ಸೋಮವಾರ, ಅಕ್ಟೋಬರ್ 26, 2020
23 °C
ಸಿನಿಮಾ ಪ್ರದರ್ಶನ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ, ಶೇ 50 ಜನರಿಗೆ ಪ್ರವೇಶ

ಕಲಬುರ್ಗಿ: ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಸಿದ್ಧತೆ

ಸತೀಶ.ಬಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕು ಹರಡುವಿಕೆ ಕಾರಣ ಮುಚ್ಚಿದ್ದ ನಗರದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು 8 ತಿಂಗಳ ನಂತರ ಮತ್ತೆ ಪ್ರದರ್ಶನ ಆರಂಭಿಸಲು ಸಿದ್ಧತೆ ನಡೆಸಿವೆ.

ಅ.15ರಿಂದ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಮಲ್ಟಿಪ್ಲೆಕ್ಸ್‌ ಮತ್ತು ಚಿತ್ರಮಂದಿರಗಳನ್ನು ಸ್ವಚ್ಛಗೊಳಿಸಿ, ಆಸನಗಳನ್ನು ಸಜ್ಜುಗೊಳಿಸುತ್ತಿದ್ದುದು ಬುಧವಾರ ಕಂಡು ಬಂತು.

ನಗರದ ಮಿರಾಜ್ ಸಿನಿಮಾಸ್‌ನಲ್ಲಿ ಶುಕ್ರವಾರ (ಅ.16), ಸಂಗಮ್ ಮತ್ತು ತ್ರಿವೇಣಿ ಚಿತ್ರಮಂದಿಗಳಲ್ಲಿ ಅ.23ರಿಂದ ಪ್ರದರ್ಶನ ಆರಂಭ ಆಗಲಿದೆ. ಶೆಟ್ಟಿ ಮಲ್ಟಿಪ್ಲೆಕ್ಸ್‌ನಲ್ಲಿ ಮುಂದಿನ ವಾರದಿಂದ ಪ್ರದರ್ಶನ ನಡೆಯಲಿದೆ.

ಅಂತರ ಕಾಪಾಡಲು ಆನ್‌ಲೈನ್ ಬುಕ್ಕಿಂಗ್‌ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೆ, ಬಾರ್‌ಕೋಡ್ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾಡಲಾಗುತ್ತಿದೆ.

ಈ ಬಗ್ಗೆ ಮಿರಾಜ್ ಸಿನಿಮಾಸ್‌ನ ವ್ಯವಸ್ಥಾಪಕ ಅಮಿತ್‌ ಪ್ರತಿಕ್ರಿಯಿಸಿ, ‘ಮಿರಾಜ್ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನಲ್ಲಿ ಮೂರು ಸ್ಕ್ರೀನ್‌ಗಳಿದ್ದು, ಒಟ್ಟು 938 ಆಸನಗಳಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಶೇ 50ರಷ್ಟು ಜನರಿಗೆ ಮಾತ್ರ ಪ್ರವೇಶ ನೀಡಬೇಕಿದೆ. ಹೀಗಾಗಿ 469 ಆಸನಗಳನ್ನು ಮಾತ್ರ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ. ಚಿತ್ರಮಂದಿರ ಪ್ರವೇಶಿಸುವ ಮುನ್ನ ದೇಹದ ಉಷ್ಣಾಂಶ ಪರೀಕ್ಷಿಸಲಾಗುವುದು. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಈ ಹಿಂದೆ ಪ್ರತಿ ದಿನ 5 ಪ್ರದರ್ಶನಗಳು ನಡೆಯುತ್ತಿದ್ದವು. ಈಗ ಅವುಗಳನ್ನು ನಾಲ್ಕಕ್ಕೆ ಇಳಿಸಲಾಗಿದೆ. ಒಂದು ಪ್ರದರ್ಶನ ಮುಗಿದ ನಂತರ ಅರ್ಧ ಗಂಟೆ ವಿರಾಮ ನೀಡಿ, ಎಲ್ಲ ಆಸನಗಳನ್ನು ಸ್ಯಾನಿಟೈಸ್ ಮಾಡಲಾಗುವುದು’ ಎಂದು ವಿವರಿಸಿದರು.

‘ನೇರವಾಗಿ ಮಲ್ಟಿಪ್ಲೆಕ್ಸ್‌ಗೆ ಬಂದು ಟಿಕೆಟ್ ಖರೀದಿಸಲು ಅವಕಾಶ ಇಲ್ಲ. ಬುಕ್‌ ಮೈ ಶೋ ಆ್ಯಪ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಟಿಕೆಟ್ ಕೌಂಟರ್‌ನಲ್ಲಿ ಬಾರ್‌ ಕೋಡ್‌ ಹಾಕಲಾಗುತ್ತದೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕವೂ ಟಿಕೆಟ್ ಖರೀದಿಸಬಹುದು. ಜನರು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಅಂತರ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಮುಂದಿನ ವಾರ ಶೆಟ್ಟಿ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನ ಆರಂಭಿಸಲಾಗುವುದು’ ಎಂದು ಮಲ್ಟಿಪ್ಲೆಕ್ಸ್ ಮಾಲೀಕ ಸಂಗಪ್ಪ ಶೆಟ್ಟಿ ಹೇಳಿದರು.

‘ನಮ್ಮಲ್ಲಿ ನಾಲ್ಕು ಸ್ಕ್ರೀನ್‌ಗಳಿದ್ದು, 1,986 ಆಸನಗಳಿವೆ. ಸದ್ಯ ಎರಡು ಸ್ಕ್ರೀನ್‌ಗಳಲ್ಲಿ ಮಾತ್ರ ಪ್ರದರ್ಶನ ಆರಂಭವಾಗಲಿದೆ. ಜನರಲ್ಲಿ ಸೋಂಕಿನ ಬಗ್ಗೆ ಇನ್ನೂ ಭಯ ಹೋಗಿಲ್ಲ. ಹೀಗಾಗಿ ಎಲ್ಲ ಸ್ಕ್ರೀನ್‌ಗಳನ್ನು ಆರಂಭಿಸಿದರೂ ಜನರು ಬರುವ ವಿಶ್ವಾಸ ಇಲ್ಲ.  ಹೀಗಾಗಿ ಸದ್ಯ ಎರಡೇ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ನಡೆಯಲಿದೆ’ ಎಂದರು.

‘ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಸ್ಯಾನಿಟೈಸ್ ಮಾಡಲು ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಹೀಗಾಗಿ ತರಾತುರಿಯಲ್ಲಿ ಆರಂಭಿಸುವುದಿಲ್ಲ’ ಎಂದು ಹೇಳಿದರು.

‘ಪ್ರೇಕ್ಷಕರು ಕೂರುವ ಆಸನದ ಬಳಿ ಬಾರ್‌ಕೋಡ್ ಅಳವಡಿಸಲಾಗುವುದು. ಅವರು ಅಲ್ಲಿಯೇ ಕುಳಿತು ಆಹಾರ ಪದಾರ್ಥಗಳನ್ನು ಖರೀದಿಸಬಹುದು. ನೀರಿನ ಬಾಟಲಿ, ಪಾಪ್‌ಕಾರ್ನ್‌ ಮತ್ತು ಪ್ಯಾಕ್ ಮಾಡಿದ ಆಹಾರಗಳನ್ನು ಮಾತ್ರ ನೀಡಲಾಗುತ್ತದೆ’ ಎಂದರು.

ಅ.23ಕ್ಕೆ ಸಂಗಮ್ ಚಿತ್ರಮಂದಿರ ಆರಂಭ

ಕಲಬುರ್ಗಿ: ‘ನಗರದ ಸಂಗಮ್ ಮತ್ತು ತ್ರಿವೇಣಿ ಚಿತ್ರಮಂದಿರಗಳಲ್ಲಿ ಅ.23ರಂದು ಚಲನಚಿತ್ರ ಪ್ರದರ್ಶನ ಆರಂಭಿಸಲಾಗುವುದು’ ಎಂದು ಚಿತ್ರಮಂದಿರದ ವ್ಯವಸ್ಥಾಪಕ ಶ್ರೀಕಾಂತ ಪಾಟೀಲ ಹೇಳಿದರು.

‘ಸಂಗಮ್‌ನಲ್ಲಿ 727 ಮತ್ತು ತ್ರಿವೇಣಿ ಚಿತ್ರಮಂದಿರಲ್ಲಿ 465 ಆಸನಗಳಿವೆ. ಶೇ 50 ರಷ್ಟು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಆಸನಗಳ ಮಧ್ಯೆ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗುವುದು’ ಎಂದರು.

ಮುಕ್ತಾ ಮಲ್ಟಿಪ್ಲೆಕ್ಸ್‌ ಸದ್ಯ ಆರಂಭ ಇಲ್ಲ

‘ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಸದ್ಯ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ’ ಎಂದು ಮುಕ್ತಾ ಮಲ್ಟಿಪ್ಲೆಕ್ಸ್ ಮಾಲೀಕ ಸಂತೋಷ್ ವರ್ಗೀಸ್ ಹೇಳಿದರು.

‘ನಮ್ಮಲ್ಲಿ ಮೂರು ಸ್ಕ್ರೀನ್‌ಗಳಿವೆ. ಪ್ರತಿ ತಿಂಗಳು ₹4–5 ಲಕ್ಷ ವಿದ್ಯುತ್ ಬಿಲ್ ಬರುತ್ತದೆ. ಸರ್ಕಾರ ನಮಗೆ ಯಾವುದೇ ನೆರವು ಮತ್ತು ವಿನಾಯಿತಿ ನೀಡಿಲ್ಲ. ಹೀಗಾಗಿ ಚಿತ್ರ ಪ್ರದರ್ಶನ ಆರಂಭಿಸಿದರೆ ನಷ್ಟ ಇನ್ನೂ ಹೆಚ್ಚು ಆಗುತ್ತದೆ’ ಎಂದರು.

*************

ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ಸಿಬ್ಬಂದಿಗೆ ವೇತನ ನೀಡಿದ್ದೇವೆ. ಚಿತ್ರಮಂದಿರಗಳನ್ನು ಆರಂಭಿಸದಿದ್ದರೆ ಇನ್ನಷ್ಟು ನಷ್ಟವಾಗುತ್ತದೆ. ಹೀಗಾಗಿ ಆರಂಭಿಸಲು ಚಿಂತನೆ ನಡೆಸಿದ್ದೇವೆ
ಸಂಗಪ್ಪ ಶೆಟ್ಟಿ, ಮಾಲೀಕ, ಶೆಟ್ಟಿ ಮಲ್ಟಿಪ್ಲೆಕ್ಸ್

ಸದ್ಯ ಟಿಕೆಟ್‌ ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ. ಜನರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು
ಅಮಿತ್, ವ್ಯವಸ್ಥಾಪಕ, ಮಿರಾಜ್ ಸಿನಿಮಾಸ್‌

1981ರಲ್ಲಿ ಸಂಗಮ್ ಚಿತ್ರಮಂದಿರ ಆರಂಭವಾಗಿದೆ. ಇಷ್ಟು ದೀರ್ಘ ಅವಧಿಗೆ ಚಿತ್ರಮಂದಿರ ಮುಚ್ಚಿರಲಿಲ್ಲ. ಈಗ ಮತ್ತೆ ಆರಂಭಿಸಲು ಎಲ್ಲ ಸಿದ್ಧತೆ ನಡೆಯುತ್ತಿವೆ
ಶ್ರೀಕಾಂತ ಪಾಟೀಲ, ವ್ಯವಸ್ಥಾಪಕ ಸಂಗಮ್ ಚಿತ್ರಮಂದಿರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು