ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳವಡ್ಗಿ ಗ್ರಾಮಸ್ಥರಿಗೆ ಮಳೆಗಾಲ ಎಂದರೆ ಭಯ

Last Updated 22 ಜೂನ್ 2018, 17:09 IST
ಅಕ್ಷರ ಗಾತ್ರ

ವಾಡಿ:ಮಳೆ ಬಂದರೆ ಸಾಕು ಗ್ರಾಮಸ್ಥರು ಅಕ್ಷರಶಃ ಭಯ ಪಡುತ್ತಾರೆ. ಆಗಸದಲ್ಲಿನ ಮೋಡ ಇವರ ಎದೆಯಲ್ಲಿ ನಡುಕ ಸೃಷ್ಟಿಸುತ್ತದೆ. ಮಳೆ ಬಂದರೆ ನೆರೆಗೆ ತುತ್ತಾಗುವ ಭಯದಿಂದ ಇಡೀ ರಾತ್ರಿ ಜಾಗರಣೆಗೆ ಜಾರುತ್ತಾರೆ. ರೈತರ ಜಮೀನುಗಳಿಗೆ ನುಗ್ಗುವ ನೀರು ಬೆಳೆಗಳ ಮಾರಣಹೋಮ ನಡೆಸುತ್ತದೆ. ಇದು ಪಟ್ಟಣ ಸಮೀಪದ ಬಳವಡ್ಗಿ ಗ್ರಾಮಸ್ಥರು ಮಳೆಗಾಲದಲ್ಲಿ ನಡೆಯುವ ಘಟನೆ.

ಮಳೆಗಾಲದಲ್ಲಿ ಸತತವಾಗಿ ಆವರಿಸುವ ನೆರೆ ಸ್ಥಳೀಯರ ನಿದ್ದೆಗೆಡಿಸಿದ್ದು, ಸಮಸ್ಯೆ ಭೀಕರವಾಗಿ ಕಾಡುತ್ತಿದೆ. ಮಳೆಗಾಲದಲ್ಲಿ ಗ್ರಾಮದ ಮೂಲಕ ಹಾದು ಹೋಗುವ ಹಳ್ಳ ಭೀಮಾನದಿಗೆಸೇರುತ್ತದೆ. ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ಇರುವ ದಾರಿಯಲ್ಲಿ ಕಲ್ಲು ಬಂಡೆಗಳು ಬಿದ್ದಿವೆ, ಹಳ್ಳದ ತುಂಬಾ ಜಾಲಿಗಿಡಗಳು ಬೆಳೆದು ನಿಂತಿದ್ದು ನೀರಿನ ಹರಿವಿಗೆ ತೊಡಕುಂಟು ಮಾಡಿವೆ. ಇದರಿಂದಾಗಿ ಮಳೆ ನೀರು ನೇರವಾಗಿ ಗ್ರಾಮಕ್ಕೆ ನುಗ್ಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಎಚ್ಚೆತ್ತುಕೊಳ್ಳದ ಆಡಳಿತ ಯಂತ್ರ: ನೆರೆ ಹಾವಳಿಯ ಸಮಸ್ಯೆ ಇಲ್ಲಿನ ಗ್ರಾಮಸ್ಥರನ್ನು ಪ್ರತಿವರ್ಷ ಕಾಡುತ್ತದೆ. ಕಳೆದ ವರ್ಷ ನಾಲ್ಕು ಬಾರಿ ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು ಗ್ರಾಮಸ್ಥರನ್ನು ಹೈರಾಣಾಗಿಸಿತ್ತು. ಪಾತ್ರೆ, ಸಾಮಾನುಗಳು ಹಾಗೂ ದವಸ ಧಾನ್ಯಗಳು ಮಳೆ ನೀರಿಗೆ ಆಹುತಿಯಾಗಿದ್ದವು. ರೈತರ ಜಮೀನುಗಳಿಗೆ ನುಗ್ಗಿದ ನೀರು ಬೆಳೆಗಳನ್ನು ಕೆಸರಿನಲ್ಲಿ ಮುಳುಗಿಸಿ ರೈತ ಕಂಗಲಾಗುವಂತೆ ಮಾಡಿತ್ತು. ನೆರೆಯ ಅಪಾಯ ಅರಿತ ಗ್ರಾಮಸ್ಥರು, ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹಲವು ರಾತ್ರಿಗಳನ್ನು ಆತಂಕದಲ್ಲಿ ಕಳೆದಿದ್ದರು.

ಎಸ್ ಯುಸಿಐ ನೇತೃತ್ವದಲ್ಲಿ ಹೋರಾಟ: ನೆರೆಹಾವಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರು, ತಮ್ಮ ಸಮಸ್ಯೆಗೆ ಸ್ಪಂಧಿಸದ ಆಡಳಿತದ ವಿರುದ್ದ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಕಳೆದ ವರ್ಷ, ಚಿತ್ತಾಪೂರ ತಹಶೀಲ್ದಾರ್‌ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವುದರ ಮೂಲಕ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದರು.

ನೆರವಿಗೆ ಧಾವಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ನೆರೆ ಹಾವಳಿಗೆ ತುತ್ತಾಗಿ ನಷ್ಟಕ್ಕೀಡಾದ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಪರಿಹಾರ ಒದಗಿಸಲು ಗ್ರಾಮಸ್ಥರು ಆಗ್ರಹಿಸಿದ್ದರು. ಆದರೆ ಅಧಿಕಾರಿಗಳು ನೀಡಿದ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಕ್ಷೇತ್ರದ ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರು, ನಮ್ಮ ಗ್ರಾಮದ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

– ಸಿದ್ದರಾಜ ಎಸ್‌.ಮಲಕಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT