ಗುರುವಾರ , ಸೆಪ್ಟೆಂಬರ್ 16, 2021
29 °C

24 ಗಂಟೆಯಲ್ಲಿ ಟಿ.ಸಿ. ವ್ಯವಸ್ಥೆ ಮಾಡಿ: ಇಂಧನ ಸಚಿವ ವಿ. ಸುನಿಲ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಗ್ರಾಮೀಣ ಭಾಗದಲ್ಲಿ ದುರಸ್ತಿಗೊಳಗಾದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ (ಪರಿವರ್ತಕಗಳ) ಬದಲಾವಣೆಯನ್ನು 24 ಗಂಟೆಯೊಳಗೆ ಮಾಡಲೇಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಜೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜೆಸ್ಕಾಂ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಯಾವುದೇ ಕಾರಣವಿಲ್ಲದೇ ಟಿ.ಸಿ. ಬದಲಾವಣೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಬಾರದು’ ಎಂದು ತಾಕೀತು ಮಾಡಿದರು.

‘ಟಿ.ಸಿ. ಬದಲಾವಣೆ ಸಂಬಂಧ ರೈತರಲ್ಲಿ ಕೆಲ ಸಿಬ್ಬಂದಿ ಹಣದ ಬೇಡಿಕೆ ಇಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಯಾರಾದರೂ ಇಂತಹ ಬೇಡಿಕೆ ಇಟ್ಟಲ್ಲಿ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳನ್ನು ಕೈಬಿಡುವಂತೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಮೂಲಕ ನನ್ನ ಮೇಲೆ ಒತ್ತಡ ತರಲು ಮುಂದಾದರೆ ನಾನು ಯಾವುದಕ್ಕೂ ಜಗ್ಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ನೋಂದಾಯಿತ ಫಲಾನುಭವಿ ರೈತರ ಪಂಪ್‌ಸೆಟ್‌ಗಳಿಗೆ ಯಾವುದೇ ವಿಳಂಬವಿಲ್ಲದೇ ಒಂದು ತಿಂಗಳಲ್ಲಿ ವಿದ್ಯುತ್ ಪೂರೈಸಬೇಕು ಎಂದು ಸಚಿವ ಸುನಿಲ್‌ ಕುಮಾರ್ ಸೂಚಿಸಿದರು.

ಇತ್ತೀಚೆಗೆ ತೋಟದ ಮನೆಗಳು ಹೆಚ್ಚಾಗುತ್ತಿದ್ದು, ಆದರೆ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸವಾಲಾಗಿದೆ.  ಮಕ್ಕಳು, ಜಾನುವಾರುಗಳಿರುವ ಮನೆಗಳಿದ್ದು, ರಾತ್ರಿ ವೇಳೆ ಕತ್ತಲೆಯಲ್ಲಿ ದಿನದೂಡಬೇಕಾಗಿದೆ. ಇಂತಹ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕು. ಮೊದಲು ಜಿಲ್ಲೆಯಲ್ಲಿ ತೋಟದ ಮನೆಗಳು ಎಷ್ಟಿವೆ ಎಂಬುವುದನ್ನು ಸಮೀಕ್ಷೆ ಮಾಡಬೇಕು. ಬಳಿಕ ಯಾವ ವಿಧಾನದ ಮೂಲಕ ಈ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ಬಗ್ಗೆ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ಸಚಿವರು ಸಲಹೆ ನೀಡಿದರು.

ಜೆಸ್ಕಾಂ ಗ್ರಾಹಕರ ಸಹಾಯವಾಣಿ–1912ಗೆ ಬರುವ ದೂರು ಕರೆಗಳಿಗೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೇವಲ ತಾಂತ್ರಿಕ ಕಾರಣ ನೀಡಿ, ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಖಾರವಾಗಿ ಹೇಳಿದ ಸಚಿವರು, ಈ ಸಂಬಂಧ ತಮಗೆ ನಿತ್ಯ ಕರೆಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕರೆಗಳು ಬಾರದಂತೆ ನೋಡಿಕೊಳ್ಳಿ ಎಂದರು.

ಜೆಸ್ಕಾಂ ವ್ಯಾಪ್ತಿಯಲ್ಲಿ 33 ಕೆ.ವಿ.ಯ 54 ವಿದ್ಯುತ್ ಉಪಕೇಂದ್ರ ಸ್ಥಾಪಿಸುತ್ತಿರುವುದು ಉತ್ತಮ ಕಾರ್ಯ. ಆದರೆ, ಕಲಬುರ್ಗಿ ಜಿಲ್ಲೆಗೆ 17 ಉಪಕೇಂದ್ರಗಳನ್ನು ನೀಡಿ, ಇನ್ನಿತರ ಜಿಲ್ಲೆಗಳನ್ನು ಕಡೆಗಣಿಸಲಾಗುತ್ತಿದೆ. ಜೆಸ್ಕಾಂ ವ್ಯಾಪ್ತಿಯ ರಾಯಚೂರ ಜಿಲ್ಲೆಗೆ ಒಂದೂ ಉಪಕೇಂದ್ರ ಮಂಜೂರು ಮಾಡದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಕಲಬುರ್ಗಿಗೆ ಪ್ರಾಧಾನ್ಯತೆ ನೀಡಬಾರದು. ಇತರ ಜಿಲ್ಲೆಗಳನ್ನೂ ಸಮನಾಗಿ ಪರಿಗಣಿಸಬೇಕು ಎಂದು ನಿರ್ದೇಶನ ನೀಡಿದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ ತರಾಜ್ ಇಲಾಖೆ ವಿದ್ಯುತ್ ಸಂಪರ್ಕ ಕೋರಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಆಯಾ ವರ್ಷದ ಬೇಸಿಗೆ ಕಾಲದಲ್ಲಿ ಸಮಸ್ಯೆಯಾಗದಂತೆ, ಜನವರಿ ತಿಂಗಳಲ್ಲಿಯೇ ಸಂಪರ್ಕ ಕಲ್ಪಿಸಬೇಕು ಎಂದರು.

ಇದೇ ತಿಂಗಳ 24ರ ನಂತರ ಮತ್ತೆ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಆ ಸಂದರ್ಭದಲ್ಲಿ ರೈತರು, ಗ್ರಾಹಕರಿಂದ ಯಾವುದೇ ದೂರು ಬರದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಇಂಧನ ಇಲಾಖೆ ಜಂಟಿ ನಿರ್ದೇಶಕ ಕೆ. ಪರಮೇಶ, ಜೆಸ್ಕಾಂ ಮುಖ್ಯ ಎಂಜಿನಿಯರ್ ಲಕ್ಷ್ಮಣ ಚವ್ಹಾಣ ಇದ್ದರು.

 

ರಾಜ್ಯದಲ್ಲಿ 60 ಉಪ ಕೇಂದ್ರ ಸ್ಥಾಪನೆ

‘ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ನೀರು ಹರಿಸುವ ಉದ್ದೇಶದಿಂದ ಪ್ರತಿದಿನ ಕನಿಷ್ಠ 7 ಗಂಟೆ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ 60 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲಕುಮಾರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗಾಗಿ ವಿಸ್ತೃತ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

‘ಆರ್ಥಿಕವಾಗಿ ಸಬಲರಾಗಿರುವವರು ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುವುದನ್ನು ಬಿಟ್ಟುಕೊಟ್ಟರೆ ಆ ವಿದ್ಯುತ್‌ನ್ನು ರೈತರಿಗೆ ಉಚಿತವಾಗಿ ನೀಡಲು ಸಹಾಯ ಆಗಲಿದೆ. ಹೀಗಾಗಿ ಗಿವ್ ಇಟ್ ಅಪ್ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ’ ಎಂದರು.

ಈಗಾಗಲೇ ಶೇ 36ರಷ್ಟು ವಿದ್ಯುತ್‌ನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು