ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನ 13ರಿಂದ

ರಾಜ್ಯದ ಪ್ರಮುಖ ವಿಜ್ಞಾನ ಲೇಖಕರು, ತಜ್ಞರಿಂದ ವಿವಿಧ ಗೋಷ್ಠಿಗಳು
Last Updated 11 ಡಿಸೆಂಬರ್ 2019, 11:14 IST
ಅಕ್ಷರ ಗಾತ್ರ

ಕಲಬುರ್ಗಿ: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸುವ ಉದ್ದೇಶದಿಂದ ಇದೇ 13ರಿಂದ 15ರವರೆಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಂಗಣದಲ್ಲಿ 12ನೇ ಅಖಿಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಲಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ, ‘ಮೂರುದಿನಗಳ ಈ ಸಮ್ಮೇಳನದಲ್ಲಿ 1000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ವಿಜ್ಞಾನಿಗಳು, ತಂತ್ರಜ್ಞರು, ವಿಜ್ಞಾನ ಸಂವಹನಕಾರರು, ಕೃಷಿ ತಜ್ಞರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ವಾಯುಗುಣ ವೈಪರೀತ್ಯ–ಭೂಕುಸಿತ, ನೆರೆ ಹಾವಳಿ, ವಿಜ್ಞಾನ ಮತ್ತು ನಂಬಿಕೆ, ವಿಜ್ಞಾನ ಬೋಧನೆಯಲ್ಲಿ ತುರ್ತಾಗಿ ಆಗಬೇಕಾದ ಬದಲಾವಣೆ, ವಿಜ್ಞಾನದ ಸಾಮಾಜೀಕರಣ ಮತ್ತು ಇತಿಹಾಸ, ಬಾಹ್ಯಾಕಾಶದ ಸಾಧನೆಗಳು, ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ, ತಂತ್ರಜ್ಞಾನದ ಪ್ರಶಸ್ತ ಬಳಕೆ, ಮಹಿಳೆ ಮತ್ತು ವಿಜ್ಞಾನ ವಿಷಯಗಳು ಕುರಿತು ಗೋಷ್ಠಿಗಳು ನಡೆಯಲಿವೆ’ ಎಂದರು.

ಉಪಮುಖ್ಯಮಖ್ಯಮಂತ್ರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಜಿಲ್ಲೆಯ ಸಂಸದ, ಶಾಸಕರು ಹಾಗೂ ಜನಪ್ರತಿನಿಧಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಭೂವಿಜ್ಞಾನಿ ಡಾ.ಟಿ.ಆರ್‌.ಅನಂತರಾಮು, ಇಸ್ರೊ ನಿವೃತ್ತ ವಿಜ್ಞಾನಿ ಎಸ್‌.ಹಿರಿಯಣ್ಣ, ಪವಾಡ ರಹಸ್ಯ ಬಯಲು ಖ್ಯಾತಿಯ ಡಾ.ಹುಲಿಕಲ್‌ ನಟರಾಜ, ನ್ಯಾಷನಲ್‌ ಕಾಲೇಜು ಪ್ರಾಧ್ಯಾಪಕಿ ಡಾ.ವೈ.ಸಿ.ಕಮಲ, ವಿಚಾರವಾದಿ ಡಾ.ನರೇಂದ್ರ ನಾಯಕ್, ಹಿರಿಯ ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್‌.ನಾಗರಾಜು, ಗಣಿತಜ್ಞ ವೇಣುಗೋಪಾಲ ದ. ಹೇರೂರ, ಅಟಲ್‌ ಇನೋವೇಶನ್‌ ಮಿಷನ್‌ ವಿಜ್ಞಾನಿ ಡಾ.ಉದಯ ಶಂಕರ ಪುರಾಣಿಕ, ಧಾರವಾಡ ಕೃಷಿ ವಿ.ವಿ. ಕುಲಪತಿ ಡಾ.ಎಸ್‌.ಎ. ಪಾಟೀಲ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ ಎಂದರು.

ಭಾಗವಹಿಸುವ ಶಿಕ್ಷಕರಿಗೆ ಒಒಡಿ:ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ ರಜೆ (ಒಒಡಿ) ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸುವವರು ಸ್ಥಳದಲ್ಲೇ ಸಾಂಕೇತಿಕವಾಗಿ ನೋಂದಣಿ ಶುಲ್ಕ ₹ 100 ನೀಡಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಬೇರೆ ಊರಿನ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗಿರೀಶ ಕಡ್ಲೇವಾಡ ತಿಳಿಸಿದರು.

ವಿಜ್ಞಾನ ಪರಿಷತ್ತಿನ ಡಾ.ಕುಂಟೆಪ್ಪ ಗೌರೀಪುರ, ಜಗನ್ನಾಥ ಹಲಮಡಗಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT