ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌: ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ

ಈದ್‌ ಉಲ್‌ ಫಿತ್ರ್‌ಗಾಗಿ ಹೊಸ ಬಟ್ಟೆ, ಒಡವೆ ಖರೀದಿ ಜೋರು, ಬಗೆಬಗೆಯ ಖಾದ್ಯ, ಮಕ್ಕಳ ಆಟಿಕೆಗಳೂ ಬಿಕರಿ
Last Updated 2 ಮೇ 2022, 3:04 IST
ಅಕ್ಷರ ಗಾತ್ರ

ಕಲಬುರಗಿ:ತಿಂಗಳ ಉಪವಾಸ ವ್ರತ ಮಾಡಿದ ಮುಸ್ಲಿಂ ಸಮುದಾಯದವರೆಲ್ಲ ಈಗ ‘ಈದ್‌ ಉಲ್‌ ಫಿತ್ರ್‌’ಗಾಗಿ ಕಾಯುತ್ತಿದ್ದಾರೆ. ಹಬ್ಬಕ್ಕಾಗಿ ಬಟ್ಟೆ, ಆಭರಣ, ತಹರೇವಾರು ತಿನಿಸುಗಳ ಖರೀದಿ ಭರರಿಂದ ಸಾಗಿದೆ. ಭಾನುವಾರವಂತೂ ನಗರದ ಮಾರುಕಟ್ಟೆಗಳಿಗೆ ಜನಸಾಗರವೇ ಹರಿದುಬಂತು.

ಎರಡು ವರ್ಷಗಳಿಂದ ಕೊರೊನಾ ಕಾಟದಿಂದಾಗಿ ಕಳೆಗುಂದಿದ್ದ, ಹಬ್ಬ ಈ ಬಾರಿ ಮತ್ತೆ ತನ್ನ ಗತವೈಭವ ಮರಳಿ ಪಡೆದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ, ಮುಸ್ಲಿ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ಹುಮ್ಮಸ್ಸಿನ ಓಡಾಟ ಕಾಣುತ್ತಿದೆ.

ಮಾರುಕಟ್ಟೆಯಲ್ಲಂತೂ ಜನವೋ ಜನ. ಮುಸ್ಲಿಂ ಚೌಕ್‌, ದರ್ಗಾ ರಸ್ತೆ, ಎಂಎಸ್‌ಕೆ ಮಿಲ್‌, ಸೂಪರ್‌ ಮಾರ್ಕೆಟ್‌, ಮೋಮಿನ್‌ಪುರದ ಖೂನಿ ಹವಾಲಾ ಪ‍್ರದೇಶ, ಸಂತ್ರಾಸವಾಡಿ, ಶಹಾಬಜಾರ್‌ ಸೇರಿದಂತೆ ಎಲ್ಲೆಡೆ ಹಬ್ಬದ ವಿಶೇಷ ವಸ್ತ್ರಗಳು ಹಾಗೂ ಖಾದ್ಯಗಳ ಖರೀದಿ ಜೋರಾಗಿದೆ.

ಖಾದ್ಯಗಳ ಕೇಂದ್ರವಾದ ಮುಸ್ಲಿಂ ಚೌಕ್‌: ನಗರದ ಮುಸ್ಲಿಂ ಚೌಕ್‌ ಎಂದರೆ ರಂಜಾನ್‌ನಲ್ಲಿ ನೆನಪಾಗುವುದು ಬಗೆಬಗೆಯ ಖಾದ್ಯಗಳ ಸಂತೆ.ಸಿಹಿ ತಿಂಡಿಗಳಾದ ಹೈದರಾಬಾದ್‌ ಹಲೀಮ್‌, ಖದ್ದು ಕೀರ್‌, ಜಿಲೇಬಿ, ಹಾರೀಸ್‌, ಖಾರದ ತಿನಿಸುಗಳಾದ ಚಿಕನ್‌ ಮತ್ತು ಮಟನ್‌ ಬಿರಿಯಾನಿ, ಚಿಕನ್‌ಕೀಮಾ, ಚಿಕನ್‌ ಸಮೋಸಾ, ಲೆಗ್‌ಪೀಸ್‌, ಚಿಕನ್‌ಫ್ರೈ, ತಂದೂರಿ ಮತ್ತು ರುಮಾಲಿ ರೋಟಿಗೆ ಈಗ ಬೇಡಿಕೆ ಹೆಚ್ಚಿದೆ. ಭಜ್ಜಿ, ಸಮೋಸಾ, ಸಂಡಿಗೆ, ಪಪ್ಸ್‌, ಬಗೆಬಗೆಯ ಹಣ್ಣುಗಳ ಸಲಾಡ್‌... ಸೇರಿದಂತೆ ಸ್ಥಳದಲ್ಲೇ ತಿನ್ನುವ ತಿನಿಸುಗಳದ್ದೇ ಇಲ್ಲಿ ಕಾರುಬಾರು.

ಸಂಜೆಗೆ ಹೆಚ್ಚಿದ ಖರೀದಿ: ಮಾರುಕಟ್ಟೆ, ಮಾಲ್‌ ಹಾಗೂ ಮಳಿಗೆಗಳಲ್ಲೂ ಹೊಸ ಬಟ್ಟೆ, ಬೆಡ್‌ಷೀಟ್‌, ಬ್ಲಾಂಕೆಟ್‌, ಚಪ್ಪಲಿ, ಶೂಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ದೃಶ್ಯ ಕಂಡುಬಂತು. ಝಗಮಗಿಸುವವಿದ್ಯುತ್‌ ಬೆಳಕಿನಲ್ಲಿ ಖರೀದಿ ಇನ್ನಷ್ಟು ಉತ್ಸಾಹ ನೀಡಿತು.

ಇಳಿಸಂಜೆಯಲ್ಲೂ ಬಿಸಿಗಾಳಿ ಸುಳಿಯುತ್ತಿದ್ದರೂ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ. ಮಕ್ಕಳೊಂದಿಗೆ ಮಾರುಕಟ್ಟೆಗೆ ಬಂದ ಹಲವರು ಪೋಷಕರು ಅವರಿಗೆ ಇಷ್ಟವಾದ ಬಟ್ಟೆಗಳನ್ನು ಖರೀದಿಸುವುದು ಸಾಮಾನ್ಯವಾಗಿತ್ತು.ಹಬ್ಬದ ಪ್ರಯುಕ್ತ ಚಿಣ್ಣರ ಉತ್ಸಾಹವೂ ಇಮ್ಮಡಿಯಾಗಿತ್ತು.

ಬಟ್ಟೆ ಖರೀದಿಯೂ ಜೋರು: ‘ವರ್ಷದ 11 ತಿಂಗಳು ನಡೆಯುವಷ್ಟು ವ್ಯಾಪಾರ ರಂಜಾನ್‌ ಒಂದೇ ತಿಂಗಳಲ್ಲಿ ನಡೆಯುತ್ತದೆ. ಹೀಗಾಗಿ, ಹೈದರಾಬಾದ್‌, ಪುಣೆ, ಸೊಲ್ಲಾಪುರ, ಗುಜರಾತ್‌ ಮುಂತಾದ ಕಡೆಗಳಿಂದಲೂ ವೈವಿಧ್ಯಮಯ ಸಿದ್ಧ ಉಡುಪುಗಳನ್ನು ತರಿಸಿದ್ದೇವೆ. ಈ ಬಾರಿ ಕೂಡ ಉತ್ತಮ ವ್ಯಾಪಾರವಾಗುತ್ತಿದೆ’ ಎನ್ನುವುದು ವರ್ತಕ ಎಂ.ಡಿ. ಪಾಷಾ ಹೇಳಿಕೆ.

ಸೂಪರ್‌ ಮಾರ್ಕೆಟ್‌ನ ಬಟ್ಟೆ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಜನರ ಅನುಕೂಲಕ್ಕಾಗಿ ವ್ಯಾಪಾರಿಗಳು ಫುಟ್‌ಪಾತ್‌ ಹಾಗೂ ರಸ್ತೆ ಪಕ್ಕದಲ್ಲೇ ಬಟ್ಟೆಗಳನ್ನು ಇಟ್ಟರು. ಅತ್ಯುತ್ತಮ ವಿನ್ಯಾಸದ, ಗುಣಮಟ್ಟದ ಬಟ್ಟೆಗಳು ನೈಜ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಎನ್ನುವ ಕಾರಣಕ್ಕೆ ಜನ ಮುಗಿಬಿದ್ದರು.

ಚಿಲ್ಲರೆ ವ್ಯಾಪಾರಿಗಳಂತೂ ಕೇವಲ ₹ 150ಕ್ಕೆ ಸೀರೆ, ₹ 200ಕ್ಕೆ ಚೂಡಿದಾರ್‌, ₹ 150ಕ್ಕೆ ಪ್ಯಾಂಟ್‌, ಟಿ–ಷರ್ಟ್‌... ಎಂದು ಕೂಗುತ್ತ ಗ್ರಾಹಕರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT