ಶುಕ್ರವಾರ, ಜೂಲೈ 3, 2020
23 °C

ಕಲಬುರ್ಗಿ: ಇಷ್ಟಲಿಂಗ ನಿರೀಕ್ಷಣೆಯಿಂದ ಭಾವಶುದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಇಷ್ಟಲಿಂಗವನ್ನು ನಿರೀಕ್ಷಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿನ ನವಚಕ್ರಗಳು ಜಾಗ್ರತವಾಗಿ ನವಚೈತನ್ಯ ಮೂಡುತ್ತದೆ. ಇಷ್ಟಲಿಂಗ ಪೂಜೆಯಿಂದ ಇಚ್ಛಾಶಕ್ತಿ ಹೆಚ್ಚುತ್ತದೆ. ನುಡಿಯಲ್ಲಿ ಮೃದುತ್ವ ಬರುತ್ತದೆ’ ಎಂದು ಬೀದರ್‌ನ ಬಸವ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ.ಗಂಗಾಂಬಿಕಾ ಪಾಟೀಲ ಹೇಳಿದರು.

ಕಲಬುರ್ಗಿಯಲ್ಲಿ ಭಾನುವಾರ ನಡೆದ ಬಸವ ಸಮಿತಿಯ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ 633ನೇ ಆನ್‌ಲೈನ್ ದತ್ತಿ ಕಾರ್ಯಕ್ರಮದಲ್ಲಿ ‘ಬಸವ ತತ್ವಜ್ಞಾನದಲ್ಲಿ ಇಷ್ಟಲಿಂಗ ಪರಿಕಲ್ಪನೆ’ ಕುರಿತು ಅವರು ಮಾತನಾಡಿದರು.

‘ಇಷ್ಟಲಿಂಗ ಮನುಷ್ಯನ ಶರೀರವನ್ನು ವ್ಯಾಪಿಸಿದೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಮೂರು ಮುಖ್ಯವಾಗಿವೆ. ನೋಟದ ಭಕ್ತಿ ಬಸವಣ್ಣನಿಂದಾಯಿತು ಎಂದು ಶಿವಯೋಗಿ ಸಿದ್ಧರಾಮೇಶ್ವರರು ಹೇಳಿದ್ದಾರೆ. ಕೈಯಲ್ಲಿ ಇರುವ ಲಿಂಗ ಮನುಷ್ಯನ ಕಷ್ಟಗಳನ್ನು ನಿವಾರಿಸುತ್ತದೆ. ಲಿಂಗವನ್ನು ಎಡಗೈಯಲ್ಲಿ ಇಟ್ಟು ನಿರೀಕ್ಷಣೆ ಮಾಡಿದರೆ ಏಕಾಗ್ರತೆ ಮೂಡಿ, ಮನಸ್ಸು ನಿರುಮ್ಮಳವಾಗಿ ಭಾವ ಶುದ್ಧಗೊಳ್ಳುವುದು ಅನುಭವಕ್ಕೆ ಬರುತ್ತದೆ’ ಎಂದರು.

‘ಮನಸ್ಸು ಚಂಚಲವಾಗಿದೆ. ಅದನ್ನು ಇಷ್ಟಲಿಂಗ ಪೂಜೆಯ ಮೂಲಕ ನಿಗ್ರಹಿಸಬೇಕು. ಮನುಷ್ಯ ಲಿಂಗವನ್ನು ನೋಡುತ್ತ ನೋಡುತ್ತ ಲಿಂಗವೇ ತಾನಾಗುತ್ತಾನೆ. ಅಂಧಾನುಕರಣೆಗಳನ್ನು ಬಿಟ್ಟು ವೈಚಾರಿಕವಾದ, ವೈಜ್ಞಾನಿಕವಾದ ಇಷ್ಟಲಿಂಗ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಾ.ಜಯಶ್ರಿ ದಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿಯ ಅಧ್ಯಕ್ಷೆ, ದತ್ತಿ ದಾಸೋಹಿ ಆದ ಡಾ.ವಿಲಾಸವತಿ ಖೂಬಾ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು