ಸೋಮವಾರ, ಮಾರ್ಚ್ 1, 2021
29 °C
ಮೊದಲ ದಿನ ಶೇ 47ರಷ್ಟು ಮಕ್ಕಳು ಶಾಲೆಗೆ; ಮುಂದಿನ ವಾರ ಹಾಜರಾತಿ ಹೆಚ್ಚುವ ಸಾಧ್ಯತೆ

ಉತ್ಸಾಹದಿಂದ ಶಾಲೆಗೆ ಬಂದ ಗ್ರಾಮೀಣ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೋಮವಾರ ಶೇ 47.39ರಷ್ಟು ಹಾಜರಾತಿ ಕಂಡು
ಬಂದಿದೆ ಎಂದು ಡಿಡಿಪಿಐ ಕಚೇರಿ ಮೂಲ
ಗಳು ತಿಳಿಸಿವೆ. ನಗರದ ಶಾಲೆಗಳಲ್ಲಿ ಶೇ 39.8 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ 48ರಷ್ಟು ಹಾಜರಾತಿ ಇತ್ತು.

ಚಿತ್ತಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ; ಶೇ 69ರಷ್ಟು, ಚಿಂಚೋಳಿ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ; ಶೇ 43ರಷ್ಟು ಹಾಜರಾತಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಹಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಒಂದು ವಾರ
ದಲ್ಲಿ ಹಾಜರಾತಿ ಹೆಚ್ಚಲಿದೆ ಎನ್ನುವುದು ಡಿಡಿಪಿಐ ಕಚೇರಿಯ ಅಧಿಕಾರಿಗಳ ಹೇಳಿಕೆ.

ಗುಲಬರ್ಗಾ ಉತ್ತರ ವಲಯದ ಶಾಲೆಗಳಾದ ಕೆಎಸ್‌ಆರ್‌ಪಿ ಹಿರಿಯ ಪ್ರಾಥಮಿಕ ಶಾಲೆ, ತಾಜ್‌ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಖಾಜಾ ಕಾಲೊನಿ, ರೋಜಾ ಕಾಲೊನಿ, ಮದೀನಾ ಕಾಲೊನಿ, ತಾಜ್‌ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಬೆಳಿಗ್ಗೆಯಿಂದಲೇ ಆಟ– ಪಾಠಗಳು ನಡೆದವು ಎಂದು ಜಿಲ್ಲಾ ಶಿಕ್ಷಕರ ಸಂಘದ ಉತ್ತರ ವಲಯದ ಅಧ್ಯಕ್ಷ ಶೇಖ್‌ ಮುಜೀಬ್ ತಿಳಿಸಿದರು. ಅಲ್ಲದೇ, ದಕ್ಷಿಣ ವಲಯದ ಕೋಟನೂರ ಶಾಲೆಯಲ್ಲಿ ಶೇ 60ರಷ್ಟು ಹಾಜರಾತಿ ಕಂಡುಬಂದಿದೆ ಎಂದು ಶಾಲೆ ಶಿಕ್ಷಕರು ತಿಳಿಸಿದರು.

ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರಿಂದ ಅಂತರ ಕಾಪಾಡಿ
ಕೊಳ್ಳಲು ಯಾವುದೇ ತೊಂದರೆ ಆಗಲಿಲ್ಲ. ಕೆಲವೆಡೆ ಮಾತ್ರ ಸ್ಯಾನಿಟೈಸ್‌ ಇಟ್ಟಿದ್ದು ಕಂಡುಬಂತು. ಹಲವು ಶಿಕ್ಷಕರು ಈಗಾಗಲೇ ಪಾಲಕರ ಮನೆಗಳಿಗೆ ಭೇಟಿ ನೀಡಿದ್ದಾರೆ. ಮತ್ತೆ ಕೆಲವು ಶಾಲೆಗಳಲ್ಲಿ ಸೋಮವಾರವೇ ಪಾಲಕರ ಸಭೆ ಕೂಡ ನಡೆಸಿದ್ದಾರೆ.

ತಾಲ್ಲೂಕುಗಳಲ್ಲಿ ಉತ್ತಮ ಹಾಜರಾತಿ: ಅಫಜಲಪುರ ತಾಲ್ಲೂಕಿನಲ್ಲಿ ಮೊದಲ ದಿನವೇ 6 ರಿಂದ 8 ತರಗತಿಯ ಮಕ್ಕಳು 114 ಶಾಲೆಗಳಲ್ಲಿ ಶೇ 55ರಷ್ಟು ಹಾಜರಾತಿ ಪಡೆದಿದ್ದಾರೆ. ಮಕ್ಕಳು ಬೆಳಿಗ್ಗೆ ಶಾಲೆಗೆ ನಗುತ್ತಲೇ ಶಾಲೆಗೆ ಬಂದರು.

ಕಾಳಗಿಯಲ್ಲಿ ಕೂಡ ಹಲವು ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಬಂದರು. ಮಧ್ಯಾಹ್ನದ ಊಟ, ಕುಡಿಯಲು ನೀರು ಮನೆಯಿಂದ ತರಲು ಮಕ್ಕಳಿಗೆ ಸೂಚಿಸಲಾಗಿದೆ. ಅವರು ಮಾಸ್ಕ್ ಧರಿಸಿದ್ದರು ಮತ್ತು ಅಂತರ ಕಾಪಾಡಿಕೊಂಡು ಕೂತಿದ್ದರು. ಆಯಾ ಶಾಲಾ ಶಿಕ್ಷಕರು ಮಕ್ಕಳಿಗೆ ಆಗಾಗ ಸಾಬೂನಿನಿಂದ ಸ್ವಚ್ಛವಾಗಿ ಕೈ ತೊಳೆದುಕೊಳ್ಳಲು ಸೂಚಿಸಿದರು.

ಆಳಂದ ತಾಲ್ಲೂಕಿನ ಕಡಗಂಚಿ, ನರೋಣಾ, ರುದ್ರವಾಡಿ, ಖಜೂರಿ, ಅಂಬೇವಾಡ, ದೇಗಾಂವ, ಮುನ್ನೋಳ್ಳಿ, ಕಿಣಿಸುಲ್ತಾನ, ಮೋಘಾ(ಕೆ), ಜೀರಹಳ್ಳಿ, ಹಳ್ಳಿ ಸಲಗರ, ಕೋರಳ್ಳಿ , ಕಣಮಸ ಮತ್ತಿತರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿತ್ತು.

ಚಿಂಚೋಳಿ ತಾಲ್ಲೂಕಿನಲ್ಲಿ 6 ರಿಂದ 10ನೇ ತರಗತಿ ಒಟ್ಟು 19,573 ಮಕ್ಕಳಲ್ಲಿ 8,418 ಮಕ್ಕಳು ಹಾಜರಾಗಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.