ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ತಹಶೀಲ್ದಾರ್‌ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

Published 27 ಮೇ 2024, 16:13 IST
Last Updated 27 ಮೇ 2024, 16:13 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣ ಹೊರವಲಯದ ಭೀಮಾ ಏತ ನೀರಾವರಿ ಕಚೇರಿಯ ನಿವೇಶನದಲ್ಲಿ ಸುಮಾರು 4ಕಿ.ಮೀ ದೂರದಲ್ಲಿ ಸರ್ಕಾರ ₹ 2 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಎಲ್ಲ ಕಚೇರಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ತಹಶೀಲ್ದಾರ್‌ ಕಚೇರಿ ಮುಂದೆ ಹೋರಾಟಗಾರ ಈರಣ್ಣ ಪಂಚಾಳ್ ಅವರ ನೇತೃತ್ವದಲ್ಲಿ ನಾಗರಿಕರು, ಡಬ್ಬಾ ಅಂಗಡಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಈರಣ್ಣ ಪಂಚಾಳ ಮಾತನಾಡಿ, ‘ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿ ಮಿನಿವಿಧಾನಸೌಧ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ನಿರ್ಮಾಣ ಮಾಡುವಾಗ ಮೊದಲು ಈ ಭಾಗದ ಶಾಸಕರು ಜನಾಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಇದು ಬಡವರಿಗೆ ಹೊರೆಯಾಗುತ್ತದೆ. ಜನರಿಗೆ ಗ್ರಾಮದಿಂದ ತಾಲ್ಲೂಕು ಕೇಂದ್ರಕ್ಕೆ ಬರಬೇಕಾದರೆ ದೊಡ್ಡ ಸಮಸ್ಯೆಯಾಗುತ್ತದೆ. ಅದರಲ್ಲಿ ಮತ್ತೆ ನಾಲ್ಕು ಮೀಟರ್ ಹೋಗಬೇಕಾದರೆ ಮತ್ತಷ್ಟು ಸಮಯ, ಆರ್ಥಿಕ ಹೊರೆಯಾಗುತ್ತದೆ.  ಹೀಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ತಹಶೀಲ್ದಾರ್‌ ಕಚೇರಿ ಸ್ಥಳಾಂತರ ಮಾಡಬಾರದು’ ಎಂದು ಆಗ್ರಹಿಸಿದರು.

‘ತಹಶೀಲ್ದಾರರ ಕಚೇರಿ ಪಟ್ಟಣದ ಕೇಂದ್ರ ಸ್ಥಾನದಲ್ಲಿದೆ. ಬಸ್ ನಿಲ್ದಾಣಕ್ಕೂ ಹತ್ತಿರವಿದೆ. ಬಡವರಿಗೆ ಕೆಲಸಗಳು ಬೇಗನೆ ಆಗುತ್ತವೆ. ಇಷ್ಟೆಲ್ಲ ಗೊತ್ತಿದ್ದರೂ ಈ ಭಾಗದ ಶಾಸಕರು ಈ ಬಗ್ಗೆ ಚರ್ಚೆ ಮಾಡದೆ ದಿಢೀರನೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ’ ಎಂದರು. ಒಂದು ವೇಳೆ ಸ್ಥಳಾಂತರ ಮಾಡಿದರೆ 90 ಗ್ರಾಮಗಳ ಜನರು ರೊಚ್ಚಿಗೆದ್ದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ರಾಜಕುಮಾರ್ ಬಡದಾಳ ಮಾತನಾಡಿ, ‘ಹಳೆಯ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಸುಮಾರು ಎರಡು ಎಕರೆ ಜಮೀನು ಇದೆ. ಇದರಲ್ಲಿಯೇ ಹೊಸದಾಗಿ ಮಿನಿ ವಿಧಾನಸೌಧ ನಿರ್ಮಾಣ ಮಾಡಬಹುದು. ಆದರೆ ಯಾವ ಕಾರಣಕ್ಕೆ ಪಟ್ಟಣದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ತಹಶೀಲ್ದಾರ್‌ ಕಚೇರಿ ಪಟ್ಟಣದಲ್ಲಿಯೇ ಉಳಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ಚೇತನ್ ಕುಲಕರ್ಣಿ ಹಾಗೂ ಮುಖಂಡರಾದ ಶಂಕರ್ ತಳವಾರ ಮಾತನಾಡಿ, ‘ತಹಶೀಲ್ದಾರರ ಕಚೇರಿಯನ್ನು ಸ್ಥಳಾಂತರ ಮಾಡಿದರೆ ಸಾಕಷ್ಟು ಜನರಿಗೆ ತೊಂದರೆಯಾಗುತ್ತದೆ’ ಎಂದರು.

ತಹಶೀಲ್ದಾರರ ಕಚೇರಿ ಸುತ್ತಮುತ್ತ ಖಾಸಗಿ ಕೆಲಸ ಮಾಡುವ ಭೀಮರಾಯ ಶಾಪುರ, ಅಮೀರ್ ಸೋಲಾಪುರ, ಹನುಮಂತ್ ದುದಗಿ, ರೇವಣಸಿದ್ದ ಪೂಜಾರಿ, ಅನಿಲ್ ಕುಮಾರ್ ಸಿಂಪಿ ಹಾಗೂ ವ್ಯವಸಾಯ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬೀರಣ್ಣ ಪೂಜಾರಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT