ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ | ಬಾಲಕಿಯರ ಕಾಣೆ ಪ್ರಕರಣ ನಿರ್ಲಕ್ಷ್ಯ: ಪಿಎಸ್ಐ ಅಮಾನತು

Published 2 ಜೂನ್ 2023, 15:30 IST
Last Updated 2 ಜೂನ್ 2023, 15:30 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಆಶ್ರಯ ಬಡಾವಣೆಯಿಂದ 8 ವರ್ಷದ ಮತ್ತು 14 ವರ್ಷದ ಇಬ್ಬರು ಬಾಲಕಿಯರು ಕಾಣೆಯಾದ ಪ್ರಕರಣವನ್ನು ನಿರ್ಲಕ್ಷ್ಯ ಮಾಡಿ, ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಕಾರಣಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಶ್ರಯ ಬಡಾವಣೆಯಲ್ಲಿ ಇಬ್ಬರು ಬಾಲಕಿಯರು ಕಳೆದ ಮೇ 26ರಂದು ಪಟ್ಟಣದಿಂದ ಕಾಣೆಯಾಗಿದ್ದರು. ಹುಡುಗಿಯರ ಸಂಬಂಧಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ಇಬ್ಬರು ಬಾಲಕಿಯರು ತಾಂಡೂರಿಗೆ ಹೋಗಲೆಂದು ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ರೈಲು ಹತ್ತಿ ಹೋಗಿದ್ದರು. ಆದರೆ, ತಾಂಡೂರಿನಲ್ಲಿ ರೈಲು ನಿಲುಗಡೆಯಾಗದೆ ನೇರವಾಗಿ ಹೈದರಾಬಾದ್‌ಗೆ ಹೋಗಿದ್ದಾರೆ. ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬಾಲಕಿಯರು ಅನಾಥರಾಗಿ ತಿರುಗಾಡುವಾಗ ಅಲ್ಲಿನ ಮಕ್ಕಳ ಸಹಾಯವಾಣಿ ಸಮಿತಿಯವರು ಹುಡುಗಿಯರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದಾರೆ. ಆಗ ಚಿತ್ತಾಪುರದಿಂದ ಬಂದಿದ್ದೇವೆ ಎಂದು ಬಾಲಕಿಯರು ಮಾಹಿತಿ ನೀಡಿದ್ದಾರೆ. ಹೀಗೆ ಬರಲು ಕಾರಣವನ್ನು ಅಧಿಕಾರಿಗಳ ಮುಂದೆ ಬಾಲಕಿಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕಿಯರ ಕಾಣೆ ಕುರಿತು ಸ್ಥಳೀಯ ಪೊಲೀಸರು ಬಾಲಕಿಯರ ಚಿತ್ರ ಸಹಿತ ಎಲ್ಲಾ ಠಾಣೆ ಸೇರಿದಂತೆ ಹೈದರಾಬಾದಿನಲ್ಲೂ ಕರಪತ್ರ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದರು. ಬಾಲಕಿಯರು ಹೈದರಾಬಾದಿಗೆ ಬಂದಿರುವ ಕುರಿತು ಅಲ್ಲಿನ ಮಕ್ಕಳ ಸಹಾಯವಾಣಿ ಸಮಿತಿಯವರು ಚಿತ್ತಾಪುರ ಸಿಪಿಐ ಶಿವಾನಂದ ಅಂಬಿಗೇರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಶಹಾಬಾದ್ ಡಿವೈಎಸ್ಪಿ ಶೀಲವಂತ ಅವರು ಪಿಎಸ್ಐ ನಂದಕುಮಾರ ಅವರನ್ನು ಕರೆದುಕೊಂಡು ಹೈದರಾಬಾದಿಗೆ ತೆರಳಿ, ಬಾಲಕಿಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.

ಬಾಲಕಿಯರು ಕಾಣೆಯಾಗಿರುವ ಪ್ರಕರಣ ಗಂಭೀರವಾಗಿ ಪರಿಗಣಿಸದೆ ಪಿಎಸ್ಐ ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಹಿರಿಯ ಪೊಲಿಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಗುರುವಾರ ರಾತ್ರಿ ಪಿಎಸ್ಐ ನಂದುಕುಮಾರ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ತಂದೆಯ ಕಿರುಕುಳಕ್ಕೆ ಮನೆ ಬಿಟ್ಟ ಬಾಲಕಿ: ಬಾಲಕಿಯೊಬ್ಬಳಿಗೆ ತಂದೆಯೇ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದ. ಅದನ್ನು ಸಹಿಸಿಕೊಳ್ಳದೆ ಪರಿಚಯಸ್ಥ ಮತ್ತೋರ್ವ ಬಾಲಕಿಯನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಮನೆ ಬಿಟ್ಟು ರೈಲು ಹತ್ತಿ ಹೈದರಾಬಾದ್‌ಗೆ ಹೋಗಿದ್ದರು ಎಂದು ಬಡಾವಣೆಯ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT