ಕಲಬುರಗಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉತ್ತಮ ಬಿತ್ತನೆ ನಡೆದಿಲ್ಲ. ಕೆಲ ತಾಲ್ಲೂಕುಗಳಲ್ಲಿ ಬೆಳೆಗಳು ಇದ್ದರೂ, ತೇವಾಂಶ ಕೊರತೆಯಿಂದ ಇಳುವರಿ ತೀವ್ರ ತಗ್ಗಿದೆ. ಹೀಗಾಗಿ ಕಲಬುರಗಿಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮಳೆ ಕೊರತೆಯಿಂದಾಗಿ ರೈತರಿಗೆ ಅಲ್ಪಾವಧಿಯಲ್ಲಿ ರೊಕ್ಕ ನೀಡುವ ಉದ್ದು, ಹೆಸರು, ಸೋಯಾಬಿನ್ ಇಳುವರಿ ಕುಸಿದಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.
‘ಬರ ಪರಿಸ್ಥಿತಿಗೆ ಸಿಲುಕಿರುವ ರೈತರನ್ನು ಕಾಪಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕ್ರಮವಹಿಸಬೇಕು. ತ್ವರಿತವಾಗಿ ಬರಪರಿಹಾರ ಕ್ರಮಗಳನ್ನು ಪ್ರಕಟಿಸಬೇಕು. ಈ ಸಂಬಂಧಿತ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿಂಚೋಳಿಯಿಂದ ಜಿಲ್ಲಾ ಕೇಂದ್ರ ಕಲಬುರಗಿ ತನಕ ಸೆ.6ರಿಂದ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದರು.
‘ಸೆ.6ರಂದು ಚಿಂಚೋಳಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಸೆ.9ರಂದು ಪಾದಯಾತ್ರೆ ಕಲಬುರಗಿ ತಲುಪಲಿದೆ. ಅಂದು ಹುಮನಾಬಾದ್ ರಿಂಗ್ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ’ ಎಂದು ಮಮಶೆಟ್ಟಿ ಮಾಹಿತಿ ನೀಡಿದರು.
‘ಕಲಬುರಗಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 2022–23ರಲ್ಲಿ ಜಿಲ್ಲೆಯ 1.88 ಲಕ್ಷ ರೈತರು ₹166 ಕೋಟಿ ಬೆಳೆವಿಮೆ ಮೊತ್ತ ಪಾವತಿಸಿದ್ದರು. ಕೇವಲ ₹91 ಕೋಟಿ ಪರಿಹಾರ ಮಾತ್ರ ಬಿಡುಗಡೆಯಾಗಿದೆ. ಇನ್ನೂ ₹115 ಕೋಟಿ ಹಣ ಬಿಡುಗಡೆಯಾಗಬೇಕಿದೆ. ಫಸಲ್ ಬಿಮಾ ರೈತರಿಂದ ಹಣ ವಸೂಲಿ ಮಾಡುವ ಯೋಜನೆ ಬದಲಾಗಿದೆ’ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಿಲೀಪ್ ಕುಮಾರ್ ನಾಗೂರೆ, ಜಾವೇದ್ ಹುಸೈನ್ ಹಾಗೂ ರಾಯಪ್ಪ ಹುರಮುಂಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.