ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಯದ ಪ್ರವಾಹ; ಮೂರು ಗಂಟೆ ರಸ್ತೆಯಲ್ಲೇ ಕಾದ ಗರ್ಭಿಣಿ

Last Updated 21 ಸೆಪ್ಟೆಂಬರ್ 2021, 13:07 IST
ಅಕ್ಷರ ಗಾತ್ರ

ಕಲಬುರ್ಗಿ: ತಾಲ್ಲೂಕಿನ ಪಟ್ಟಣ ಗ್ರಾಮದಿಂದ ನಗರಕ್ಕೆ ಬರುವ ರಸ್ತೆ ಮಧ್ಯದ ಕಿರು ಸೇತುವೆಯು ಪ್ರವಾಹದ ನೀರಲ್ಲಿ ಮುಳುಗಿ ರಸ್ತೆ ಸಂಪರ್ಕ ಬಂದ್ ಆಗಿದ್ದರಿಂದ ಗ್ರಾಮದ ಗರ್ಭಿಣಿ ಸುಮಾರು ಮೂರು ಗಂಟೆ ಸೇತುವೆಯ ಆಚೆ ಆಂಬುಲೆನ್ಸ್‌ನಲ್ಲಿ ಕಾಯಬೇಕಾಯಿತು. ಅಂತಿಮವಾಗಿ 108 ಆರೋಗ್ಯ ಕವಚ ಆಂಬುಲೆನ್ಸ್ ಚಾಲಕ ಧೈರ್ಯ ಮಾಡಿ ಸೇತುವೆ ದಾಟಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಮಂಗಳವಾರ ಬೆಳಗಿನ ಜಾವ 2.30ಕ್ಕೆ ಆರಂಭವಾದ ಮಳೆ ತಾಲ್ಲೂಕಿನ ಪಟ್ಟಣ, ಗೋಳಾ, ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಿಂದ ಪ್ರವಾಹವಾಗಿ ಪಟ್ಟಣ ಗ್ರಾಮದ ಬಳಿಯ ರಸ್ತೆಯನ್ನು ಬಂದ್ ಮಾಡಿತ್ತು. ಬೆಳಿಗ್ಗೆ ಗ್ರಾಮದ ರಸಿಕಾ ಪಾಟೀಲ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಅವರ ಕುಟುಂಬ ಸದಸ್ಯರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಬೆಳಿಗ್ಗೆ ಗ್ರಾಮಕ್ಕೆ ತೆರಳಿ ಗರ್ಭಿಣಿಯನ್ನು ಕರೆದುಕೊಂಡು ಸಮೀಪದ ಸಾವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕಿತ್ತು. ಕಿರು ಸೇತುವೆಯ ಮೇಲೆ ರಭಸದಿಂದ ನೀರು ಹರಿಯುತ್ತಿತ್ತು. ಹೀಗಾಗಿ ಗ್ರಾಮಸ್ಥರ ಸಲಹೆ ಮೇರೆಗೆ ಮೂರು ಗಂಟೆಗಳವರೆಗೆ ಕಾಯಬೇಕಾಯಿತು.

ಹೆಚ್ಚು ಹೊತ್ತು ಕಾಯುವುದರಿಂದ ಗರ್ಭಿಣಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಿಂದ ಆಂಬುಲೆನ್ಸ್ ಚಾಲಕ ಮೊಹಮ್ಮದ್ ಅಲಿ ವೇಗವಾಗಿ ಚಲಾಯಿಸಿ ಸೇತುವೆಯನ್ನು ದಾಟಿಸಿದರು.

ವಿದ್ಯಾರ್ಥಿಗಳು ವಾಪಸ್: ‘ಪಟ್ಟಣ’ ಗ್ರಾಮದಲ್ಲಿರುವ ಪ್ರೌಢಶಾಲೆಗೆ ತರಗತಿಗೆ ತೆರಳುತ್ತಿದ್ದ ಸಮೀಪದ ಹತಗುಂದಿ, ಯಳಸಂಗಿ ಗ್ರಾಮದ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ಸೇತುವೆ ಬಳಿ ಬಂದು ನಿಂತರು. ಬಹಳ ಹೊತ್ತಿನ ತನಕ ಪ್ರವಾಹದ ನೀರು ಕಡಿಮೆಯಾಗಲಿಲ್ಲ. ಹೀಗಾಗಿ, ವಾಪಸ್‌ ತಮ್ಮ ಊರುಗಳಿಗೆ ಮರಳಿದರು. ಒಂದು ತಿಂಗಳಲ್ಲಿ ಎರಡನೇ ಬಾರಿ ಇಲ್ಲಿ ಪ್ರವಾಹ ಬಂದಿತ್ತು.

ಭಾರಿ ಮಳೆಯಿಂದಾಗಿ ಆಳಂದ ರಸ್ತೆಯ ಹಲವು ಹೊಲಗಳಿಗೆ ನೀರು ನುಗ್ಗಿ ತೊಗರಿ ಬೆಳೆಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT