ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಹೆಗಲಿಗೆ ಕೇಸರಿ ಶಾಲು; ಜಾತಿಗಳ ಮಧ್ಯೆ ಜಗಳ- ಪ್ರಿಯಾಂಕ್ ಖರ್ಗೆ

Last Updated 12 ಏಪ್ರಿಲ್ 2022, 4:06 IST
ಅಕ್ಷರ ಗಾತ್ರ

ಚಿತ್ತಾಪುರ: ಬಿಜೆಪಿ ಸರ್ಕಾರಕ್ಕೆ ಬಡವರ ಮಕ್ಕಳಿಗೆ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ. ಆದರೆ, ಆ ಪಕ್ಷದ ನಾಯಕರು ಓದುವ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಜಾತಿಗಳ ನಡುವೆ ಜಗಳ ಹಚ್ಚುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದುಶಾಸಕ ಪ್ರಿಯಾಂಕ್ ಖರ್ಗೆ ದೂರಿದರು.

ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ಸೋಮವಾರ ₹26.89 ಲಕ್ಷ ವೆಚ್ಚದ ಜಲಸಂಗ್ರಹಗಾರ ಕಾಮಗಾರಿಗೆ ಚಾಲನೆ ಹಾಗೂ ₹24 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶಾಲಾ‌ ಕೋಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕ್ಷುಲ್ಲಕ ರಾಜಕೀಯಕ್ಕೆ ಬಡವರ, ರೈತರ, ಕಾರ್ಮಿಕರ ಹಾಗೂ ದಲಿತರ ಮಕ್ಕಳು ಬಲಿಯಾಗುತ್ತಿದ್ದಾರೆ. ಈಶ್ವರಪ್ಪ, ಯಡಿಯೂರಪ್ಪ ಸೇರಿದಂತೆ ಯಾವ ಬಿಜೆಪಿ ನಾಯಕರ ಮಕ್ಕಳ ಹೆಗಲ ಮೇಲೆ ಕೇಸರಿ ಶಾಲು ಹಾಕಿ, ಇಂತಹ ಕೆಲಸಕ್ಕೆ ಬಳಿಸಿಕೊಂಡಿದ್ದಾರೆಯೇ? ಜನರು ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗಿ ಮೋಸ ಹೋಗಬಾರದು ಎಂದು ತಿಳಿಸಿದರು.

‘ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪೊಲೀಸರು ಲಂಚದ ಹಣಕ್ಕೆ ಕೈ ಒಡ್ಡುತ್ತಿದ್ದಾರೆ’ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಹೇಳಿದ್ದಾರೆ. ಇದನ್ನು ಭ್ರಷ್ಟಾಚಾರ ಮುಕ್ತ ಅಡಳಿತ ಎಂದು ಕರೆಯಬೇಕೇ ಎಂದು ಪ್ರಶ್ನಿಸಿದರು.

ಅಭಿವೃದ್ದಿ ವಿಚಾರದಲ್ಲಿ ನಾನೆಂದೂ ರಾಜಕೀಯ ಮಾಡುವುದಿಲ್ಲ. ಚುನಾವಣೆಯಲ್ಲಿ ನಿರೀಕ್ಷಿತ ಮತಗಳು ಬಂದಿಲ್ಲ ಎನ್ನುವ ಕಾರಣಕ್ಕೆ ಯಾವುದೇ ಗ್ರಾಮ, ತಾಂಡಾಗಳನ್ನು ಕಡೆಗಣಿಸಿಲ್ಲ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಗಣ್ಣಗೌಡ ಪಾಟೀಲ, ಗ್ರಾಮ‌ ಪಂಚಾಯತಿ ಅಧ್ಯಕ್ಷೆ ಶಾಂತಮ್ಮ ಮುರುಗೇಂದ್ರ ಭಜಂತ್ರಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ ಭೀಣಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧೀರ, ಮುಖಂಡರಾದ ಶಂಕರ್ ವಿಜಯಪುರ, ದೇವಿಂದ್ರಪ್ಪ ಗಮಗ, ಪಿಡಿಒ ಅನಿಲಕುಮಾರ ಪಾಟೀಲ ಇದ್ದರು.

ಕ್ರಿಕೆಟ್ ಮೈದಾನಕ್ಕೆ 10 ಎಕರೆ ಜಾಗ ಗುರುತಿಸಿ

ಚಿತ್ತಾಪುರ: ಪಟ್ಟಣದಿಂದ ಒಂದು ಕಿ.ಮೀ ದೂರದಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 10 ಎಕರೆ ಜಮೀನು ಗುರುತಿಸುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ತಹಶೀಲ್ದಾರ್‌ಗೆ ಸೂಚಿಸಿದರು.

ಪಟ್ಟಣದ ಸಮೀಪದ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವಾಲಿಬಾಲ್ ಕ್ರೀಡಾಂಗಣ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ಯುವಕರು ಆಸಕ್ತಿ ತೋರುತ್ತಿದ್ದಾರೆ. ಪುರಸಭೆಯವರು 100/100 ವಿಸ್ತೀರ್ಣದ ಸಿಎ ಜಾಗ ಗುರುತಿಸಬೇಕು ಎಂದರು. ತಾಲ್ಲೂಕು ಕ್ರೀಡಾಂಗಣ ಸಮಿತಿ ರಚಿಸಿ ಮೂಲಸೌಲಭ್ಯ ಒದಗಿಸಿ, ತರಬೇತುದಾರರಿಗೆ ಮಾಸಿಕ ಸಂಬಳ ಒದಗಿಸಲು ಬ್ಯಾಂಕ್ ಖಾತೆ ತೆರೆಯಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಫುಟ್‌ಬಾಲ್, ಬಾಡ್ಮಿಂಟಿನ್ ಹಾಗೂ ಕ್ರಿಕೆಟ್‌ ಆಟಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಬ್ಯಾಡ್ಮಿಂಟನ್ ಬಗ್ಗೆ ತರಬೇತಿ ನೀಡಲು ತರಬೇತುದಾರರನ್ನು ನೇಮಿಸಬೇಕು. ಟ್ರ್ಯಾಕ್‌ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕ್ರಿಕೆಟ್ ಆಸಕ್ತರಿಗೆ ತರಬೇತಿ ನೀಡಲು ಜೈಭೀಮ ದರ್ಗೆ ಅವರ ಜತೆ ಮಾತನಾಡಿದ್ದು, ಅವರು ತರಬೇತಿ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗಾಯತ್ರಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ತಹಶೀಲ್ದಾರ್ ಉಮಾಕಾಂತ್ ಹಳ್ಳೆ, ಲೋಕೋಪಯೋಗಿ ಇಲಾಖೆ ಎಇಇ ಅಣ್ಣಪ್ಪ ಕುದರಿ, ಮುಖಂಡರಾದ ಶಿವಾನಂದ್ ಪಾಟೀಲ, ರಮೇಶ ಮರಗೋಳ, ಸಾಬಣ್ಣ ಕಾಶಿ, ಬಾಬು ಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT