ಕಲಬುರಗಿ: ಚಿಂಚೋಳಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಜನತಾ ದರ್ಶನ ಮತ್ತು ಜನಸ್ಪಂದನ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯಿತು.
ಚಿಂಚೋಳಿ, ಕಾಳಗಿ, ಸೇಡಂ ಸೇರಿದಂತೆ ಇತರೆ ತಾಲ್ಲೂಕುಗಳ ಸಾವಿರಾರು ಜನರು ತಮ್ಮ ಅಹವಾಲು, ಕುಂದುಕೊರತೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪರಿಹಾರ ಸಿಗಬಹುದು ಎಂಬ ಆಶಾದಾಯಕ ಭಾವದಿಂದ ಬೆಳಿಗ್ಗೆಯೇ ಬಂದು ಜಮಾಯಿಸಿದ್ದರು.
ಬೆಳಿಗ್ಗೆ 9.30ಕ್ಕೆ ಆರಂಭ ಆಗಬೇಕಿದ್ದ ಜನತಾ ದರ್ಶನ ಕಾರ್ಯಕ್ರಮ ಮಧ್ಯಾಹ್ನ 12ಕ್ಕೆ ಶುರುವಾಯಿತು. ಸುಮಾರು ಒಂದು ಗಂಟೆ ವೇದಿಕೆಯ ಕಾರ್ಯಕ್ರಮದ ಬಳಿಕ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಕೆಳಹಂತದ ಅಧಿಕಾರಿಗಳಿಂದ ವಿಳಂಬ ಆಗುತ್ತಿರುವ ಅರ್ಜಿಗಳ ವಿಲೇವಾರಿ, ವೇತನ ವಿಳಂಬದಂತಹ ದೂರುಗಳನ್ನು ಸಂತ್ರಸ್ತರು ಸಚಿವರ ಗಮನಕ್ಕೆ ತಂದರು. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿಕೊಂಡು, ವಿಳಂಬಕ್ಕೆ ಕಾರಣ ತಿಳಿದುಕೊಂಡರು. ದೂರುದಾರರ ಸಮಸ್ಯೆ ಇತ್ಯರ್ಥಕ್ಕೆ ಗಡುವು ನೀಡಿದ ಸಚಿವರು, ಮತ್ತೆ ತಪ್ಪು ಮರುಕಳಿಸಿದರೆ ಅಮಾನತು ಮಾಡುವ ಎಚ್ಚರಿಕೆ ನೀಡಿದರು.
ಕುಂದುಕೊರತೆಗಳಿಗೆ ಸಚಿವರು, ಅಧಿಕಾರಿಗಳಿಂದ ವ್ಯಕ್ತವಾಗುತ್ತಿದ್ದ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮುಖದಲ್ಲಿ ಸಂತಸ ಕಂಡುಬಂತು. ಸಾರ್ವಜನಿಕರ ಕೆಲಸವನ್ನು ಸರಿಯಾಗಿ ನಿರ್ವಹಿಸದ ಅಧಿಕಾರಿಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಜನರು ಜೈಕಾರ ಹಾಕಿದರು. ಇದೇ ರೀತಿಯಾಗಿ ಸುಮಾರು ಎರಡು ಗಂಟೆಗಳ ಕಾಲ ಸುಸೂತ್ರವಾಗಿ ಜನತಾ ದರ್ಶನ ನಡೆಯುತ್ತಿತ್ತು. ಮಧ್ಯಾಹ್ನ 2ರ ಸುಮಾರಿಗೆ ಜೋರಾಗಿ ಸುರಿದ ಮಳೆಯು ಸಾರ್ವಜನಿಕರ ಅಹವಾಲುಗಳಿಗೆ ಅಡ್ಡಿಯಾಯಿತು.
ಮಳೆ ಬೀಳುತ್ತಿದ್ದರೂ ಸಚಿವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದರು. ವೇದಿಕೆ ಮುಂಭಾಗದ ಟೆಂಟ್ ಬಟ್ಟೆಯಿಂದ ಮಳೆಯ ನೀರು ಜಿನುಗುತ್ತಿತ್ತು. ಕೆಲವರು ಟೆಂಟ್‌ನಿಂದ ಹೊರಹೋಗಿ ಸುತ್ತಲಿನ ಕಟ್ಟಡಗಳಲ್ಲಿ ಆಶ್ರಯ ಪಡೆದರು. ಮತ್ತೆ ಕೆಲವರು ತಲೆಯ ಮೇಲೆ ಕೊಡೆಗಳಂತೆ ಪ್ಲಾಸ್ಟಿಕ್ ಕುರ್ಚಿಗಳನ್ನು ಹಿಡಿದು ನಿಂತರು. ರಭಸವಾಗಿ ಮಳೆ ಬೀಳುತ್ತಿದ್ದಂತೆ ವೇದಿಕೆಯ ಮೇಲಿಂದ ಸಚಿವರು ಊಟಕ್ಕೆ ಹಾಗೂ ಸಾರ್ವಜನಿಕರು ಟೆಂಟ್‌ನಿಂದ ನಿರ್ಗಮಿಸಿದರು.
ಆದರ್ಶ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಧಿಕಾರಿಗಳು ಊಟ ಮಾಡಿದರು. ಕೆಲವು ಜನರು, ಸಂಘಟನೆಗಳ ಮುಖಂಡರು ಶಾಲೆಗೆ ಬಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.