ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ| ಶಿಥಿಲ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ!

ಜಿಲ್ಲೆಯಲ್ಲಿ ದುರಸ್ತಿಯಾಗದ ಸರ್ಕಾರಿ ಶಾಲೆಗಳ ಕಟ್ಟಡಗಳು; ಕೆಕೆಆರ್‌ಡಿಬಿ ಅನುದಾನವಿದ್ದರೂ ಕಾಮಗಾರಿ ವಿಳಂಬ
Last Updated 6 ಜೂನ್ 2022, 2:14 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಾದ್ಯಂತ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಕಳೆದ ಮೇ 17ರಂದೇ ಆರಂಭವಾಗಿದ್ದು, ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ, ಸುಸಜ್ಜಿತ ಕೊಠಡಿಗಳಲ್ಲಿ ಕುಳಿತು ಓದಬೇಕೆಂಬ ಮಕ್ಕಳ ಆಸೆ ಬಹುತೇಕ ಕಡೆ ಇನ್ನೂ ಈಡೇರಿಲ್ಲ.

ಪಾಳು ಬಿದ್ದಂತಿರುವ, ಮೇಲ್ಛಾವಣಿಯ ಸಿಮೆಂಟ್ ಉದುರಿರುವ, ಸುಣ್ಣ ಬಣ್ಣ ಕಂಡು ದಶಕಗಳಾದ, ಕುಳಿತುಕೊಳ್ಳಲು ಸಮತಟ್ಟಾದ ಬಂಡೆಗಳೂ ಇಲ್ಲದ, ಗಾಳಿ, ಬೆಳಕಿನ ವ್ಯವಸ್ಥೆ ಸರಿಯಾಗಿರದ ಕೊಠಡಿಗಳು ಜಿಲ್ಲೆಯ ಹಲವೆಡೆ ಇನ್ನೂ ಕಂಡು ಬರುತ್ತಿವೆ.
ಈ ಕುರಿತು ‘ಪ್ರಜಾವಾಣಿ‘ ತಂಡ ವಿವಿಧ ಶಾಲೆಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದ ಸಂದರ್ಭದಲ್ಲಿ ಈ ಅಂಶಗಳು ಕಂಡು ಬಂದವು.

ಡಾ.ಡಿ.ಎಂ. ನಂಜುಂಡಪ್ಪ ವರದಿಯ ಅನುಸಾರ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ತಾಲ್ಲೂಕುಗಳಲ್ಲಿನ ಶೈಕ್ಷಣಿಕ ಹಾಗೂ ಆರೋಗ್ಯ ವ್ಯವಸ್ಥೆಗಳನ್ನು ಉತ್ತಮಪಡಿಸಲು ಕಲ್ಯಾಣ ಕರ್ಣಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಆದ್ಯತೆ ಮೇರೆಗೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಅದಕ್ಕೆ ತಕ್ಕಂತೆ ಕೆಕೆಆರ್‌ಡಿಬಿಯೂ ಶಾಲಾ ಕೊಠಡಿಗಳ
ಕಟ್ಟಡ, ಕಾಂಪೌಂಡ್, ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ.
ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆಗಳ ಮೈದಾನವನ್ನೂ ಅಲ್ಲಲ್ಲಿ ನಿರ್ಮಿಸಲಾಗುತ್ತಿದೆ.

ಆದರೆ, ಅನುಷ್ಠಾನ ಹಂತದಲ್ಲಿನ ಸಮಸ್ಯೆಯಿಂದಾಗಿ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ ಎಂಬ ಮಾತುಗಳು ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಸದಸ್ಯರಿಂದ ಕೇಳಿ ಬರುತ್ತಿವೆ.

ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸರಿಯಾದ ಕೊಠಡಿ ಸೌಕರ್ಯ ಇಲ್ಲದ್ದಕ್ಕೆ ಹೊರಗಡೆಯೇ ಕುಳಿತು ಪಾಠ ಕೇಳಿದ್ದರು. ಆಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಇತ್ತೀಚಿನದಾದರೂ ಬಂಡೆಗಳು ಸರಿದಿದ್ದವು. ಹೀಗಾಗಿ, ದಾನಿಗಳ ನೆರವಿನಿಂದ ಎಸ್‌ಡಿಎಂಸಿ ಸದಸ್ಯರು ಬಂಡೆಗಳನ್ನು ಸರಿ ಮಾಡಿಕೊಂಡಿದ್ದಾರೆ. ಆದರೆ,
ಶಾಲೆಯ ಬಣ್ಣ ಮಾಸಿ ಹೋಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮತ್ತೆ ಸುಣ್ಣ ಬಣ್ಣ ಬಳಿಯಲು ಹಣಕಾಸಿನ ಕೊರತೆ
ಎದುರಾಗಿದೆ. ಕಲಬುರಗಿ ಹೊರವಲಯದಲ್ಲಿರುವ ಜಾಫರಾಬಾದ್‌ನ ಸರ್ಕಾರಿ ಶಾಲೆಯ ಕಟ್ಟಡವೂ ಶಿಥಿಲಗೊಂಡಿದ್ದು, ಕೊಠಡಿ ದುರಸ್ತಿ ಅಥವಾ ಹೊಸ ಕೊಠಡಿಗಳ ನಿರ್ಮಾಣಕ್ಕಾಗಿ ಶಾಲೆಯ ಮಕ್ಕಳು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಅದೇ ಶಾಲೆಯ ಆವರಣದಲ್ಲಿರುವ ಉರ್ದು ಮಾಧ್ಯಮದ ಶಾಲಾ ಕಟ್ಟಡದ ಸ್ಥಿತಿಯೂ ಭಿನ್ನವೇನಿಲ್ಲ.

ವಿದ್ಯಾರ್ಥಿಗಳಿಗೆ ತಕ್ಕಂತೆ ಕೊಠಡಿಗಳಿಲ್ಲ: ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 268 ಮಕ್ಕಳು ವಿದ್ಯಾರ್ಥಿಗಳು ಇದ್ದಾರೆ. ಆದರೆ ಉತ್ತಮ ಕೊಠಡಿಗಳು ಇಲ್ಲ. ಇಜೇರಿ ಸೇರಿದಂತೆ ತಾಲ್ಲೂಕಿನ ಬಹುತೇಕ ಶಾಲೆಗಳ ಪರಿಸ್ಥಿತಿ ಶಿಥಿಲಾವಸ್ಥೆಯಲ್ಲಿ ಇವೆ. ಕೆಲ ಕಡೆಗಳಲ್ಲಿ ಶಾಲೆಗಳಲ್ಲಿ ಶೌಚಾಲಯಗಳು, ಕುಡಿಯುವ ನೀರು, ಶಿಕ್ಷಕರು ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ.

ಆಳಂದ: ಹಳೆಯ ಶಾಲೆ ಕಟ್ಟಡದಲ್ಲಿ ಬಿರುಕು

ಆಳಂದ ಪಟ್ಟಣದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಯುಳ್ಳ ಸಿಪಿಎಸ್ ಶಾಲೆ ಈಗ ದುಃಸ್ಥಿತಿ ಹಂತ ತಲುಪಿದೆ. 70 ವರ್ಷದ ಶಾಲಾ ಕಟ್ಟಡವು ಸಂಪೂರ್ಣ ಕುಸಿತದ ಹಂತ ತಲುಪಿದ್ದು, ಹೀಗಾಗಿ ಇಲ್ಲಿ ಕಲಿಯುವ ಮಕ್ಕಳ ಸಂಖ್ಯೆಯೂ ಕುಸಿದಿದೆ.

ಕನ್ನಡ ಮತ್ತು ಉರ್ದು ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು ಈ ಕಟ್ಟಡದಲ್ಲಿ ನಡೆಯುತ್ತಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗುರುಭವನದ ಕಟ್ಟಡಕ್ಕೆ ಹೊಂದಿಕೊಂಡೇ ಸಿಪಿಎಸ್ ಶಾಲೆ ಇದೆ. ಆದರೆ 20 ವರ್ಷದ ಹಿಂದೆ 600ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯ ಹಳೆಯ ತರಗತಿಗಳ ಕೋಣೆಗಳು ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿ ಇರುವುದರಿಂದ ಕಳೆದ ವರ್ಷದಿಂದ ಅರ್ಧಕ್ಕೂ ಹೆಚ್ಚು ತರಗತಿಗಳಲ್ಲಿ ಕಲಿಕಾ ಚಟುವಟಿಕೆಗಳು ಕೈಗೊಳ್ಳುತ್ತಿಲ್ಲ. ಹೊಸದಾಗಿ ಎರಡು ಕಟ್ಟಡಗಳಲ್ಲಿ ತರಗತಿ ಆರಂಭಿಸಿದರೂ ಸಮರ್ಪಕ ಕೋಣೆಗಳ ಕೊರತೆ ಶಾಲೆಯಲ್ಲಿ ಕಾಡುತ್ತಿದೆ.

ಶಿಥಿಲಾವಸ್ಥೆಯಲ್ಲಿ ಹಲಕರ್ಟಿ ಶಾಲೆ

ಹಲಕರ್ಟಿ (ವಾಡಿ): ರಾಷ್ಟ್ರೀಯ ಹೆದ್ದಾರಿ 150ಕ್ಕೆ ಹೊಂದಿಕೊಂಡಿರುವ ಹಲಕರ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ. ಮಳೆ ಬಂದರೆ ಕೋಣೆಗಳು ಸೋರುವುದರಿಂದ ಮಕ್ಕಳ ಪಾಠ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ.

ಶಾಲೆಯ 13 ಕೋಣೆಗಳ ಪೈಕಿ 11 ಕೋಣೆಯ ಗೋಡೆ, ಮೇಲ್ಛಾವಣಿಗಳು ಬಿರುಕುಬಿಟ್ಟಿರುವ ಪರಿಣಾಮ ಆತಂಕದಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. 1ರಿಂದ 8ನೇ ತರಗತಿವರೆಗೆ ಶಾಲೆಯಿದ್ದು, 260 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಶಾಲೆಯ ಕೋಣೆಗಳ ಮೇಲ್ಚಾವಣಿ ಕಿತ್ತು ಬೀಳುತ್ತಿದೆ. ತುಕ್ಕು ಹಿಡಿದ ಕಬ್ಬಿಣದ ರಾಡುಗಳು ಹೊರಜಗತ್ತು ಇಣುಕಿ ನೋಡುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಯಾವುದೇ ಸಮಯದಲ್ಲಿ ಬೀಳುವ ಅಪಾಯ ಇದೆ. ಮೇಲ್ಚಾವಣಿಯ ಸಿಮೆಂಟ್ ಪದೇ ಪದೇ ಕಳಚಿ ಬೀಳುತ್ತಿದ್ದು, ಮಕ್ಕಳನ್ನು ಕೋಣೆಯೊಳಗೆ ಕೂಡಿಸಲು ಶಿಕ್ಷಕರು ಹೆದರುತ್ತಿದ್ದಾರೆ.

ಹೊಸ ಕೋಣೆಗಳ ನಿರ್ಮಾಣಕ್ಕೆ ಅನುದಾನ ಕೋರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈಚೆಗೆ ಎರಡು ಹೊಸ ಕೋಣೆ ನಿರ್ಮಿಸಲಾಗಿದೆ. ಒಟ್ಟು 13 ಕೋಣೆಗಳ ಅಗತ್ಯವಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಕನಕಪ್ಪ ಮ್ಯಾಗೇರಿ ತಿಳಿಸಿದರು.

‘ಮೂಲಸೌಕರ್ಯ ಸಮಸ್ಯೆ’

ಆಳಂದದ ಸಿಪಿಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿ ದೊಡ್ಡ ಅಧಿಕಾರಿಗಳು ಆಗಿದ್ದಾರೆ. 40 ವರ್ಷದ ಹಿಂದೆ ಸಾವಿರಾರು ಮಕ್ಕಳು ಓದಿದ ತಾಲ್ಲೂಕಿನ ಏಕೈಕ ಶಾಲೆಗೆ ಅಗತ್ಯ ಮೂಲಸೌಲಭ್ಯಗಳು ಒದಗಿಸುವುದು, ಈಗಿರುವ ಶಾಲೆ ಕಟ್ಟಡದ ಜೀರ್ಣೋದ್ದಾರ ಕಾರ್ಯ ಕೈಗೊಂಡು ಅಭ್ಯಾಸ ಮಾಡುವ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ಜವಾಬ್ದಾರಿಯು ಪುರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು.

ಮಹಾದೇವ ಜಿಡ್ಡೆ, ಆಳಂದ, ನಿವಾಸಿ


‘ಬೇಕು ಶಾಲಾ ಪರಿಷ್ಕರಣಾ ಸಮಿತಿ’

ಪಠ್ಯ ಪರಿಷ್ಕರಣಾ ಸಮಿತಿಯಂತೆಯೆ, ಶಾಲಾ ಕಟ್ಟಡ ಪರಿಷ್ಕರಣಾ ಸಮಿತಿಯನ್ನೂ ಮಾಡಬೇಕಿದೆ. ಶಿಕ್ಷಣಕ್ಕೆ ಮೂಲ ಶಿಸ್ತು. ಮಕ್ಕಳಿಗೆ ಶಿಸ್ತಿನ ಶಿಕ್ಷಣ ಕಲಿಸಲು ಒಳಾಂಗಣ ನೋಟ ಎಷ್ಟು ವ್ಯವಸ್ಥಿತವಾಗಿರುತ್ತದೋ ಅಷ್ಟೇ ಹೊರಾಂಗಣ ನೋಟವೂ ಸುಂದರವಾಗಿರಬೇಕು. ಹಲವು ಶಾಲೆಗಳ ಕಟ್ಟಡಗಳು ಬಿರುಕು ಬಿಟ್ಟಿವೆ. ಮಳೆಗಾಲದಲ್ಲಿ ಸೋರುತ್ತಿವೆ. ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕೇಳುವ ಸ್ಥಿತಿ ಇನ್ನೂ ಇದೆ.

ಅಶ್ವಿನಿ ಮದನಕರ, ಸಂಚಾಲಕಿ, ಪ್ರಬುದ್ಧ ಭಾರತ ಸಂಘರ್ಷ ಸಮಿತಿ


‘ಹೆಚ್ಚಿನ ಅನುದಾನ ಕೊಡಬೇಕು’

ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಲಾಗದಷ್ಟು ಪರಿಸ್ಥಿತಿಗೆ ಶಿಕ್ಷಣ ಇಲಾಖೆ ಬಂದಿರುವುದಕ್ಕೆ ಕಾರಣ ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಬಜೆಟ್ ಪ್ರಮಾಣ ಕಡಿಮೆಯಾಗುತ್ತಿರುವುದು. ಒಟ್ಟು ಬಜೆಟ್‌ನ ಶೇ 10ರಷ್ಟು ಹಣವನ್ನು ಮೀಸಲಿಟ್ಟರೆ ಮಾತ್ರ ಉತ್ತಮ ಕಟ್ಟಡಗಳನ್ನು ನಿರ್ಮಿಸಬಹುದು.

ಅಶ್ವಿನಿ, ಶಿಕ್ಷಣ ಉಳಿಸಿ ಸಮಿತಿ ನಾಯಕಿ


‘ಜೀವಕ್ಕೆ ಹಾನಿಯಾದರೆ ಯಾರು ಹೊಣೆ?’

ಬಹಳ ವರ್ಷಗಳಿಂದ ಕಟ್ಟಡಗಳು ಶಿಥಿಲಗೊಂಡಿವೆ. ಕೂಡಲೇ ಇವುಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು. ಮಳೆಗಾಲದಲ್ಲಿ ಛತ್ತಿನ ಪ್ಲಾಸ್ಟರ್ ಕಿತ್ತಿ ಮಕ್ಕಳ ಮೇಲೆ ಬಿದ್ದು ಜೀವ ಹಾನಿಯಾದರೆ ಅದಕ್ಕೆ ಯಾರು ಹೊಣೆ?

ಅಶೋಕ ಕಲ್ಲೂರ, ಎಸ್‌ಡಿಎಂಸಿ ಅಧ್ಯಕ್ಷ, ಅಳ್ಳಗಿ (ಕೆ), ಅಫಜಲಪುರ ತಾಲ್ಲೂಕು


‘ಶಾಲೆಗಳ ಸ್ವರೂಪ ಬದಲಾಗಬೇಕು’

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸುರಕ್ಷತೆಯೂ ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಇಂದು ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳ ಸ್ವರೂಪವೂ ಬದಲಾಗಬೇಕು. ಶಾಲಾ ಕಟ್ಟಡ ಮತ್ತು ಪರಿಸರ ಸುರಕ್ಷಿತವಿಲ್ಲದ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ?

ವಿಠ್ಠಲ ಪೂಜಾರಿ, ಪೋಷಕ ಅಳ್ಳಗಿ (ಕೆ), ಅಫಜಲಪುರ

* ಪೂರಕ ಮಾಹಿತಿ: ಸಂಜಯ ಪಾಟೀಲ, ಸಿದ್ದರಾಜ ಮಲಕಂಡಿ, ಮಂಜುನಾಥ ದೊಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT