ಮಂಗಳವಾರ, ಜನವರಿ 31, 2023
18 °C

ಗುಣಮಟ್ಟದ ಫಾರ್ಮಸಿಸ್ಟ್ ಅಗತ್ಯ; ಡಾ.ಶಂಕರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ವೈದ್ಯರು ಮತ್ತು ಫಾರ್ಮಸಿಸ್ಟ್‌ಗಳು ವೈದ್ಯಕೀಯ ಚಿಕಿತ್ಸೆಯ ಎರಡು ಕಣ್ಣಾಗಿದ್ದು, ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಫಾರ್ಮಸಿಸ್ಟ್‌ ಪದವೀಧರರ ಸಂಖ್ಯೆ ಕ್ಷೀಣಿಸುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲಬುರಗಿ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕರಪ್ಪ ಎಸ್‌.ಮೈಲಾರೆ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾ ಶಾಖೆ ಆಯೋಜಿಸಿದ್ದ ವಿಶ್ವ ಫಾರ್ಮಸಿಸ್ಟ್‌ ದಿನಾಚರಣೆ, ನಿವೃತ್ತರು ಹಾಗೂ ಪದೋನ್ನತಿ ಪಡದವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫಾರ್ಮಸಿಸ್ಟ್‌ ಕ್ಷೇತ್ರವು ಸಾಕಷ್ಟು ಮುಂದುವರೆದಿದೆ. ಆದರೆ, ಹೊಸದಾಗಿ ಬರುತ್ತಿರುವ ಫಾರ್ಮಸಿಸ್ಟ್‌ ಪದವೀಧರರಲ್ಲಿ ಗುಣಮಟ್ಟ ಕಾಣುತ್ತಿಲ್ಲ. ಶಿಕ್ಷಣ ಸಂಸ್ಥೆಗಳು ಸಹ ಕೇವಲ ಪದವಿ ಪ್ರಮಾಣ ಪತ್ರ ಕೊಡುತ್ತಿವೆಯೇ ಹೊರತು, ಗುಣಮಟ್ಟದ ಶಿಕ್ಷಣ ಕೊಡುತ್ತಿಲ್ಲ. ಗುಣಮಟ್ಟ ಕಾಯ್ದುಕೊಳ್ಳದೆ ಇದ್ದರೆ ಕೆಟ್ಟ ಹೆಸರು ಬರುತ್ತದೆ’ ಎಂದರು.

‘ಔಷಧಿಯ ಉತ್ಪಾದನೆಯಿಂದ ರೋಗಿ ಮಾತ್ರೆ ಸೇವಿಸುವವರೆಗೂ ಫಾರ್ಮಸಿಸ್ಟ್‌ಗಳ ಪಾತ್ರ ಬಹುಮುಖ್ಯವಾಗಿದೆ. ಎಷ್ಟೇ ಪರಿಣಿತ ವೈದ್ಯ ಇದ್ದರೂ ಸರಿಯಾದ ಔಷಧಿ ಕೊಡುವಲ್ಲಿ ಫಾರ್ಮಸಿಸ್ಟ್‌ ವಿಫಲವಾದರೆ ವೈದ್ಯರ ಶ್ರಮ ವ್ಯರ್ಥವಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಫಾರ್ಮಸಿಸ್ಟ್‌ಗಳು ಒಗ್ಗೂಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಅವಶ್ಯವಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ ಮಾತನಾಡಿ, ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಮುಂದಿನ ದಿನಗಳಲ್ಲಿ ಅನುದಾನ ಬರಲಿದೆ. ಒಮ್ಮ ಅನುದಾನ ಕೈಸೇರಿದರೆ ಫಾರ್ಮಸಿಸ್ಟ್‌ಗಳ ಅನುಕೂಲಕ್ಕಾಗಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಖರೀದಿಸಿ ಕೊಡಲಾಗುವುದು. ಕೆಳಹಂತದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಎಲ್ಲರೂ ಒಗ್ಗೂಡಿ, ಕೈಜೋಡಿಸಿ ಕೆಲಸ ಮಾಡಿಕೊಂಡು ಹೋಗಬೇಕಿದೆ’ ಎಂದು ಹೇಳಿದರು.

ಜಿಮ್ಸ್ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಜ್ಞ ಡಾ.ಅಂಬರಾಯ ರುದ್ರವಾಡಿ, ‘ಕಲಬುರಗಿ ಜಿಲ್ಲೆ ಮೆಡಿಕಲ್ ಹಬ್ ಆಗುವತ್ತ ಸಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಒಂದೇ ಒಂದು ಕೈಗಾರಿಕೆ ಇಲ್ಲ. ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆಯ ಕೈಗಾರಿಕಾ ಘಟಕ ಸ್ಥಾಪನೆಯತ್ತ ಎಲ್ಲರೂ ಚಿಂತನೆ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ನಿವೃತ್ತ ಅಧಿಕಾರಿಗಳು ಹಾಗೂ ಪದೋನ್ನತಿ ಪಡದವರನ್ನು ಸನ್ಮಾನಿಸಲಾಯಿತು. ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ.ಎಸ್‌ ದೇಸಾಯಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಕೆಸಿಟಿ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದ್ ಯೂನುಸ್ ಅಲಿ, ವೀರಭದ್ರೇಶ್ವರ ಫಾರ್ಮಸಿ ಕಾಲೇಜು ಪ್ರಾಂಶುಪಾಲರಾದ ಡಾ.ವೀಣಾ ಮಠ, ಸಂಘದ ಜಿಲ್ಲಾ ಅಧ್ಯಕ್ಷ ಜಿ.ಕೆ. ಪ್ರಕಾಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.