ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಮೀಟರ್‌ ರಸ್ತೆಯಾದರೂ ನಿರ್ಮಿಸಿ: ರೆವೆನ್ಯೂ ಲೇಔಟ್‌ ಕಾಲೊನಿ ನಿವಾಸಿಗಳ ಆಗ್ರಹ

Published 12 ಸೆಪ್ಟೆಂಬರ್ 2023, 5:09 IST
Last Updated 12 ಸೆಪ್ಟೆಂಬರ್ 2023, 5:09 IST
ಅಕ್ಷರ ಗಾತ್ರ

ಕಲಬುರಗಿ: ‘ಮಳೆ ಬಂದಾಗೊಮ್ಮೆ ರೆವೆನ್ಯೂ ಲೇಔಟ್‌ಗೆ ಸಂಪರ್ಕಿಸುವ ರಸ್ತೆ ಕೆಸರುಗದ್ದೆಯಂತಾಗುತ್ತದೆ. ರಸ್ತೆ ಯಾವುದು? ತಗ್ಗು ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಕಾಲೊನಿಗೆ ಕನಿಷ್ಠ 150 ಮೀಟರ್‌ ಸಿ.ಸಿ ರಸ್ತೆಯಾದರೂ ನಿರ್ಮಿಸಿದರೆ ಅನುಕೂಲ ಆಗುತ್ತದೆ...’

ಇಲ್ಲಿನ ವಾರ್ಡ್‌ ಸಂಖ್ಯೆ 52ರಲ್ಲಿರುವ ವರ್ದಾನಗರದ ‘ರೆವೆನ್ಯೂ ಲೇಔಟ್‌’ ಕಾಲೊನಿ ನಿವಾಸಿಗಳ ಒಕ್ಕೊರಲು ಒತ್ತಾಯ ಇದು.

ಕೆಇಬಿ ಕಲ್ಯಾಣಮಂಟಪದ ಎದುರಿನ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಕೊನೆಯಲ್ಲಿ ಈ ಕಾಲೊನಿ ಇದೆ. 15–20 ಮನೆಗಳಿದ್ದು, ವಿದ್ಯುತ್‌ ಕಂಬಗಳಿಗೆ ದೀಪ ಅಳವಡಿಸಿಲ್ಲ. 24x7 ಕುಡಿಯುವ ನೀರು ಕಲ್ಪಿಸಿಲ್ಲ. ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಸೊಳ್ಳೆಗಳ ಕಾಟ ಅಧಿಕವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

‘ಕಾಂಕ್ರೀಟ್‌ ರಸ್ತೆ ಇಲ್ಲದ ಕಾರಣ ಓಡಾಡಲು ಸಮಸ್ಯೆ ಆಗಿದೆ. ಮೂಲಸೌಕರ್ಯ ಒದಗಿಸುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ಜಿಲ್ಲಾಧಿಕಾರಿ ಅವರ ಜನಸ್ಪಂದನಾ ಕಾರ್ಯಕ್ರಮದಲ್ಲೂ ಮನವಿ ಕೊಟ್ಟಿದ್ದೇವೆ. ಪ್ರತಿ ಬಾರಿ ಏನಾದರೊಂದು ಕಾರಣ ಅಥವಾ ಭರವಸೆ ಮಾತ್ರ ಸಿಗುತ್ತಿದೆ. ಪರಿಹಾರ ಮಾತ್ರ ಒದಗಿಸುತ್ತಿಲ್ಲ’ ಎಂದು ಶಂಕರ್‌ ಅವಣ್ಣೆರ್‌, ಅಣ್ಣಪ್ಪ ಪರೀಟ ಅಸಮಾಧಾನ ವ್ಯಕ್ತಪಡಿಸಿದರು.

‘ಮಳೆ ಬಂದಾಗೊಮ್ಮೆ ಕಾಲೊನಿ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕು. ವಾಹನಗಳ ಸಂಚಾರವಂತೂ ಸಾಧ್ಯವಿಲ್ಲ. ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಎತ್ತಿಕೊಂಡು ಸಿಮೆಂಟ್‌ ರಸ್ತೆಯವರೆಗೂ ದಾಟಿಸಬೇಕು. ನಾವು ಕೂಡ ಚಪ್ಪಲಿ ಕೈಯಲ್ಲಿ ಹಿಡಿದು ದಾಟಬೇಕು’ ಎಂದು ದೇವಿದಾಸ, ಆನಂದ ಕೊಪ್ಪದ ಅವರು ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಶಾಸಕರಿಂದ ಭರವಸೆ: ‘ತಿಂಗಳ ಹಿಂದೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾಲೊನಿಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದಾರೆ. ನಾವು ಅನುಭವಿಸುತ್ತಿರುವ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ’ ಎಂದು ನಿವಾಸಿಗಳು ತಿಳಿಸಿದರು.

ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಬಚ್ಚಲು ನೀರು ಮುಂದೆ ಸಾಗುವುದಿಲ್ಲ. ಸಂಜೆಯಾಗುತ್ತಲೇ ಸೊಳ್ಳೆ ಕಾಟ ಹೆಚ್ಚುತ್ತದೆ. ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.
ಸಿದ್ದಣ್ಣ ಮಹೀಂದ್ರಕರ್‌ ಕಾಲೊನಿ ನಿವಾಸಿ
ರೆವೆನ್ಯೂ ಲೇಔಟ್‌ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಮೇಯರ್‌ ಅವರೊಂದಿಗೆ ಚರ್ಚಿಸಲಾಗಿದೆ. ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.
ಶೋಭಾ ಗುರುರಾಜ ದೇಸಾಯಿ ಮಹಾನಗರ ಪಾಲಿಕೆ ಸದಸ್ಯೆ
ಕಾಲೊನಿ ಸಮಸ್ಯೆ ಕುರಿತು 6 ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ವಿದ್ಯುತ್‌ ಕಂಬಗಳಿಗೆ ಬಲ್ಬ್‌ ಸಹ ಹಾಕುತ್ತಿಲ್ಲ.
– ಮಲ್ಲನಗೌಡ ಬಮಶೆಟ್ಟಿ ಕಾಲೊನಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT