ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಶಾಮಸುಂದರ ನಗರ ನಿವಾಸಿಗಳಿಂದ ರಸ್ತೆತಡೆ, ಭಾರಿ ಬೀಗಿ ಪೊಲೀಸ್ ಬಂದೋಬಸ್ತ್
Last Updated 31 ಮಾರ್ಚ್ 2021, 3:23 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆ ಎದುರಿನಲ್ಲಿ ಯುವಕನನ್ನು ಕೊಲೆ ಮಾಡಿದ ಬಳಿಕ ಆತನ ಬೆಂಬಲಿಗರೆನ್ನಲಾದ ಯುವಕರು ನಡೆಸಿದ ಆಸ್ತಿ ಪಾಸ್ತಿ ಹಾನಿ ಹಾಗೂ ವೃದ್ಧರ ಮೇಲಿನ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿ. ಶಾಮಸುಂದರ ನಗರದ ನಿವಾಸಿಗಳು ಆಸ್ಪತ್ರೆ ಎದುರಿನ ಸೇಡಂ ರಸ್ತೆಯನ್ನು ಮಂಗಳವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಸೋಮವಾರ ಸಂಜೆಯಿಂದ ಬಡಾವಣೆಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಂಗಳವಾರವೂ ಮುಂದುವರಿಸಲಾಯಿತು.

ಮಂಗಳವಾರ ಸುಂದರ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮುಖಂಡರು ಸಭೆ ನಡೆಸುತ್ತಿದ್ದರೆ, ಇನ್ನೊಂದೆಡೆ ಮಾಂಗರವಾಡಿ ಗಲ್ಲಿಯಲ್ಲಿ ಯುವಕನ ಶವವನ್ನು ಇರಿಸಲಾಗಿತ್ತು. ಪರಿಸ್ಥಿತಿಯ ಸೂಕ್ಷ್ಮತೆ ಅರಿತುಕೊಂಡು ಪೊಲೀಸರು ಇಡೀ ದಿನ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ. ಕಿಶೋರಬಾಬು, ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀಕಾಂತ ಕಟ್ಟಿಮನಿ, ತನಿಖಾ ತಂಡದ ಮುಖ್ಯಸ್ಥ ಗಿರೀಶ ಎಸ್‌.ಬಿ., ಬ್ರಹ್ಮಪುರ, ಚೌಕ, ರಾಘವೇಂದ್ರ ನಗರ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಸುಮಾರು ಎರಡೂವರೆ ಗಂಟೆಗಳ ಕಾಲ ವಿಸ್ತೃತ ಸಭೆ ನಡೆಸಿದ ದಲಿತ ಸಮುದಾಯದ ಮುಖಂಡರು ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು.

‘ಗೂಂಡಾ ಕಾಯ್ದೆಯಡಿ ದಾಂಧಲೆ ಮಾಡಿರುವ ಮಾಂಗರವಾಡಿ ಮುಖಂಡರನ್ನು ಬಂಧಿಸಬೇಕು, ಕಳವು ಆಗಿರುವ ಸೊತ್ತುಗಳನ್ನು ಮರಳಿಸಬೇಕು, ಹಾನಿಗೊಳಗಾಗಿರುವ ವಾಹನಗಳ ಮಾಲೀಕರಿಗೆ ಪರಿಹಾರ ಕೊಡಬೇಕು, ಸುಂದರ ನಗರದವರಿಗೆ ಮಾಂಗರವಾಡಿ ಗಲ್ಲಿಯವರಿಂದ ಬೆದರಿಕೆಯಿದ್ದು, ಅವರನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಡಿಸಿಪಿ ಕಿಶೋರಬಾಬು ಅವರು 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಬಾಬು ಒಂಟಿ, ಸುರೇಶ ಭರಣಿ, ಜಗದೀಶ ವಳಕೇರಿ, ಪರಮೇಶ್ವರ ಖಾನಾಪುರ, ಸೂರ್ಯಕಾಂತ ನಿಂಬಾಳಕರ್, ಎಸ್.ಎಸ್.ತೌಡೆ, ವಿಠ್ಠಲ ವಗ್ಗನ್, ಸಚಿನ್ ಫರಹತಾಬಾದ, ಲಕ್ಷ್ಮಣ ಮೂಲಭಾರತಿ, ರಾಘವೇಂದ್ರ ಫರಹತಾಬಾದ, ಹಣಮಂತ, ಭವಾನಿ ದರ್ಗಿ, ವಿಶಾಲ ದರ್ಗಿ, ಅವಿನಾಶ ಗಾಯಕವಾಡ, ಪ್ರಕಾಶ ಔರಾದಕರ್, ಅಶ್ವಿನ್ ಸಂಕಾ, ನಾಗೇಶ ಸರಡಗಿಕರ್, ಸಾಯಬಣ್ಣ ಬೆಳಮಗಿ, ಪ್ರಕಾಶ ಅಷ್ಟಗಿ, ಸಿದ್ದಾರ್ಥ ಕೋರವಾರ, ಬಸವರಾಜ ಪಾಲ್ಗೊಂಡಿದ್ದರು.

ಗಲಭೆ; 6 ಎಫ್‌ಐಆರ್ ದಾಖಲು

ಕಲಬುರ್ಗಿ: ಯುವಕನ ಕೊಲೆ ಹಾಗೂ ನಂತರ ಬಿ.ಶಾಮಸುಂದರ ನಗರ, ಜಿಮ್ಸ್ ಆಸ್ಪ‍ತ್ರೆಯಲ್ಲಿ ನಡೆದ ಆಸ್ತಿ ಪಾಸ್ತಿ ಹಾನಿ ಪ್ರಕರಣದ ಸಂಬಂಧ ಪೊಲೀಸರು 6 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.

ಮಾಂಗರವಾಡಿ ಬಡಾವಣೆಯ ನಿವಾಸಿ ವೀರತಾ ಉಪಾಧ್ಯೆ (22) ಅವರ ಕೊಲೆ ಪ್ರಕರಣದ ಸಂಬಂಧ ಲಾಲೂಪ್ರಸಾದ್ ಹಾಗೂ ಇತರ ನಾಲ್ವರ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಆ ನಂತರ 200ಕ್ಕೂ ಅಧಿಕ ಯುವಕರಿಂದ ನಡೆದ ದೊಂಬಿಯಲ್ಲಿ ಶಾಮಸುಂದರ ನಗರದ ಹತ್ತಾರು ಬೈಕ್, ಕಾರುಗಳಿಗೆ ಆದ ಹಾನಿಗೆ ಸಂಬಂಧಿಸಿ ನಾಲ್ಕು ಎಫ್‌ಐಆರ್‌ ಹಾಗೂ ಜಿಮ್ಸ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ, ಮುಂಭಾಗದ ಗಾಜು ಒಡೆದು ಪೀಠೋಪಕರಣಗಳಿಗೆ ಹಾನಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಒಂದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಕಲಬುರ್ಗಿ ‘ಬಿ’ ಉಪವಿಭಾಗದ ಎಸಿಪಿ ಗಿರೀಶ ಎಸ್‌.ಬಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT