ಮಂಗಳವಾರ, ಮೇ 17, 2022
26 °C
ಗುವಿವಿ ಉಪ ಸಮಿತಿ ವರದಿ ಸಲ್ಲಿಸಿ ವರ್ಷವಾದರೂ ಬದಲಾಗದ ಪರಿಸ್ಥಿತಿ

ಸ್ನಾತಕೋತ್ತರ ಅಧ್ಯಯನ ಕೇಂದ್ರ ಯಾವಾಗ?

ಜಗನ್ನಾಥ ಡಿ.ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನಲ್ಲೇ ಸ್ನಾತಕೋತ್ತರ ಅಧ್ಯಯನ ಕೇಂದ್ರವಿಲ್ಲದ ಕಾರಣ ಇಲ್ಲಿನ ಯುವಜನರಿಗೆ ಸ್ನಾತಕೋತ್ತರ ಅಧ್ಯಯನ ಮಾಡುವ ಕನಸು ನನಸಾಗುತ್ತಿಲ್ಲ. ಹೀಗಾಗಿ ಅವರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.

ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜ.28ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಸಮಿತಿ ಅಧ್ಯಕ್ಷ ಪ್ರೊ.ಲಕ್ಷ್ಮಣ ರಾಜನಾಳಕರ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲಿಸಿತ್ತು.

‘ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಚಿಂಚೋಳಿಯಲ್ಲಿ ಪ್ರಾರಂಭಿಸಬಹುದು. ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವಾಣಿಜ್ಯ ಅಧ್ಯಯನ ವಿಭಾಗದ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಲು ಸೂಕ್ತವಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ತರಗತಿ ನಡೆಸಲು ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 7 ಕೊಠಡಿಗಳನ್ನು ಪರಿಶೀಲಿಸಲಾಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಹರ್ಷ ಉಂಟು ಮಾಡಿತ್ತು. ಆದರೆ, ವರ್ಷ ಕಳೆದರೂ ಅಧ್ಯಯನ ಕೇಂದ್ರ ಇನ್ನೂ ಇಲ್ಲಿ ಆರಂಭಗೊಂಡಿಲ್ಲ.

ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ ಅಗತ್ಯ ಸರ್ಕಾರಿ ಜಮೀನನ್ನು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಶೋಧ ನಡೆಸಿದ್ದರು. ಪ್ರಸ್ತುತ ಚಿಂಚೋಳಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 587, ಹೈ–ಕ ಶಿಕ್ಷಣ ಸಂಸ್ಥೆಯ ಸಿ.ಬಿ ಪಾಟೀಲ ಕಾಲೇಜಿನ 348, ಸುಲೇಪೇಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 200ಕ್ಕೂ ಹೆಚ್ಚು ಕಾಳಗಿಯಲ್ಲಿ 300ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳಿದ್ದಾರೆ.

‘ಉನ್ನತ ಶಿಕ್ಷಣ ಪಡೆಯಲು ಕಲಬುರ್ಗಿ ಅಥವಾ ಬೀದರ್‌ಗೆ ಹೋಗಬೇಕಾದ ಪರಿಸ್ಥಿತಿಯಿದೆ. ಕಲಬುರ್ಗಿಯಿಂದ 100 ಕಿ.ಮೀ. ಅಂತರದಲ್ಲಿ ಇರುವ ಚಿಂಚೋಳಿ ತಾಲ್ಲೂಕು ಕೇಂದ್ರದ ಯುವಜನರು ಸ್ನಾತಕೋತ್ತರ ವ್ಯಾಸಂಗಕ್ಕೆ ದೂರದ ನಗರಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ದೂರದ ನೆಪವೊಡ್ಡಿ ಯುವತಿಯರನ್ನು ಮದುವೆ ಮಾಡಿಸ ಲಾಗುತ್ತದೆ. ಇಲ್ಲಿಯೇ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಯಾದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಿ.ಬಿ.ಪಾಟೀಲ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಶೈಲ ನಾಗರಾಳ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು