ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೋಟಿಸ್ ನೀಡಿದ ಕ್ರಮವನ್ನು ವಿರೋಧಿಸಿ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸ್ಥಳದಲ್ಲಿ ಷಣ್ಮುಖ ಸಿರಸಗಿ ಎಂಬಾತ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮುಖಂಡರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಡು ರಸ್ತೆಯಲ್ಲಿ ಏಕಾಏಕಿ ಮೈಗೆ ಡೀಸೆಲ್ ಸುರಿದುಕೊಂಡ ಷಣ್ಮುಖ, ‘ನ್ಯಾಯ ಬೇಕು’ ಎಂದು ಘೋಷಣೆ ಕೂಗಿ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಪಕ್ಕದಲ್ಲೇ ಇದ್ದ ಪ್ರತಿಭಟನಕಾರರು ಅವರನ್ನು ರಕ್ಷಿಸಿದರು.
‘ಬಿಜೆಪಿ ಮತ್ತು ಜೆಡಿಎಸ್‌ನವರ ಪಾಪದ ಪಾದಯಾತ್ರೆಯ ಕುತಂತ್ರ ಯಶಸ್ವಿಯಾಗಲ್ಲ. 136 ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದು, ಯಾರಿಂದಲೂ ಸರ್ಕಾರ ಅಲುಗಾಡಿಸಲು ಆಗಲ್ಲ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ಪ್ರತಿಭಟನೆಯಲ್ಲಿ ಗುಡುಗಿದರು.