವಾಗಿದ್ದ ಈರುಳ್ಳಿ ಬೆಲೆ ಎರಡರಿಂದ ಮೂರು ದಿನಗಳಲ್ಲಿ ₹20 ರಿಂದ ₹30 ಬೆಲೆ ಏರಿಕೆ ಕಂಡು ₹50ರಿಂದ ₹60ಗೆ ಮಾರಾಟವಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಕಾರಣ ವಿದೇಶಗಳಿಗೆ ರಪ್ತು ಹೆಚ್ಚಳವಾಗುವ ಸಾಧ್ಯತೆ ಇದ್ದು, ನಿರಂತರ ಮಳೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣ ಈರುಳ್ಳಿ ಬರುತ್ತಿಲ್ಲ. ಆದ್ದರಿಂದ ಇನ್ನಷ್ಟು ದರ ಏರಿಕೆಯಾಗುವ ಸಂಭವ ಇದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ಹಣಮಂತ.

ಸೊಪ್ಪುಗಳಿಗೆ ಬೇಡಿಕೆ ಹೆಚ್ಚಿದ್ದು ಮಳೆಯ ಕೊರತೆಯಿಂದ ಆವಕ ಕಡಿಮೆಯಾಗಿ ದರ ದುಪ್ಪಟ್ಟಾಗಿದೆ. ವರ್ಷದ ಈ ಅವಧಿಯಲ್ಲಿ ಸಾಮಾನ್ಯವಾಗಿ ಸೊಪ್ಪುಗಳ ದರ ಹೆಚ್ಚಳವಾಗಿರುವುತ್ತದೆ.
ಶಿವರಾಜ, ತರಕಾರಿ ಸೊಪ್ಪು ವ್ಯಾಪಾರಿ
ತರಕಾರಿ ಹಾಗೂ ಸೊಪ್ಪುಗಳ ಬೆಲೆ ದಿಢೀರ್‌ ಏರಿಕೆಯಾಗಿ ಆರ್ಥಿಕ ಹೊರೆಯಾಗುತ್ತಿದೆ. ವಾರಕ್ಕಾಗುವಷ್ಟು ತರಕಾರಿ ಖರೀದಿ ಮಾಡಬೇಕಾದರೂ ಕನಿಷ್ಟ ₹500 ಬೇಕಾಗಿದೆ.
ಶಿವಯೋಗಿ, ಓಂ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT