ಮಂಗಳವಾರ, ಡಿಸೆಂಬರ್ 1, 2020
21 °C
ಗೋವಿನ ಉತ್ಪನ್ನಗಳ ಪ್ರಚಾರಕ್ಕೆ ರಾಷ್ಟ್ರೋತ್ಥಾನ ಸಂಸ್ಥೆ ಸಹಯೋಗ

ಗೋಮಯ ಹಣತೆ ಮಾರಾಟಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಗೋಮಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ದೀಪಾವಳಿ ಸಂದರ್ಭದಲ್ಲಿ ದೇಸಿ ಗೋವಿನ ಸಗಣಿಯಿಂದ ತಯಾರಿಸಿದ ಹಣತೆಗಳನ್ನು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉತ್ತರ ಪ್ರಾಂತದ ಬೌದ್ಧಿಕ ಪ್ರಮುಖ ಕೃಷ್ಣಾ ಜೋಶಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಕಾಮಧೇನು ಆಯೋಗವು ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ಗೋವು ಸಾಕುವ ರೈತರು ಮತ್ತು ಗೋಶಾಲೆಗಳು ಸ್ವಾವಲಂಬಿ ಜೀವನದೊಂದಿಗೆ ಗೋಮಯ ಉತ್ಪನ್ನಗಳ ಮಹತ್ವ ಸಾರುವ ಕಾರ್ಯ ನಡೆಯುತ್ತಿದೆ. ಇದರಲ್ಲಿ ನಗರದ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ, ಪಯೋನಿಧಿ ಗೋಧಾಮ ಸೈಯದ್ ಚಿಂಚೋಳಿ, ಕುಸನೂರನ ಮಾಧವ ಗೋಶಾಲೆ ಕೈಜೋಡಿಸಿವೆ. ಈ ಗೋಶಾಲೆಗಳಲ್ಲಿ ಇರುವ ದೇಸಿ ಹಸುವಿನ ಸಗಣಿಯಿಂದ ದೀಪಗಳನ್ನು ತಯಾರಿಸುವಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಹಸಿ ಗೋಮಯ ಮತ್ತು ಗೋಮೂತ್ರ, ಅಕ್ಕಿ ಗಂಜಿ ಮಿಶ್ರಣದೊಂದಿಗೆ ಇವುಗಳನ್ನು ತಯಾರಿಸಲಾಗಿದೆ’ ಎಂದರು.

ವಿಶಿಷ್ಟ ಗೋಮಯ ದೀಪಾವಳಿ ಆಚರಿಸಿ ಅಭಿಯಾನಕ್ಕೆ ಬೆಂಗಳೂರಿನ ರಾಷ್ಟ್ರೋತ್ಥಾನ ಸಂಸ್ಥೆ ಕೈಜೋಡಿಸಿದೆ. ಗೋವನ್ನು ಬರೀ ಹಾಲಿನ ಉತ್ಪನ್ನಗಳಿಗೆ ಸೀಮಿತಗೊಳಿಸದೇ ಹಣತೆ, ಗಿಡ ನೆಡುವ ಕುಂಡ, ಧೂಪ ಹಾಗೂ ವಿವಿಧ ಮೂರ್ತಿಗಳನ್ನು ತಯಾರಿಸಹುದು. ಈ ಉತ್ಪನ್ನಗಳ ತಯಾರಿಕೆಯಿಂದ ಗೋವಿನ ಸಂರಕ್ಷಣೆಯ ಜೊತೆಗೆ ಪಾರಂಪರಿಕವಾದ ತಳಿಯ ಸಂರಕ್ಷಣೆಯ ಜೊತೆಗೆ ಕ್ಷೀಣಿಸುವ ಹಂತದ ತಳಿಯ ಸಂತತಿ ಸಂರಕ್ಷಿಸುವುದು, ರೈತರ ಆದಾಯ ದ್ವಿಗುಣಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಮಾತನಾಡಿ, ಒಟ್ಟು 10 ಸಾವಿರ ಹಣತೆಗಳನ್ನು ತರಿಸಲಾಗಿದ್ದು, ಎರಡು ಹಣತೆಗಳಿಗೆ ₹ 15 ದರ ನಿಗದಿಪಡಿಸಲಾಗಿದೆ. ಹೆಚ್ಚು ಹಣತೆ ಕೊಂಡರೆ ರಿಯಾಯಿತಿ ನೀಡಲಾಗುವುದು ಎಂದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕಾಂಬಳೆ, ಹಿಂದು ರಕ್ಷಕ ಶಿವಾಜಿ ಬ್ರಿಗೇಡ್ ಅಧ್ಯಕ್ಷ ಗುರುಶಾಂತ ಟೆಂಗಳಿ, ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಬಸವರಾಜ ಉಪ್ಪಿನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.