ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಮುಕ್ತ ಗ್ರಾಮಕ್ಕೆ ಪೊಲೀಸರ ಸಹಕಾರ

ತೆಂಗಳಿ ಗ್ರಾಮದಲ್ಲಿ ಕಾಳಗಿ ಪಿಎಸ್ಐ ದಿವ್ಯಾ ಎಸ್. ಅಂಬಾಟಿ ಭರವಸೆ
Last Updated 8 ಜನವರಿ 2021, 5:32 IST
ಅಕ್ಷರ ಗಾತ್ರ

ಚಿತ್ತಾಪುರ: ತೆಂಗಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮ ಮಾಡಲು ಸಾಮೂಹಿಕವಾಗಿ ಗ್ರಾಮಸ್ಥರು ಕೈಗೊಂಡಿರುವ ನಿರ್ಧಾರ ಉತ್ತಮವಾಗಿದೆ. ಅದಕ್ಕೆ ಬೇಕಾದ ಅಗತ್ಯ ಸಹಕಾರ ಪೊಲೀಸ್ ಇಲಾಖೆ ಗ್ರಾಮಸ್ಥರಿಗೆ ನೀಡುತ್ತದೆ ಎಂದು ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ದಿವ್ಯಾ ಎಸ್. ಅಂಬಾಟಿ ಅವರುಭರವಸೆ ನೀಡಿದರು.

ಇಲ್ಲಿಗೆ ಸಮೀಪದ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧ ಹಾಗೂ ಗ್ರಾಮವನ್ನು ಮದ್ಯಮುಕ್ತ ಮಾಡುವುದಕ್ಕೆ ಈಚೆಗೆ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಮದ್ಯಪಾನದಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ. ಕೌಟುಂಬಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯುವಕರು ದುಶ್ಚಟಗಳಿಂದ ದೂರ ಇರಬೇಕು. ಸ್ವಂತ ಹಣ ಖರ್ಚು ಮಾಡಿ ಮದ್ಯ ಸೇವಿಸಿ ಸಮಾಜದಲ್ಲಿ ಕೆಟ್ಟವರೆನಿಸಿಕೊಂಡು ಬದುಕಬೇಕಾಗುತ್ತದೆ. ಮದ್ಯಮುಕ್ತ ಗ್ರಾಮದಿಂದ ಗ್ರಾಮದಲ್ಲಿ ಐಕ್ಯತೆ ಮತ್ತು ಯುವಕರ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತೆಂಗಳಿ-ಮಂಗಲಗಿ ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ.ಶಾಂತಸೋಮನಾಥ ಶಿವಾಚಾರ್ಯ ಮಾತನಾಡಿ, ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ, ಸೌಹಾರ್ಧತೆ, ಶಾಂತಿ ನೆಲೆಸುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಮದ್ಯಪಾನದಿಂದ ಯುವಕರ ಜೀವನ ಅರಳುವ ಮುಂಚೆ ಹೂವಿನಂತೆ ಬಾಡಿ ಕಮರುತ್ತದೆ. ಕುಡಿತದಿಂದ ದೂರಾಗುವ ನಿರ್ಧಾರವನ್ನು ಕೇವಲ ಕಾಟಾಚರಕ್ಕೆ ಮಾಡಬಾರದು. ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕು. ಮದ್ಯ ಮಾರಾಟಗಾರರು ಮದ್ಯ ಮಾರುವುದಿಲ್ಲ ಎಂಬ ಪ್ರತಿಜ್ಞೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೆಲವೇ ತಿಂಗಳುಗಳಿಗೆ ಸೀಮಿತವಾಗದೆ ನಿರಂತರ ಮುಂದುವರೆಯಬೇಕು. ಆದರ್ಶ ಗ್ರಾಮವಾಗಿ ಮಾಡಲು ಪಣ ತೊಡಬೇಕು ಎಂದು ಅವರು ಹೇಳಿದರು.

ಕಾನೂನು ಸಲಹೆಗಾರ ಮಲ್ಲಿಕಾರ್ಜುನ ಹೊನಗುಂಟಿ ಅವರು ಮಾತನಾಡಿ, ಮದ್ಯಪಾನದ ದುಷ್ಪರಿಣಾಮ ಮತ್ತು ಮದ್ಯ ಮಾರಾಟ ನಿಷೇಧ ಕಾನೂನು ಕುರಿತು ಮಾಹಿತಿ ನೀಡಿದರು. ಅಬಕಾರಿ ಇಲಾಖೆಯ ವಲಯ ನಿರೀಕ್ಷಕ ರಮೇಶ ಬಿರಾದಾರ ಅವರು ಮಾತನಾಡಿದರು. ಮದ್ಯ ಮಾರಾಟ ನಿಷೇಧ ಮತ್ತು ಮದ್ಯಮುಕ್ತ ಗ್ರಾಮದ ಸಂಕಲ್ಪದ ಸಹಿ ಸಂಗ್ರಹ ಅಭಿಯಾನ ಮನವಿ ಪತ್ರವನ್ನು ಪಿಎಸ್ಐ ದಿವ್ಯ ಹಾಗೂ ಅಬಕಾರಿ ವಲಯ ನಿರೀಕ್ಷಕ ರಮೇಶ ಅವರಿಗೆ ಗ್ರಾಮಸ್ಥರು ಸಲ್ಲಿಸಿದರು. ನಂತರ ಗ್ರಾಮದಲ್ಲಿ ಜಾಗೃತಿ ಜಾಥಾ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT