ಬುಧವಾರ, ಅಕ್ಟೋಬರ್ 16, 2019
21 °C
ಚಿತ್ತಾಪುರ: ಸಭೆಯಲ್ಲಿ ಖಾಲಿ ಕುರ್ಚಿ ಕಂಡು ಕೆಂಡಾಮಂಡಲ

ವೇದಿಕೆಯಲ್ಲಿ ಕೂರದೆ ನಿರ್ಗಮಿಸಿದ ಪ್ರಿಯಾಂಕ್‌

Published:
Updated:
Prajavani

ಚಿತ್ತಾಪುರ: ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಜನರೇ ಇಲ್ಲದೆ ಖಾಲಿ ಕುರ್ಚಿಗಳ ದರ್ಶನವಾಗುತ್ತಿದ್ದಂತೆ ಕೆಂಡಾಮಂಡಲರಾದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪುರಸಭೆ ಮುಖ್ಯಾಧಿಕಾರಿ ಮನೋಜುಕುಮಾರ ಗುರಿಕಾರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ಜರುಗಿತು.

ತಹಶೀಲ್ದಾರ್ ಕಚೇರಿ ಹತ್ತಿರ ಹಾಗೂ ಪಟ್ಟಣದ ಕೆ.ಎಚ್.ಬಿ ಬಡಾವಣೆಯಲ್ಲಿ ತಲಾ ₹94.66 ಲಕ್ಷ ವೆಚ್ಚದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಕುಡಿಯುವ ನೀರಿನ ಮೇಲ್ಮಟ್ಟದ ಸಂಗ್ರಹಾಗಾರ ನಿರ್ಮಾಣ ಸೇರಿದಂತೆ ಒಟ್ಟು ₹3.50 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಪ್ರಿಯಾಂಕ್ ಅವರಿಂದ ಅಡಿಗಲ್ಲು ಸಮಾರಂಭ ಆಯೋಜಿಸಲಾಗಿತ್ತು.

ಸಮಾರಂಭ ಆಯೋಜಿಸಿದ್ದ ಬಜಾಜ್ ಕಲ್ಯಾಣ ಮಂಟಪದೊಳಗೆ ಶಾಸಕ ಪ್ರಿಯಾಂಕ್ ಬರುತ್ತಿದ್ದಂತೆ ಖಾಲಿ ಕುರ್ಚಿಗಳ ದರ್ಶನವಾಯಿತು. ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಮಾತ್ರ ಕುಳಿತಿದ್ದರು. ಇಡೀ ಸಭಾಂಗಣ ಖಾಲಿಯಾಗಿರುವುದು ಗಮನಿಸಿದ ಅವರು, ಅಡಿಗಲ್ಲು ಕಾರ್ಯಕ್ರಮವನ್ನು ಖಾಲಿ ಕುರ್ಚಿಗಳು ನೊಡಬೇಕಾ? ಜನರೇ ಇಲ್ಲದೆ ಕಾರ್ಯಕ್ರಮ ಹೇಗೆ ಮಾಡುತ್ತೀರಿ? ಜನರನ್ನು ಸೇರಿಸಲು ನಿಮಗೇನು ತೊಂದರೆ? ಎಂದು ಅವರು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು.

ಪುರಸಭೆ ಸದಸ್ಯರು ಜನರನ್ನು ಕರೆತರಲು ಏಕೆ ಆಗಿಲ್ಲ? ಎಲ್ಲರೂ ಸೇರಿಕೊಂಡು ಹತ್ತಾರು ಜನರನ್ನು ಕರೆಸಿದ್ದರೆ ಸಭಾಂಗಣ ತುಂಬಿರುತ್ತಿತ್ತು ಎಂದು ಶಾಸಕರು ಪುರಸಭೆ ಸದಸ್ಯರ ವಿರುದ್ಧವೂ ಅಸಮಾಧಾನ ಹೊರ ಹಾಕಿದರು.

ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಯಾರೂ ನಮಗೆ ಹೇಳಿಲ್ಲ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪುರಸಭೆ ವಿರುದ್ಧ ಆರೋಪಿಸಿದರು.

ಬೇಸರದ ನಡುವೆಯೇ ಪ್ರಿಯಾಂಕ್ ಅವರು ಅಡಿಗಲ್ಲು ನೆರವೇರಿಸಿದರು. ವೇದಿಕೆಯ ಆಸನದಲ್ಲಿ ಕುಳಿತುಕೊಳ್ಳದೆ ಸಿಟ್ಟಿನಿಂದ ನಿರ್ಗಮಿಸಿದರು. ಶಾಸಕರ ಸಿಟ್ಟು ಗಮನಿಸಿದ ಕಾಂಗ್ರೆಸ್ ಮುಖಂಡರು ಪರಸ್ಪರ ಮುಖ ನೋಡುತ್ತಾ ನಿಂತರು.

Post Comments (+)