ಬುಧವಾರ, ಮಾರ್ಚ್ 29, 2023
26 °C

ಕಲಬುರಗಿ: ಶಾಲೆಗಳಲ್ಲಿ ಮೊಟ್ಟೆ ವಿತರಣೆ ನಿಲ್ಲಿಸದಿರಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಶಾಲೆಗಳಲ್ಲಿ ಮೊಟ್ಟೆ ವಿತರಿಸುವ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು, ಅಲ್ಲದೇ ಇದನ್ನು 10ನೇ ತರಗತಿಯವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿಯು ಮುಖ್ಯಮಂತ್ರಿಗೆ ಮನವಿ ಮಾಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಭಾಗೀಯ ಹೆಚ್ಚುವರಿ ಆಯುಕ್ತ ನಳಿನ್‌ ಅತುಲ್‌ ಹಾಗೂ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಮಂಗಳವಾರ ಮನವಿಯ ಪ್ರತಿ ಸಲ್ಲಿಸಿದ ಮುಖಂಡರು, ‘ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಹೆಚ್ಚಾಗಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ
ಸಮೀಕ್ಷಾ ವರದಿಯ ಆಧಾರದ ಮೇಲೆ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಒಂದರಿಂದ ಎಂಟನೆ ತರಗತಿಯ ಮಕ್ಕಳಿಗೆ ಮೊಟ್ಟೆ ವಿತರಣಾ ಯೋಜನೆ ಜಾರಿಗೆ ತಂದಿದ್ದನ್ನು ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ’ ಎಂದು ತಿಳಿಸಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ 75ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಮೊಟ್ಟೆ ವಿತರಣೆ ಬಹಳ ಉಪಯುಕ್ತ. ಇದರಿಂದ ಶಾಲಾ ದಾಖಲಾತಿ ಮತ್ತು ಹಾಜರಾತಿಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಶಾಲೆಯಲ್ಲಿ ಶೇ 80ರಷ್ಟು ಮಕ್ಕಳು ಮೊಟ್ಟೆ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ, ಯಾರ ಒತ್ತಡಕ್ಕೂ ಸರ್ಕಾರ ಸೊಪ್ಪು ಹಾಕಬಾರದು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಅಪೌಷ್ಟಿಕತೆ ಮತ್ತು ಮಕ್ಕಳ ಆರೋಗ್ಯದ ಕುರಿತು ಗಮನವಿರದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಕ್ಕಳ ಆಹಾರದಲ್ಲಿ ರಾಜಕೀಯ ಮಾಡಲು ಹೊರಟಿವೆ. ಈ ಕ್ಷುಲ್ಲಕ ರಾಜಕಾರಣವನ್ನು ಬದಿಗೊತ್ತಿ ಸರ್ಕಾರ ತೆಗೆದುಕೊಂಡ ಈ ಗಟ್ಟಿ ನಿರ್ಧಾರವನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದೂ ಸಮಿತಿ ಮುಖಂಡರು ಕೋರಿದ್ದಾರೆ.

ಮುಖಂಡರಾದ ಅಶ್ವಿನಿ ಮದನಕರ್, ಪೂಜಾ ಸಿಂಗೆ, ಭವಾನಿ ಪ್ರಸಾದ್‌ ಇತರರು ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು