ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ | 4 ತಿಂಗಳಾದರೂ ಸಿಗದ ಗೌರವಧನ: 254 ಅತಿಥಿ ಶಿಕ್ಷಕರ ಪರದಾಟ

Published 26 ಅಕ್ಟೋಬರ್ 2023, 5:46 IST
Last Updated 26 ಅಕ್ಟೋಬರ್ 2023, 5:46 IST
ಅಕ್ಷರ ಗಾತ್ರ

ವರದಿ – ಸಿದ್ದರಾಜ ಎಸ್ ಮಲ್ಕಂಡಿ

ವಾಡಿ: ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ 254 ಜನ ಅತಿಥಿ ಶಿಕ್ಷಕರಿಗೆ ನಾಲ್ಕು ತಿಂಗಳು ಕಳೆದರೂ ಬಿಡಿಗಾಸು ಕೈ ಸೇರಿಲ್ಲ. ದಸರಾ ಹಬ್ಬಕ್ಕೂ ಸಹ ಹಣ ಕೈಸೇರದೇ ಇರುವುದು ಅತಿಥಿ ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ.

ನಾಲ್ಕೂವರೇ ತಿಂಗಳು ಕಳೆದರೂ ವೇತನ ದೊರಕಿಲ್ಲ ಎನ್ನುವ ಕೊರಗಿನೊಂದಿಗೇ ಪಾಠ ಮಾಡುವುದರಲ್ಲಿ ತೊಡಗಿ ಸಿಕೊಂಡಿದ್ದಾರೆ. ಶಿಕ್ಷಕರಿಗೆ ಗೌರವಧನ ವಿಳಂಬದಿಂದ ದಸರಾ ಹಬ್ಬದ ಸಂಭ್ರಮ ಕಸಿದಂತಾಗಿದೆ. ಮನಸ್ಸಿನಲ್ಲಿ ಕೊರಗು ಇಟ್ಟುಕೊಂಡು ಮುಖದಲ್ಲಿ ನಗು ತಂದುಕೊಂಡು ಪಾಠ ಮಾಡಬೇಕಾದ ಅನಿವಾರ್ಯತೆ ಅತಿಥಿ ಶಿಕ್ಷಕರಿಗೆ ಇದೆ.

ಚಿತ್ತಾಪುರ ತಾಲ್ಲೂಕಿನಲ್ಲಿ 254 ಜನ ಅತಿಥಿ ಶಿಕ್ಷಕರಿದ್ದು ಕಳೆದ ಜೂನ್ ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಗೌರವಧನ ಸಿಗದೆ ಕಂಗಾಲಾಗಿದ್ದಾರೆ.

ಈ ಮೊದಲು 180 ಜನರಿಗೆ ಮಾತ್ರ ಆಡಳಿತಾತ್ಮಕ ಅನುಮೋದನೆ ಪಡೆದು ಪಾಠಕ್ಕೆ ಅವಕಾಶ ನೀಡಲಾಗಿತ್ತು. ಆದರೆ ನಂತರ ಶಿಕ್ಷಕರ ಕೊರತೆ ನಿಗದೇ ಇದ್ದಾಗ ಮತ್ತೆ 74 ಜನರಿಗೆ ಅವಕಾಶ ನೀಡಲಾಯಿತು. ಈಗ ಹೆಚ್ಚುವರಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೂ ಸಹ ಹಣಕಾಸು ಹೊಂದಿಸಬೇಕಾಗಿರುವುದರಿಂದ ವೇತನಕ್ಕೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ಬಹಳಷ್ಟು ಜನ ಅತಿಥಿ ಶಿಕ್ಷಕರು ಕುಟುಂಬ ನಿರ್ವಹಣೆ ಜವಾಬ್ದಾರಿ ಹೊಂದಿದ್ದು ಇವರ ಆದಾಯದ ಮೇಲೆಯೇ ಕುಟುಂಬ ನಿಂತಿದೆ. ತಮ್ಮ ಮೂಲ ನಿವಾಸ ಬಿಟ್ಟು ದೂರದ ಪ್ರದೇಶದವರೆಗೆ ಸಾರಿಗೆ ವೆಚ್ಚ ಭರಿಸಿ ತೆರಳುವ ಅತಿಥಿ ಶಿಕ್ಷಕರ ಗೋಳು ಮುಗಿಲು ಮುಟ್ಟಿದೆ. ಕೆಲವು ಕಡೆ ಕೈಸಾಲ ಮಾಡಿ ಸಾರಿಗೆ ವೆಚ್ಚ ಭರಿಸುತ್ತಿದ್ದು, ವೇತನದ ದಾರಿ ಕಾಯುತ್ತಿದ್ದಾರೆ.

ನಮ್ಮದು ಬಡ ಕುಟುಂಬ ಇದ್ದು, ಇಡೀ ಕುಟುಂಬ ನಮ್ಮ ಆದಾಯ ನೆಚ್ಚಿಕೊಂಡಿದೆ. ಚಿಕ್ಕ ಚಿಕ್ಕ ಮಕ್ಕಳು ಮನೆಯಲ್ಲಿದ್ದು ಮಕ್ಕಳ ಅಸೆ ಆಕಾಂಕ್ಷೆ ಪೂರೈಸಲು ಸಹ ಸಾಧ್ಯವಾಗುತ್ತಿಲ್ಲ. ಇಲಾಖೆ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಅತಿಥಿ ಶಿಕ್ಷಕರು.

ಸರ್ಕಾರಿ ಶಾಲೆಗಳಲ್ಲಿ 2012ರಿಂದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ರಿದ್ದಾರೆ. ಅತಿಥಿ ಶಿಕ್ಷಕರಿಗೆ ಈ ಹಿಂದೆ ₹ 7,500 ಗೌರವಧನ ನೀಡಲಾಗುತ್ತಿತ್ತು. ಹಲವು ಮನವಿಗಳ ಬಳಿಕ ಪ್ರಸಕ್ತ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬಡ ಕೂಲಿಕಾರ್ಮಿಕ ಹಾಗೂ ಮಧ್ಯಮ ವರ್ಗದವರೇ ಇರುವ ಶಿಕ್ಷಕರು ಶಾಲೆಗೆ ತೆರಳಲು ಖರ್ಚಿಗಾಗಿ ತಮ್ಮ ಪೋಷಕರ ಬಳಿ ಕೈಯೊಡ್ದುವ ಸ್ಥಿತಿ ಇದೆ.

ನಮ್ಮ ಹೆತ್ತವರು ನಮಗೆ ಕಷ್ಟಪಟ್ಟು ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಅತಿಥಿ ಶಿಕ್ಷಕರಗಿದ್ದರೂ ನಮಗೆ ಸ್ವಾಭಿಮಾನದ ಬದುಕು ಅಸಾಧ್ಯವಾಗಿದೆ. ಕಡಿಮೆ ಇದ್ರೂ ಸರಿ ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಪ್ರತಿ ತಿಂಗಳು ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರಿ ಶಿಕ್ಷಕರು ಹಾಗೂ ನಮ್ಮ ಮಧ್ಯೆ ಆಗಾಧ ವ್ಯತ್ಯಾಸ ಮಾಡಲಾಗುತ್ತಿದೆ ಎಂದು ಹಲವು ಅತಿಥಿ ಶಿಕ್ಷಕರು ಅಳಲು ತೋಡಿಕೊಂಡಿದ್ದು, ಕೂಡಲೇ ವೇತನ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ವಿಜಯದಶಮಿ ಹಬ್ಬಕ್ಕಾದರೂ ಹಣ ಕೈಸೇರುತ್ತದೆ ಅಂದುಕೊಂಡಿದ್ದೆವು. ವೇತನ ಕೈಸೇರಿದ್ದರೆ ಹಬ್ಬದ ಸಂಭ್ರಮ ಹೆಚ್ಚಾಗುತ್ತಿತ್ತು.
ಮರೆಮ್ಮ ಯಡ್ಡಳ್ಳಿ , ಅತಿಥಿ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT