ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮತ ಸೆಳೆಯಲು ತ್ರಿವಳಿ ಸೂತ್ರ: ಪುಷ್ಪಾ ಅಮರನಾಥ್

Last Updated 12 ಡಿಸೆಂಬರ್ 2022, 6:10 IST
ಅಕ್ಷರ ಗಾತ್ರ

ಕಲಬುರಗಿ: ‘ಕಾಂಗ್ರೆಸ್‌ನ ಮಹಿಳಾ ಘಟಕವು ಮತದಾರರ ಪಟ್ಟಿ ಪರಿಶೀಲನೆ, ನಾರಿಶಕ್ತಿ ಮತ್ತುನಾ ನಾಯಕಿ ಅಭಿಯಾನಗಳ ಮೂಲಕ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ ಮತದಾರರನ್ನು ನಮ್ಮ ಪಕ್ಷದತ್ತ ಸೆಳೆಯುತ್ತೇವೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿದರು.

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಮಹಿಳಾ ಘಟಕ ಸಜ್ಜಾಗಿದೆ. ಮುಂದಿನ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹೀಗಾಗಿ, ನಾರಿಯರ ಮತಗಳನ್ನು ಪಕ್ಷದತ್ತ ಸೆಳೆಯಲು ಮೂರು ಅಭಿಯಾನಗಳನ್ನು ಹಾಕಿಕೊಂಡಿದ್ದೇವೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಸರ್ಕಾರ ಕಾಂಗ್ರೆಸ್‌ಗೆ ಬರಲಿರುವ ಮತಗಳನ್ನು ತೆಗೆದುಹಾಕುವ ಕೃತ್ಯಕ್ಕೆ ಕೈಹಾಕಿದೆ ಎಂಬುದು ಮಾಧ್ಯಮಗಳ ವರದಿಯಿಂದ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ, ಜಿಲ್ಲಾಡಳಿತದಿಂದ ಮತದಾರರ ಪಟ್ಟಿ ತರಿಸಿಕೊಂಡು, ಬಿಟ್ಟು ಹೋದ ಹೆಸರುಗಳ ನೈಜತೆಯನ್ನು ಪರಿಶೀಲಿಸಲು ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

‘ತರಬೇತಿ ಪಡೆದ ಕಾರ್ಯಕರ್ತೆಯರು ಮತದಾರರ ಪಟ್ಟಿ ಹಿಡಿದು ಗ್ರಾಮೀಣ ಭಾಗದ ಮನೆ ಮನೆಗಳಿಗೆ ತೆರಳುತ್ತಾರೆ. ನೈಜತೆಯನ್ನು ‍ಪರಿಶೀಲಿಸುವುದರ ಜತೆಗೆ ಮತದಾರರಿಗೆ ಮತದಾನದ ಬಗ್ಗೆ ತಿಳಿಹೇಳುವರು’ ಎಂದರು.

‘ನಾರಿಶಕ್ತಿ ಕಾರ್ಯಕ್ರಮದ ಮುಖೇನ ವೈದ್ಯಕೀಯ, ಎಂಜಿನಿಯರ್, ಉದ್ಯಮ, ಕೈಗಾರಿಕಾ ಸೇರಿದಂತೆ ಎಲ್ಲ ಕ್ಷೇತ್ರಗಳ ಮಹಿಳೆಯರನ್ನು ತಲುಪುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಳಿಕ ಆಯಾ ಕ್ಷೇತ್ರಗಳಿಗೆ ನಾವು ಮಾಡುವ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಬ್ಲಾಕ್‌, ಬೂತ್‌, ವಾರ್ಡ್‌ ಮಟ್ಟದಲ್ಲಿ ನಾರಿಶಕ್ತಿ ಪಡೆಗಳನ್ನು ಕಟ್ಟುತ್ತೇವೆ’ ಎಂದರು.

‘ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ವೃದ್ಧಿಸಲು ಹಾಗೂ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳು ಸಿಗುವಂತೆ ಮಾಡಲು ‘ನಾ ನಾಯಕಿ’ ಅಭಿಯಾನ ನಡೆಸಲಾಗುವುದು. ಈ ಮೂಲಕ ಮಹಿಳೆಯರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಹಿಳಾ ಘಟಕದ ಮುಖಂಡರಾದ ಲತಾ ರಠೋಡ, ಗೀತಾ ಮುದಗಲ್, ಬಸಮ್ಮ ಎಸ್‌, ರೇಣುಕಾ ಸಿಂಗೆ, ಜ್ಯೋತಿ ಮರಗೋಳ, ಜಗದೇವಿ ಚವ್ಹಾಣ, ನಿರ್ಮಲಾ ಇದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧಮ್ ತಾಕತ್ತು ಇದ್ದರೆ ಬೆಲೆ ಏರಿಕೆಯನ್ನು ತಗ್ಗಿಸಲಿ. ಸಿಲಿಂಡರ್ ದರ ಇಳಿಕೆ ಮಾಡಿ, ಬಡವರಿಗೆ ಸಬ್ಸಿಡಿ ಕೊಡಲಿ ನೋಡೋಣ

-ಪುಷ್ಪಾ ಅಮರನಾಥ್,ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT