ಬಿಜೆಪಿಯಿಂದ ರಾಜ್ಯದ ಅಭಿವೃದ್ದಿ ಕುಂಠಿತ: ಶಾಸಕ ಪ್ರಿಯಾಂಕ್ ಎಂ. ಖರ್ಗೆ

ಚಿತ್ತಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಪಿಎಸ್ಐ ನೇಮಕಾತಿಯಲ್ಲೂ ದುಡ್ಡು ಮಾಡುವ ದಂಧೆ ನಡೆಸಿದರು. ಹೀಗಾದರೆ ರಾಜ್ಯದ ಅಭಿವೃದ್ದಿ ಸಾಧ್ಯನಾ? ಎಂದು ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರು ಪ್ರಶ್ನಿಸಿದರು.
ತಾಲ್ಲೂಕಿನ ಕದ್ದರಗಿ ಗ್ರಾಮದಲ್ಲಿ ಪರಿಶಿಷ್ಟರ ಬಡಾವಣೆಯಿಂದ ದರ್ಗಾವರೆಗೆ ₹ 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಗುರುವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣ ಹಾಗೂ ನೌಕರಿ ನೀಡಲು ಯೋಗ್ಯತೆ ಇಲ್ಲದ ಸರ್ಕಾರ ಈ ಸಲವೂ ಕೂಡಾ ನಿಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಶೂ, ಸಾಕ್ಸ್, ಸೈಕಲ್ ಕೊಡುತ್ತಿಲ್ಲ. ಬಿಸಿಯೂಟವೂ ಕೊಡುತ್ತಿಲ್ಲ. ಎಲ್ಲ ಸೌಲಭ್ಯ ಕೇಳಿದರೆ ರಾಮ ಮಂದಿರ ಕಟ್ಟುತ್ತಿದ್ದೇವೆ ಎಂದು ಹೇಳುತ್ತಾರೆ. ಇದನ್ನು ಜನರೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ಸರ್ಕಾರ ಶೇ 40 ಕಮಿಷನ್ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಅದೇ ವಿಷಯ ದಲ್ಲಿ ಸಚಿವರಾಗಿದ್ದ ಈಶ್ವರಪ್ಪನವರು ರಾಜೀನಾಮೆ ಕೊಟ್ಟರು. ಗ್ರಾಮೀಣ ಅಭಿವೃದ್ದಿಯಲ್ಲಿ ದುಡ್ಡು ತಿಂದಿರುವುದಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು. ಕಳ್ಳರಿಗೆ ನೀವು ಬೆಂಬಲ ನೀಡಬೇಡಿ. ನಿಮ್ಮ ಪರವಾಗಿ ಕೆಲಸ ಮಾಡುವ ನಮ್ಮಂತ ಪ್ರಾಮಾಣಿಕರಿಗೆ ಆಶೀರ್ವಾದ ಮಾಡಿ ಎಂದು ಪ್ರಿಯಾಂಕ್ ಅವರು ಜನರಿಗೆ ಮನವಿ ಮಾಡಿದರು.
ಅಭಿವೃದ್ಧಿ ವಿಚಾರದಲ್ಲಿ ತಾವು ಬಹಿರಂಗ ಚರ್ಚೆಗೆ ಸಿದ್ದರಿರುವುದಾಗಿ ಹೇಳಿದ ಪ್ರಿಯಾಂಕ್, ಬಿಜೆಪಿಯವರು ಇದಕ್ಕೆ ಸಿದ್ದರಿದ್ದಾರಾ? ಸಾಧ್ಯವಿಲ್ಲ. ಅವರು ಬಹಿರಂಗ ಚರ್ಚೆಗೆ ಬರುವುದಿಲ್ಲ. ಯಾಕೆಂದರೆ ಅವರು ಓಟು ಕೇಳುವುದು ಕೇವಲ ಧರ್ಮದ ಆಧಾರದ ಮೇಲೆ ಹೊರತು ಅಭಿವೃದ್ದಿ ವಿಚಾರದಲ್ಲಿ ಅಲ್ಲ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆ ಸಮಯದಲ್ಲಿ ಕೋಲಿ, ಕಬ್ಬಲಿಗ ಹಾಗೂ ಕುರುಬ ಜನಾಂಗವನ್ನು ಎಸ್. ಟಿ ಪಟ್ಟಿಗೆ ಸೇರಿಸುವುದಾಗಿ ಭರವಸೆ ನೀಡಿದವರು ಈಗ ಎಲ್ಲಿದ್ದಾರೆ? ಇದೇ ವಿಚಾರ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಪಡೆದು ಸುಳ್ಳು ಭರವಸೆ ನೀಡಿ ಈಗ ನಾಪತ್ತೆಯಾಗಿದ್ದಾರೆ. ಇಂತಹ ಸುಳ್ಳುಗಾರರಿಗೆ ಜನರೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕಾಂಗ್ರೆಸ್ ಮುಖಂಡ ಶ್ರೀನಿವಾಸ ಸಗರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಮುಖಂಡರಾದ ಅಜೀಜ್ ಸೇಠ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ, ರಮೇಶ ಮರಗೋಳ ಮತ್ತು ಮೃತ್ಯುಂಜಯ ಸ್ವಾಮಿ, ಆಂಜನೇಯ ಜೇವಣಗಿ, ಪ್ರದೀಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.