ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

ಶಿರೂರುದಲ್ಲಿ ಸ್ಮಶಾನ ಭೂಮಿಗಾಗಿ ಡೊಂಬರ ಸಮುದಾಯ ಹೋರಾಟ
Last Updated 2 ಫೆಬ್ರುವರಿ 2020, 10:34 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ದರ್ಗಾ ಶಿರೂರು ಗ್ರಾಮದಲ್ಲಿರುವ ಡೊಂಬರ ಸಮುದಾಯದ ಜನರು ಶನಿವಾರ ಆಳಂದ–ಮಾದನ ಹಿಪ್ಪರಗಾ ಮಧ್ಯದ ಮುಖ್ಯ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.

ದರ್ಗಾ ಶಿರೂರು ಗ್ರಾಮದಲ್ಲಿ 80ಕ್ಕೂ ಹೆಚ್ಚು ಡೊಂಬರ ಕುಟುಂಬಗಳಿವೆ. ಇಲ್ಲಿನ ರೂಪ ಶಂಕರ ಶಿಂಧೆ (45) ಶುಕ್ರವಾರ ನಿಧನರಾಗಿದ್ದರು. ಅವರ ಅಂತ್ಯಸಂಸ್ಕಾರ ಶನಿವಾರ ನಡೆಯಬೇಕಿತ್ತು. ಆದರೆ ಈ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲ. ಸ್ಮಶಾನ ಭೂಮಿಗಾಗಿ ಬುಡಕಟ್ಟು ಸಮುದಾಯದ ಕುಟುಂಬಗಳು ಒತ್ತಾಯಿಸುತ್ತಿದ್ದವು.

ಹಿಂದಿನಿಂದಲೂ ಈ ಸಮುದಾಯದ ಜನರು ಮೃತರಾದರೆ ರೈತರ ಹೊಲದ ಬದುವಿನಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಈಚೆಗೆ ಇದಕ್ಕೆ ಕೆಲ ರೈತರು ಅವಕಾಶ ನಿರಾಕರಿಸುತ್ತಿದ್ದರು. ಹಾಗೆಯೇ ಶನಿವಾರ ಪರಿಶಿಷ್ಟ ಜಾತಿ ಜನರ ಸ್ಮಶಾನಭೂಮಿಗೆ ಶವ ಸಂಸ್ಕಾರಕ್ಕೆ ಹೋದಾಗ ನಿರಾಕರಿಸಲಾಯಿತು.

ಹೀಗಾಗಿ ಈ ಸಮುದಾಯದವರು ಶವವನ್ನು ಹೊತ್ತು ತಂದು ಮುಖ್ಯರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸತೊಡಗಿದರು. ಮೃತ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿ
ಸಿದರು. ಇದರಿಂದ ಮಾದನ ಹಿಪ್ಪರಗಾ, ಅಫಜಲಪುರ, ಅಕ್ಕಲಕೋಟ, ಸೋಲಾಪುರ ಮಾರ್ಗದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಸ್ಥಳಕ್ಕೆ ಕಂದಾಯ ನಿರೀಕ್ಷಕ ಪ್ರಭುಲಿಂಗ ತಟ್ಟೆ, ಪಿಎಸ್ಐ ಸುರೇಶಕುಮಾರ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು. ರಾಜಕುಮಾರ ಮುಲಗೆ ಮಾತನಾಡಿ, ‘ಡೊಂಬರ ಸಮುದಾಯದವರು ಸ್ಮಶಾನಭೂಮಿಗಗಾಗಿ ಎರಡು ವರ್ಷಗಳಿಂದ ಆಗ್ರಹಿಸಲಾಗುತ್ತಿದೆ. ಆದರೆ ಸ್ಥಳೀಯ ಆಡಳಿತ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರುತ್ತಿಲ್ಲ. ಇಂತಹ ಸಣ್ಣ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಆಪಾದಿಸಿದರು.

ಕಂದಾಯ ನಿರೀಕ್ಷಕ ಪ್ರಭುಲಿಂಗ ಮಾತನಾಡಿ, ‘ಸ್ಮಶಾನಭೂಮಿಯನ್ನು ಒದಗಿಸಲಾಗುವುದು, ಉಪ ವಿಭಾಗಾಧಿಕಾರಿಗಳ ಸಹಿಯಷ್ಟೇ ಬಾಕಿ ಇದೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಗ್ರಾಮದ ದಲಿತರ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT