ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ|ಹದವಾಗಿ ಸುರಿಯುತ್ತಿರುವ ವರ್ಷಧಾರೆ: ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರು

Published 9 ಜುಲೈ 2024, 7:20 IST
Last Updated 9 ಜುಲೈ 2024, 7:20 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಹದವಾಗಿ ಸುರಿಯುತ್ತಿರುವ ಮಳೆ ಬೆಳೆಗಳಿಗೆ ಪೂರಕವಾಗಿದ್ದು, ಮುಂಗಾರು ಹಂಗಾಮಿನಲ್ಲಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು, ಉತ್ತಮ ಹವಾಮಾನದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಲ್ಲೂಕಿನ ಶೇ 95ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಉದ್ದು, ಹೆಸರು, ತೊಗರಿ, ಸೋಯಾ, ಹೈಬ್ರೀಡ್ ಜೋಳ, ಸಜ್ಜೆ ಬಿತ್ತನೆ ಮಾಡಿರುವ ರೈತರು, ಕಳೆ ಕೀಳುವ ಮತ್ತು ಎಡೆ ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.

ಐನಾಪುರ, ಚಿಮ್ಮನಚೋಡ, ಕೋಡ್ಲಿ, ಕುಂಚಾವರಂ, ಸುಲೇಪೇಟ, ನಿಡಗುಂದಾ ಸುತ್ತ ಬೆಳೆಗಳು ಹುಲುಸಾಗಿ ಬೆಳೆಯುತ್ತಿವೆ. ಅಲ್ಲಲ್ಲಿ ಹೆಸರು ಬೆಳೆಗೆ ಕೀಡೆಗಳ ಉಪಟಳ ಆರಂಭವಾಗಿದೆ ಎಂದು ರಾಯಕೋಡ ರೈತ ಬ್ರಹ್ಮಾನಂದ ರೆಡ್ಡಿ ಗೋಟೂರು ತಿಳಿಸಿದರು.

ಬೆಳೆಗಳಿಗೆ ಪೂರಕವಾಗಿ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಉತ್ತಮ ಸ್ಥಿತಿಯಲ್ಲಿವೆ. ಇದೇ ವಾತಾವರಣ ಮುಂದುವರಿದು, ಒಂದು ಮಳೆಗೆ ಎರಡು ಮೂರು ದಿನ ಬಿಟ್ಟರೆ ಇನ್ನೂ ಅನುಕೂಲವಾಗಲಿದೆ. ಮುಂದಿನ ಎರಡು ವಾರಗಳ ನಂತರ ಹೆಸರು ಬೆಳೆಯಲ್ಲಿ ಮೊಗ್ಗು ಮತ್ತು ಹೂವು ಕಾಣಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.

‘ರೈತರು ಗ್ರಾಹಕ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಿದರೆ, ಕಂತು ಜತೆಗೆ ಸೇವಾಶುಲ್ಕ ₹100 ಪಾವತಿಸಬೇಕಾಗುತ್ತದೆ. ಆದರೆ ನಮ್ಮ ಸಂಘದ ಸದಸ್ಯರು ಕಚೇರಿಯಲ್ಲಿ ವಿಮೆ ಮಾಡಿಸಿದರೆ, ಉಚಿತ ಸೇವೆ ನೀಡಲಾಗುವುದು’ ಎಂದು ಪಿಕೆಪಿಎಸ್ ಕಾರ್ಯದರ್ಶಿ ಶರಣಬಸವ ತಿಳಿಸಿದ್ದಾರೆ.

ಬೆಳೆ ವಿಮೆ ನೋಂದಣಿಗೆ ಸಲಹೆ

‘ರೈತರು ಬೆಳೆ ನೋಂದಣಿ ಮಾಡಿಸಬೇಕು. ಪ್ರಕೃತಿ ವಿಕೋಪಗಳಿಂದ ಬೆಳೆ ಕೈಗೆಟುಕದೇ ಹೋದರೆ, ವಿಮಾ ಕಂಪನಿ ರೈತರಿಗೆ ಪರಿಹಾರ ನೀಡುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್‌ ತಿಳಿಸಿದರು.

‘ತೊಗರಿ ಎಕರೆಗೆ ₹388.51, ಹೆಸರು ಬೆಳೆಗೆ ಎಕರೆಗೆ ₹293.91, ಉದ್ದು ಬೆಳೆ ಎಕರೆಗೆ ₹264.11, ಸೋಯಾ ಪ್ರತಿ ಎಕರೆಗೆ ₹330.64, ಹತ್ತಿ ಪ್ರತಿ ಎಕರೆಗೆ ₹1006.69 ರೈತರ ವಂತಿಗೆಯಾಗಿದೆ’ ಎಂದರು.

‘ರೈತರು ಬೆಳೆ ವಿಮೆ ನೋಂದಣಿಗೆ ಎಫ್‌ಐಡಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಬೆಳೆ ವಿಮೆ ನೋಂದಣಿಗೆ ಸೂರ್ಯಕಾಂತಿಗೆ ಆಗಸ್ಟ್‌ 15, ಹೆಸರು ಬೆಳೆಗೆ ಜುಲೈ 15 ಹಾಗೂ ಉಳಿದೆಲ್ಲ ಬೆಳೆಗಳಿಗೆ ಜುಲೈ 31 ಕೊನೆಯ ದಿನ. ರೈತರು ಕೊನೆ ದಿನದವರೆಗೆ ಕಾಯದೇ ಈಗಲೇ ವಿಮೆ ನೋಂದಣಿ ಮಾಡಿಸಬೇಕು. ಇಲ್ಲವಾದರೆ ಸರ್ವರ್ ಸಮಸ್ಯೆ ಎದುರಾಗಬಹುದು’ ಎಂದು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರು ಬೆಳೆ ವಿಮೆಯ ಕಂತು ಪಾವತಿಸಿದರೆ ಸೇವಾ ಶುಲ್ಕದ ವಿನಾಯಿತಿ ದೊರೆಯುತ್ತದೆ. ರೈತರು ಪ್ರಯೋಜನ ಪಡೆದುಕೊಳ್ಳಬೇಕು
ಅಜೀತ ಪಾಟೀಲ ನಿರ್ದೇಶಕ, ಡಿಸಿಸಿ ಬ್ಯಾಂಕ್ ಕಲಬುರಗಿ
ಹೆಸರು ಬೆಳೆಗೆ ಎಲೆ ತಿನ್ನುವ ಹಸಿರು ಹುಳು ಕಂಡಿವೆ. ರೈತರು ಕ್ಲೋರೊಪೈರಿಫಾಸ್‌ 2 ಎಂ.ಎಲ್ ಅಥವಾ ಇಮಾಮೆಕ್ಟಿನ್ ಬೆಂಜೋಯೇಟ್ ಶೇ 5ರಷ್ಟು ಎಸ್‌.ಜಿ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಹಾಕಿ ಸಿಂಪಡಿಸಬೇಕು
ಜಹೀರ್‌ ಅಹಮದ್, ಸಸ್ಯರೋಗ ತಜ್ಞ, ಕೆವಿಕೆ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT