ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಿರಿ ಮೀರಿದ ಮರಳು, ವರ್ಗಾವಣೆ ದಂದೆ

ಕಲಬುರ್ಗಿಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ
Last Updated 2 ಜೂನ್ 2020, 11:44 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮರಳು ಹಾಗೂ ವರ್ಗಾವಣೆ ದಂದೆಯಲ್ಲಿ ತೊಡಗಿದ್ದಾರೆ. ಎಂಜಿನಿಯರ್‌ಗಳ ವರ್ಗಾವಣೆಯಂತೂ ಮಿರಿ ಮೀರಿದೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಶಾಳ, ಸೇಡಂ, ಚಿತ್ತಾಪುರ, ಅಫಜಲಪುರದಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳಲ್ಲಿ ಮರಳನ್ನು ಎಗ್ಗಿಲ್ಲದೇ ಸಾಗಿಸಲಾಗುತ್ತಿದೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದರು.

‘ಜಿಲ್ಲೆಗೆ ಸಾವಿರಾರು ವಲಸೆ ಕಾರ್ಮಿಕರು ಬಂದಿದ್ದು, ಅವರಿಗೆ ಸೂಕ್ತ ಕೊರೊನಾ ತಪಾಸಣೆ ನಡೆಯುತ್ತಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್‌ ವಾರ್ಡ್‌ ಎಂದು ಬದಲಾಯಿಸಲಾಗಿದೆ. ಆದರೆ, ಇಲ್ಲಿಯವರೆಗೆ ಸಂಸದ ಡಾ.ಉಮೇಶ ಜಾಧವ ಅವರು ಒಂದು ನಯಾಪೈಸೆಯನ್ನೂ ರೋಗಿಗಳ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರದಿಂದ ತಂದಿಲ್ಲ. ಅವರೂ ಸ್ವತಃ ವೈದ್ಯರಿದ್ದು, ಆ ಕನಿಷ್ಠ ಬದ್ಧತೆಯೂ ಅವರಿಗಿಲ್ಲ. ರೋಗಿಯೊಬ್ಬರನ್ನು ಬೆಂಗಳೂರಿನಿಂದ ಕಲಬುರ್ಗಿಗೆ ಕರೆತರುವ ವಿಚಾರದಲ್ಲಿಯೂ ರಾಜಕೀಯ ಮಾಡಿದರು. ನಾವು ಆಂಬುಲೆನ್ಸ್‌ ಬಿಲ್‌ ಕಟ್ಟಿದ್ದರೂ ತಾವೇ ಕರೆತಂದಿರುವುದಾಗಿ ಹೇಳಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದರು’ ಎಂದು ಟೀಕಿಸಿದರು.

‘ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಶಾಸಕರು ತಮಗೆ ಹಣ ಕೇಳುತ್ತಾರೆ ಎಂದು ನೇರ ಆರೋಪ ಮಾಡುತ್ತಾರೆ. ಜಿಲ್ಲಾಧಿಕಾರಿ ವರ್ಗಾವಣೆ ಪ್ರಹಸನ ನಡೆದ ಸಂದರ್ಭದಲ್ಲಿ ಸಂಸದರು, ಶಾಸಕರು ವಿಡಿಯೊಗಳನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ವರ್ಗಾವಣೆ ತಾವು ಮಾಡಿಸಿಲ್ಲ ಎಂದು ಸಮಜಾಯಿಷಿ ನೀಡಿದರು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡಂತೆ ಇವರೆಲ್ಲ ವರ್ತಿಸುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಯನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಕರೆತರಲಾಯಿತು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಅಧಿಕಾರ ವಹಿಸಿಕೊಳ್ಳದಂತೆ ಸೂಚಿಸಲಾಯಿತು. ಇದನ್ನೆಲ್ಲ ನೋಡುತ್ತಿದ್ದರೆ ಆಡಳಿತ ಹಳಿ ತಪ್ಪಿದಂತೆ ಕಾಣಿಸುತ್ತಿದೆ’ ಎಂದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಕೊರೊನಾ ತಡೆಗಟ್ಟಲು ಏನು ಮಾಡುತ್ತಿದ್ದೇವೆ ಎಂಬುದೇ ಗೊತ್ತಿಲ್ಲ. ವಲಸೆ ಕಾರ್ಮಿಕರನ್ನು ಕರೆತರುವಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಲಾಯಿತು. ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಕಾರ್ಮಿಕರನ್ನು ಕಳಿಸಲು ಎರಡು ಪಟ್ಟು ದರ ವಿಧಿಸಲು ಮುಂದಾದಾಗ ಕಾಂಗ್ರೆಸ್ ವತಿಯಿಂದ ₹ 1 ಕೋಟಿ ಹಣವನ್ನು ಪ್ರಯಾಣ ವೆಚ್ಚವನ್ನಾಗಿ ಕೆಎಸ್‌ಆರ್‌ಟಿಸಿ ಎಂ.ಡಿ.ಗೆ ನೀಡಲು ಹೋದಾಗ ಎಚ್ಚೆತ್ತುಕೊಂಡ ಸರ್ಕಾರ ಕೂಡಲೇ ಉಚಿತ ಬಸ್‌ ವ್ಯವಸ್ಥೆ ಮಾಡಿತು. ಈ ವಿಚಾರ ಮುಂಚೆಯೇ ಬರಲಿಲ್ಲವೇಕೆ ಎಂದು ಪ್ರಶ್ನಿಸಿದರು.

‘ನಾನ್‌ ಕೋವಿಡ್‌ ಸಾವುಗಳ ಬಗ್ಗೆ ಮಾಹಿತಿ ಇಲ್ಲ’

ಕೋವಿಡ್ ರೋಗಿಗಳ ಆರೈಕೆಗಾಗಿ ಜಿಮ್ಸ್‌ ಹಾಗೂ ಇಎಸ್‌ಐ ಆಸ್ಪತ್ರೆಗಳನ್ನು ಬಳಸಿಕೊಂಡಿದ್ದರಿಂದ ಕೋವಿಡ್‌ ಅಲ್ಲದ ರೋಗಗಳಿಂದ ಬಳಲುತ್ತಿರುವವರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇಂತಹ ಎಷ್ಟು ಸಾವುಗಳು ಸಂಭವಿಸಿವೆ ಎಂಬ ಬಗ್ಗೆ ಜಿಲ್ಲಾಡಳಿತ ಇನ್ನೂ ಮಾಹಿತಿ ನೀಡಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಮಧುಮೇಹ, ರಕ್ತದೊತ್ತಡ, ಹಾವು ಕಡಿತ, ಡಯಾಲಿಸಿಸ್‌ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ನಿಲ್ಲಿಸಿದ್ದರಿಂದ ರೋಗಿಗಳಿಗೆ ದಿಕ್ಕೇ ತೋಚಿದಂತಾಗಿದೆ. ವಾಡಿಯಲ್ಲಿ ಬಾಲಕಿಯೊಬ್ಬಳಿಗೆ ಹಾವು ಕಡಿದಾಗ ಎಲ್ಲಿಗೆ ಕರೆದೊಯ್ಯಬೇಕು ಎಂಬುದೇ ಗೊತ್ತಾಗಲಿಲ್ಲ. ಇದರಿಂದ ಅನಿವಾರ್ಯವಾಗಿ ಸಾವಿಗೀಡಾಗಬೇಕು. ಇಂತಹ ನಿರ್ಲಕ್ಷ್ಯದಿಂದ ಹಲವು ಸಾವುಗಳು ಸಂಭವಿಸಿವೆ. ಆದರೆ, ಅದರ ಲೆಕ್ಕ ಕೊಡುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT