ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೆ ಉತ್ತಮ ಆಹಾರ, ವ್ಯಾಯಾಮ ಅಗತ್ಯ

ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿ ಅವರೊಂದಿಗೆ ಪ್ರಜಾವಾಣಿ ಫೋನ್ ಇನ್
Last Updated 28 ಜನವರಿ 2023, 6:33 IST
ಅಕ್ಷರ ಗಾತ್ರ

ಕಲಬುರಗಿ: ‘ರೋಗದಿಂದ ದೂರವಿರಲು ನಿಯಮಿತ, ಪೌಷ್ಠಿಕಾಂಶವುಳ್ಳ ಆಹಾರ, ನಿತ್ಯ ನಡಿಗೆ, ವ್ಯಾಯಾಮ ಅಗತ್ಯ. ಬಿಸಿಲಿನ ಬೇಗೆಯಿಂದ ದೇಹವನ್ನು ರಕ್ಷಿಸಿಕೊಳ್ಳಲು ನಿತ್ಯ 3 ರಿಂದ 4 ಲೀಟರ್ ನೀರು ಕುಡಿಯಬೇಕು’ ಎಂದು ಆಯುರ್ವೇದ ತಜ್ಞೆ ವೈದ್ಯ ಸಾಹಿತಿ ಡಾ. ವಸುಂಧರಾ ಭೂಪತಿ ಸಲಹೆ ನೀಡಿದರು.

ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಶುಕ್ರವಾರ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಆಧುನಿಕ ಜೀವನಶೈಲಿಯಿಂದ ಜನರಲ್ಲಿ ಬೊಜ್ಜು ಬೆಳೆಯುತ್ತಿದೆ. ನಿದ್ರಾಹೀನತೆ, ಅತಿಯಾದ ಖಾರವುಳ್ಳ ಆಹಾರ ಸೇವನೆ, ಅಡುಗೆ ಎಣ್ಣೆ, ಕರಿದ ಆಹಾರ, ತಿನಿಸುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ’ ಎಂದರು.

‘ಅತಿಯಾದ ಆಹಾರ ಸೇವಿಸುವ ಬದಲು ಆರೋಗ್ಯಕ್ಕೆ ಪೂರಕವಾಗಿ ನಿಯಮಿತವಾಗಿ ತರಕಾರಿ, ಹಣ್ಣುಗಳನ್ನು ಸೇವಿಸಿದರೆ, ದೀರ್ಘ ಕಾಲದವರೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಫೋನ್‌ ಇನ್‌ನಲ್ಲಿ ಕೇಳಲಾದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಲಾದ ಉತ್ತರಗಳು ಈ ಕೆಳಕಂಡಂತಿವೆ.

ಪ್ರಶ್ನೆ: ಜಾಸ್ತಿ ನೆಗಡಿಯಿಂದ ಮೂಗು ಕಟ್ಟಿಕೊಳ್ಳುತ್ತದೆ, ದೂಳಿನ ಅಲರ್ಜಿ ಇದೆ. ಪರಿಹಾರ ತಿಳಿಸಿ.

ಉತ್ತರ: ತಲಾ 10 ಗ್ರಾಂ ಜ್ಯೇಷ್ಠ ಮಧು, ಮೆಣಸು, ಜೀರಿಗೆಯನ್ನು ಪುಡಿ ಮಾಡಿಟ್ಟುಕೊಂಡು ಅರ್ಧ ಚಮಚ ಲೋಟವನ್ನು ನೀರಿಗೆ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ನೆಗಡಿ, ದೂಳಿನ ಅಲರ್ಜಿ ಕಡಿಮೆಯಾಗುತ್ತದೆ. ಇದನ್ನು ಮೂರು ತಿಂಗಳು ಮುಂದುವರೆಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.

ನೀಲಗಿರಿ ತೈಲವನ್ನು ಬಿಸಿ ನೀರಿನಲ್ಲಿ ಹಾಕಿ ಹಬೆ ತೆಗೆದುಕೊಳ್ಳಬೇಕು. ದೂಳಿನಿಂದ ರಕ್ಷಣೆ ಪಡೆಯಲು ಹತ್ತಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸಬೇಕು. ಪ್ರತಿ ದಿನ ಸ್ವಚ್ಛಗೊಳಿಸಬೇಕು. ಪ್ರತಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದು ಒಳ್ಳೆಯದು.

ಪ್ರಶ್ನೆ: ಈಗಲೂ ಕೊರೊನಾ ಸಮಸ್ಯೆ ತಲೆದೋರಬಹುದೇ?

ಉತ್ತರ: ಕೊರೊನಾದಿಂದ ಈಗ ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಅದೊಂದು ಇನ್‌ಫ್ಲುಯೆಂಜಾ ಮಾದರಿಯ ಒಂದು ಜ್ವರ. ಕೋವಿಡ್ ಭೀಕರ ಸ್ವರೂಪದಲ್ಲಿದ್ದ ಸಂದರ್ಭದಲ್ಲಿ ಸ್ಟಿರಾಯ್ಡ್‌ ಹಾಗೂ ಅನಗತ್ಯವಾಗಿ ಹೆಚ್ಚು ಔಷಧಿಗಳನ್ನು ಕೊಟ್ಟಿದ್ದರಿಂದ ಜನರಲ್ಲಿ ಅವುಗಳ ಅಡ್ಡ ಪರಿಣಾಮ ಈಗ ಆಗುತ್ತಿದೆ. ದೇಶದಾದ್ಯಂತ ಕೋಟ್ಯಂತರ ಜನರು ಲಸಿಕೆ ಹಾಕಿಸಿಕೊಂಡ ಕಾರಣ ಕೋವಿಡ್ ಹಾವಳಿ ಇಲ್ಲ. ಹೆಚ್ಚಿನವರಿಗೆ ಕೋವಿಡ್ ಈಗಾಗಲೇ ಬಂದು ಹೋಗಿದೆ. ಕೆಲವರ ಅನುಭವಕ್ಕೆ ಬಂದರೆ, ಇನ್ನು ಕೆಲವರ ಅನುಭವಕ್ಕೆ ಬಂದಿಲ್ಲ. ಈಗ ಬೇರೆ ತಳಿ ಬಂದರೂ ಗಂಭೀರ ಸಮಸ್ಯೆ ಆಗುವುದಿಲ್ಲ.

ಪ್ರಶ್ನೆ: ಬದಲಾದ ಜೀವನಶೈಲಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಪರಿಹಾರವೇನು?

ಉತ್ತರ: ಜಗತ್ತು ಬದಲಾದಂತೆ ಜನರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಹಿರಿಯರು ರಾತ್ರಿ ಬೇಗನೇ ಮಲಗಿ, ನಸುಕಿನ ಜಾವ ಏಳುತ್ತಿದ್ದರು. ಈಗ ಹಲವು ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಿರುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡ ಬೀಳುತ್ತದೆ. ರಾತ್ರಿ ವೇಳೆ ಎಚ್ಚರವಾಗಿ ಇರಬೇಕೆಂದು ಚಹಾ, ಕಾಫಿಯನ್ನು ಹಲವು ಬಾರಿ ಕುಡಿಯುತ್ತಾರೆ. ಇದು ಸರಿಯಾದ ಕ್ರಮವಲ್ಲ. ಟೀ, ಕಾಫಿ ಬದಲಾಗಿ ಬಿಸಿ ನೀರು, ತುಳಸಿ ಎಲೆ, ಜ್ಯೇಷ್ಠ ಹುಲ್ಲು (ಲೆಮನ್ ಗ್ರಾಸ್) ಅಥವಾ ಇತರ ಔಷಧೀಯ ಸಸ್ಯಗಳನ್ನು ಹಾಕಿ ತಯಾರಿಸಿದ ಚಹಾ ಕುಡಿಯಬಹುದು. ಇದರಿಂದ ದೇಹವು ಚೈತನ್ಯಶೀಲವಾಗಿರುತ್ತದೆ.

ಕನಿಷ್ಠ ದಿನಕ್ಕೆ 6ರಿಂದ 8 ಗಂಟೆ ನಿದ್ದೆ ಅವಶ್ಯವಿದೆ. ರಾತ್ರಿ ವೇಳೆ ಹೆಚ್ಚು ಮಲಗಲು ಸಾಧ್ಯವಾಗದಿದ್ದರೆ ಹಗಲು ಹೊತ್ತಿನಲ್ಲಿ ಕೊಂಚ ವಿಶ್ರಾಂತಿ ಪಡೆಯಬೇಕು.

ಪ್ರಶ್ನೆ: ಉತ್ತಮ ಆಹಾರ ಶೈಲಿಯನ್ನು ರೂಢಿಸಿಕೊಳ್ಳುವುದು ಹೇಗೆ

ಉತ್ತರ: ಉತ್ತಮ ದೇಹಾರೋಗ್ಯವನ್ನು ಕಾಯ್ದುಕೊಳ್ಳಲು ರೊಟ್ಟಿ, ಚಪಾತಿ, ಅನ್ನದ ಜೊತೆಗೆ ಏಕದಳ, ದ್ವಿದಳ ಆಹಾರ ಧಾನ್ಯಗಳು, ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇವಿಸಬೇಕು. ಊಟದ ತಟ್ಟೆಯಲ್ಲಿ ತರಕಾರಿ ಇದ್ದರೆ ಒಳ್ಳೆಯದು. ಪಾಲಿಷ್ ಅಕ್ಕಿಯಿಂದ ದೂರವಿರಬೇಕು. ಪಾಲಿಷ್ ಮಾಡದ ಅಕ್ಕಿ ಅಥವಾ ಕೆಂಪಕ್ಕಿಯಿಂದ ತಯಾರಿಸಿದ ಆಹಾರವನ್ನು ಊಟ ಮಾಡಬೇಕು. ಒಂದು ಊಟದಿಂದ ಮತ್ತೊಂದು ಊಟದ ಮಧ್ಯೆ ಕನಿಷ್ಠ ನಾಲ್ಕೈದು ಗಂಟೆ ಅಂತರವಿರಬೇಕು.

ಪ್ರಶ್ನೆ: ಮಧುಮೇಹವನ್ನು ನಿಯಂತ್ರಣ, ನಿವಾರಣೆ ಹೇಗೆ?

ಉತ್ತರ: ಐದಾರು ವರ್ಷಗಳಿಂದ ಮಧುಮೇಹ (ಸಕ್ಕರೆ ಕಾಯಿಲೆ) ಇದ್ದವರು ವೈದ್ಯರ ಸಲಹೆಯಂತೆ ನಡೆದುಕೊಂಡರೆ ನಿತ್ಯ ಮಾತ್ರೆ ತೆಗೆದುಕೊಳ್ಳುವ ಅನಿವಾರ್ಯತೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಇದನ್ನು ವೈದ್ಯರ ಗುಂಪೊಂದು ಸಂಶೋಧನೆ ಮಾಡಿದೆ.

ಸಕ್ಕರೆ ಕಾಯಿಲೆ ಇದ್ದವರು ಸಕ್ಕರೆ, ಬೆಲ್ಲ, ಜೇನುತುಪ್ಪದಂತಹ ಸಕ್ಕರೆ ಅಂಶ ಇರುವ ಪದಾರ್ಥಗಳನ್ನು ಸೇವಿಸಬಾರದು. ಕೆಲವರು ಒಂದು ಕಪ್ ಚಹಾಕ್ಕೆ ನಾಲ್ಕೈದು ಚಮಚ ಸಕ್ಕರೆ ಹಾಕಿಕೊಳ್ಳುತ್ತಾರೆ. ಸಕ್ಕರೆ ರಹಿತ ಚಹಾ, ಕಾಫಿ ಸೇವಿಸಬೇಕು.

ಅಕ್ಕಿ, ಜೋಳದಲ್ಲಿ ಕಾರ್ಬೊಹೈಡ್ರೇಟ್ ಅಂಶ ಇರುವುದರಿಂದ ಹೆಚ್ಚಾಗಿ ತಿನ್ನಬಾರದು. ರೊಟ್ಟಿಯ ಜೊತೆಗೆ ತರಕಾರಿ, ಸಜ್ಜೆ, ಊದಲು, ಅರ್ಕದಂತಹ ಸಿರಿಧಾನ್ಯಗಳನ್ನು ಬಳಸಬೇಕು. ಪಾಲಿಷ್ ಮಾಡದ ಅಕ್ಕಿ ತಿನ್ನಬೇಕು. ಪಾಲಿಷ್ ಮಾಡಿದ್ದರಿಂದ ಅದರಲ್ಲಿ ಯಾವ ಸತ್ವವೂ ಇರುವುದಿಲ್ಲ. ಸಕ್ಕರೆ ಕಾಯಿಲೆ ಇರುವವರಿಗೆ ವಿಟಮಿನ್‌ಗಳ ಅವಶ್ಯಕತೆ ತುಂಬಾ ಇರುತ್ತದೆ. ಪಾಲಿಷ್ ಮಾಡದ ಕೆಂಪಕ್ಕಿಯನ್ನು ಬಳಸಬೇಕು. ಮಾನಸಿಕ ಒತ್ತಡ ಇರಬಾರದು. ಒತ್ತಡ ಕಳೆಯಲು ಸಂಗೀತ, ವ್ಯಾಯಾಮ, ಆಟ ಆಡುವುದು, ನಿತ್ಯ ಒಂದು ಗಂಟೆ ಕಾಲವಾದರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.

‘ದೂಳಿನ ಸಮಸ್ಯೆ ನಿವಾರಿಸಿಕೊಳ್ಳಿ’

‘ಅಲರ್ಜಿಯಿಂದ ಕೆಲವರಲ್ಲಿ ಪದೇ ಪದೇ ನೆಗಡಿ, ಕೆಮ್ಮು ಕಾಣುತ್ತದೆ. ಕೆಲವರಿಗೆ ಚಳಿಗಾಲ, ಇನ್ನೂ ಕೆಲವರಿಗೆ ಬೇಸಿಗೆಗಾಲದಲ್ಲಿ ಕಾಡುತ್ತದೆ. ಇನ್ನೂ ಕೆಲವರಿಗೆ ವರ್ಷಪೂರ್ತಿ ಇರುತ್ತದೆ. ಅಂಥವರು ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಹೊರಗೆ ಓಡಾಡುವಾಗಲೂ ಜಾಗ್ರತೆಯಿಂದ ಇರಬೇಕು’ ಎಂದು ಡಾ. ವಸುಂಧರಾ ಭೂಪತಿ ತಿಳಿಸಿದರು.

‘ಮನೆಯಲ್ಲಿ ಹೊದಿಕೆಗಳನ್ನು ನಿಯಮಿತವಾಗಿ ಬದಲಿಸಬೇಕು. ಹಾಸಿಗೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ದೂಳು ಆವರಿಸದಂತೆ ಮತ್ತು ಜಾಡು ಕಟ್ಟಿಕೊಳ್ಳದಂತೆ ಎಚ್ಚರ ವಹಿಸಬೇಕು. ದೂಳು, ಮಣ್ಣು ಮತ್ತು ಮಲಿನ ಪರಿಸರದಿಂದ ಅಲರ್ಜಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ’ ಎಂದು ಅವರು ತಿಳಿಸಿದರು.

ಮಾನಸಿಕ ಒತ್ತಡ ನಿವಾರಣೆ ಹೇಗೆ?

ಮಾನಸಿಕ ಮತ್ತು ಕಾರ್ಯದ ಒತ್ತಡವನ್ನು ಹಲವು ಜನರು ಎದುರಿಸುತ್ತಿದ್ದಾರೆ. ಇದಕ್ಕೆ ಬದಲಾದ ಜೀವನಶೈಲಿ ಮತ್ತು ದೈನಂದಿನ ಚಟುವಟಿಕೆಗಳು ಕಾರಣ. ಅತಿಯಾದ ಮೊಬೈಲ್ ಬಳಕೆ, ಟಿವಿ ವೀಕ್ಷಣೆ ಮುಂತಾದ ಕಾರಣಗಳಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ವ್ಯಾಯಾಮ ಮಾಡದೇ ಚಲನಶೀಲತೆ ಕಡಿಮೆ ಮಾಡುವುದರಿಂದಲೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಎಷ್ಟೇ ಮಾನಸಿಕ ಮತ್ತು ಕಾರ್ಯ ಒತ್ತಡವಿದ್ದರೂ ಆ ಕ್ಷಣಕ್ಕೆ ಅಥವಾ ಆ ಸಮಯದಲ್ಲಿ ಕೊಂಚ ಹೊತ್ತಾದರೂ ವಿಶ್ರಾಂತಿ ಪಡೆಯುವುದು ಸೂಕ್ತ. ಎಲ್ಲವನ್ನೂ ಸಮಾಧಾನ, ಶಾಂತ ಚಿತ್ತ ಭಾವದಿಂದ ಪರಿಸ್ಥಿತಿ ಎದುರಿಸಬೇಕು. ಅತಿಯಾಗಿ ಮಾನಸಿಕ ಒತ್ತಡವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಡಾ. ವಸುಂಧರಾ ಭೂಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT