ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಿಲ್ಲೆಯಾದ್ಯಂತ ವಾಹನಗಳ ಓಡಾಟಕ್ಕೆ ನಿರ್ಬಂಧ

ನಿಗದಿತ ಸಮಯ ಮುಗಿಯುತ್ತಿದ್ದಂತೆ ಅಂಗಡಿಗಳು ಬಂದ್; ಆಟೊ ಸಂಚಾರ ಸಂಪೂರ್ಣ ಸ್ಥಗಿತ
Last Updated 10 ಮೇ 2021, 15:14 IST
ಅಕ್ಷರ ಗಾತ್ರ

ಕಲಬುರ್ಗಿ: 14 ದಿನಗಳ ಲಾಕ್‌ಡೌನ್‌ನ ಮೊದಲ ದಿನವಾದ ಸೋಮವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿತ್ತು. ಸೂಕ್ತ ಕಾರಣ ನೀಡದ್ದರಿಂದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.

ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲ ಗಡಿ ಭಾಗಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಆರಂಭಿಸಿರುವ ಪೊಲೀಸರು ಅಧಿಕೃತ ದಾಖಲೆಗಳನ್ನು ತೋರಿಸಿದ ವಾಹನಗಳಿಗೆ ಮಾತ್ರ ಜಿಲ್ಲೆಯ ಒಳಗೆ ಪ್ರವೇಶಿಸಲು ಅವಕಾಶ ನೀಡಿದರು. ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಕೇಂದ್ರ ಬಸ್ ನಿಲ್ದಾಣ, ಎಂಎಸ್‌ಕೆ ಮಿಲ್ ರಸ್ತೆ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಖರ್ಗೆ ಪೆಟ್ರೋಲ್ ಪಂಪ್, ರಾಮಮಂದಿರ ವೃತ್ತ, ಆಳಂದ ನಾಕಾ, ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಭಾನುವಾರ ರಾತ್ರಿಯಿಂದಲೇ ನಾಕಾಬಂದಿ ಮಾಡಿದ್ದ ಪೊಲೀಸರು ವಾಹನಗಳನ್ನು ತಡೆದು ಪರಿಶೀಲಿಸಿದರು.

ರಾಜ್ಯ ಸರ್ಕಾರ ಹಿಂದೆ ವಿಧಿಸಿದ್ದ ಸೆಮಿ ಲಾಕ್‌ಡೌನ್‌ಗಿಂತ ಸೋಮವಾರದಿಂದ ಆರಂಭವಾದ ಲಾಕ್‌ಡೌನ್ ಕಠಿಣವಾಗಿದ್ದು, ವಾಹನಗಳ ಓಡಾಟಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಜೊತೆಗೆ ಸ್ವಯಂಸೇವಕರು ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸುವ ದೃಶ್ಯ ಎಸ್‌ವಿಪಿ ವೃತ್ತ ಹಾಗೂ ಜಗತ್ ವೃತ್ತದಲ್ಲಿ ಕಂಡು ಬಂತು.

ಲಾಕ್‌ಡೌನ್‌ನ ಬಿಸಿ ಅಗತ್ಯ ಕೆಲಸಗಳಿಗಾಗಿ ರಸ್ತೆಗಿಳಿದವರಿಗೂ ತಟ್ಟಿತು. ಬೆಳಿಗ್ಗೆ ರೈಲಿನ ಮೂಲಕ ಬಂದು ತಮ್ಮ ಸಂಬಂಧಿಗಳ ಬೈಕ್‌ ಮೇಲೆ ತೆರಳುತ್ತಿದ್ದ ಪ್ರಯಾಣಿಕರನ್ನು ತಡೆದ ಪೊಲೀಸರು ಟಿಕೆಟ್‌ ತೋರಿಸಿದರೂ ಬೈಕ್ ಜಪ್ತಿ ಮಾಡಿದರು ಎಂಬ ಆರೋಪಗಳು ಕೇಳಿ ಬಂದಿವೆ. ಅಧಿಕೃತ ಟಿಕೆಟ್‌ ತೋರಿಸಿದರೆ ಅವರಿಗೆ ಮನೆಗೆ ವಾಹನದ ಮೂಲಕ ತೆರಳಲು ಅವಕಾಶ ನೀಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜೊಮ್ಯಾಟೊ ಹುಡುಗರಿಗೆ ತಡೆ: ಹೋಟೆಲ್, ಖಾನಾವಳಿಗಳಿಂದ ಮನೆಗಳಿಗೆ ಪಾರ್ಸೆಲ್ ಒಯ್ಯುವ ಜೊಮ್ಯಾಟೊ ಕಂಪನಿಯ ಹುಡುಗರನ್ನು ಪೊಲೀಸರು ತಡೆದಿದ್ದರು. ಇದ್ದುದರಲ್ಲಿಯೇ ಪಾರ್ಸೆಲ್‌ ಹೋಗುತ್ತಿರುವುದರಿಂದ ಹೋಟೆಲ್ ವ್ಯವಹಾರ ಅಲ್ಪಸ್ವಲ್ಪ ನಡೆದಿದೆ. ಅವರಿಗೆ ತಡೆ ನೀಡಬೇಡಿ ಎಂದು ಎಸಿಪಿ ಗಿರೀಶ ಅವರಿಗೆ ಮನವಿ ಮಾಡಿದ ಬಳಿಕ ಹುಡುಗರಿಗೆ ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಿದ್ದಾರೆ ಎಂದು ಕಲಬುರ್ಗಿ ಹೋಟೆಲ್ ಮಾಲೀಕರ ಸಂಘದ ಸದಸ್ಯರೊಬ್ಬರು ಮಾಹಿತಿ ನೀಡಿದರು.

‘ಲಾಕ್‌ಡೌನ್‌ಗೂ ಮುನ್ನ ₹ 30 ಲಕ್ಷ ಖರ್ಚು ಮಾಡಿ ಹೋಟೆಲ್ ಆರಂಭಿಸಿದ್ದೆ. ಡಿ.ಸಿ. ಕಚೇರಿ ಒಳಗಡೆ ಹೆಚ್ಚು ಜನ ಓಡಾಡುತ್ತಿಲ್ಲವಾದ್ದರಿಂದ ಹೋಟೆಲ್ ಮುಚ್ಚಿದ್ದೇನೆ. ಅಲ್ಲಿರುವ 20ಕ್ಕೂ ಅಧಿಕ ಕಾರ್ಮಿಕರಿಗೆ ವೇತನ ಕೊಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ’ ಎಂದು ಹೋಟೆಲ್ ಉದ್ಯಮಿ ನರಸಿಂಹ ಮೆಂಡನ್ ಪ್ರಶ್ನಿಸಿದರು.

‘ಟಿಕೆಟ್ ತೋರಿಸಿದರೂ ಬೈಕ್ ಜಪ್ತಿ’

‘ರೈಲಿನ ಮೂಲಕ ಬಂದ ನನ್ನ ಸಹೋದರನನ್ನು ಕರೆದುಕೊಂಡು ಬರಲು ಬೈಕ್‌ನಲ್ಲಿ ಹೋದ ಸಂದರ್ಭದಲ್ಲ ಟಿಕೆಟ್ ತೋರಿಸಿದರೂ ಬೈಕ್ ಜಪ್ತಿ ಮಾಡಿದರು. ಪರಿಪರಿಯಾಗಿ ಬೇಡಿಕೊಂಡರೂ ಬಿಡಲಿಲ್ಲ’ ಎಂದು ತಾರಫೈಲ್‌ನ ನಿವಾಸಿ ಉದಯ್ ‘ಪ್ರಜಾವಾಣಿ’ಗೆ ಕರೆ ಮಾಡಿ ತಿಳಿಸಿದರು.

‘ನಗರದ ಮೋಹನರಾಜ್ ಆಸ್ಪತ್ರೆಯಲ್ಲಿ ಸಂತೋಷ ಠಾಕೂರ್ ಎಂಬುವವರನ್ನು ದಾಖಲಿಸಲಾಗಿದ್ದು, ಅವರ ಸಹಾಯಕ ದರ್ಶನ್ ಸಿಂಗ್ ಠಾಕೂರ್ ಅವರು ಔಷಧಿ ಖರೀದಿಸಲು ಆಟೊದಲ್ಲಿ ಬಂದ ಸಂದರ್ಭದಲ್ಲಿ ಆಟೊವನ್ನು ಜಪ್ತಿ ಮಾಡಲಾಯಿತು. ರೋಗಿಗಳ ಸಹಾಯಕರಿಗೆ ಸಂಚರಿಸಲು ಅವಕಾಶವಿದೆ ಎಂದು ಹೇಳಿದರೂ ಕೇಳಲಿಲ್ಲ’ ಎಂದು ಆಟೊ ಚಾಲಕರೊಬ್ಬರು ಮಾಹಿತಿ ನೀಡಿದರು.

ಹಣ್ಣಿನ ಅಂಗಡಿಗಳು ತೆರವು

ಭಾನುವಾರದವರೆಗೆ ಹಣ್ಣಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಸೋಮವಾರ ಹಲವು ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸಲಾಯಿತು. ವೃತ್ತದಲ್ಲಿ, ರಸ್ತೆ ಬದಿಯಲ್ಲಿ ಕುಳಿತು ಹಣ್ಣಿನ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸಿ ಅವರಿಗೆ ತಳ್ಳು ಗಾಡಿಯಲ್ಲಿ ಮಾರಾಟ ಮಾಡುವಂತೆ ಸೂಚನೆ ನೀಡಲಾಯಿತು. ರಸ್ತೆ ಬದಿ ಕುಳಿತೇ ಹಣ್ಣು ಮಾರಾಟ ಮಾಡಿದವರು ಒಮ್ಮಿಂದೊಮ್ಮೆಲೇ ತಳ್ಳುಗಾಡಿಗಳನ್ನು ಎಲ್ಲಿಂದ ತರಬೇಕು ಎಂದು ಹಲವು ವ್ಯಾಪಾರಿಗಳು ಪೊಲೀಸರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT