ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂಗಳ ಮೇಲೆ ದೌರ್ಜನ್ಯ ಆರೋಪ: ಸೇಡಂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Published : 14 ಆಗಸ್ಟ್ 2024, 5:17 IST
Last Updated : 14 ಆಗಸ್ಟ್ 2024, 5:17 IST
ಫಾಲೋ ಮಾಡಿ
Comments

ಸೇಡಂ: ಬಾಂಗ್ಲಾದೇಶ ಮತ್ತು ಸೇಡಂನಲ್ಲಿ ಈಚೆಗೆ ನಡೆದ ಹಿಂದೂಗಳ ಮೇಲಿನ ದೌರ್ಜನ್ಯ ಘಟನೆಗಳನ್ನು ಖಂಡಿಸಿ ಮಂಗಳವಾರ ‘ಸಮಸ್ತ ಹಿಂದು ಸಮಾಜ ಸೇಡಂ’ ನೀಡಿದ ಸೇಡಂ ಬಂದ್ ಕರೆಗೆ ಉತ್ತಮ ಸ್ಪಂದನೆ ದೊರೆಯಿತು.

‘ಸೇಡಂ ಬಂದ್’ ಎಂಬ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಸೋಮವಾರ ಸಂಜೆಯಿಂದ ಬೆಂಬಲ ವ್ಯಕ್ತವಾಗುತ್ತಿದ್ದವು. ಇದಕ್ಕೆ ಪೂರಕವೆಂಬಂತೆ ಮಂಗಳವಾರ ಪಟ್ಟಣದ ಕಿರಾಣ ಬಜಾರ ಅಂಗಡಿ ಮುಂಗಟ್ಟುಗಳು ತೆರೆಯಲೇ ಇಲ್ಲ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಚೌರಸ್ತಾ, ಕಿರಾಣ ಬಜಾರ್, ರೈಲ್ವೆ ನಿಲ್ದಾಣ, ಮುಖ್ಯರಸ್ತೆ, ಬಸ್ ನಿಲ್ದಾಣ ಮಾರ್ಗದಿಂದ ಬಸವೇಶ್ವರ ವೃತ್ತದವರೆಗೆ ನಡೆಯಿತು. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು, ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಆಟೊ ಚಾಲಕರಿಂದ ಬೆಂಬಲ: ಸೇಡಂ ಬಂದ್ ಕರೆಗೆ ಆಟೊ ಚಾಲಕರು ಸಹ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದರು. ಬಹುತೇಕ ಚಾಲಕರು ಆಟೊ ಚಾಲನೆ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಣ್ಯರು, ರಾಜಕೀಯ ವ್ಯಕ್ತಿಗಳು, ವಕೀಲರು, ವ್ಯಾಪಾರಸ್ಥರು, ಪ್ರಯಾಣಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಕ್ಷಭೇದ ಮರೆತು ಪಾಲ್ಗೊಂಡಿದ್ದರು. ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಂಡ ಪ್ರತಿಭಟನೆ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಯಿತು. ಪ್ರತಿಭಟನೆ ತೀವ್ರತೆ ಅರಿತ ಪೊಲೀಸರು ಚಿಂಚೋಳಿ ವೃತ್ತ, ಮಳಖೇಡ ಬಳಿ, ನೀಲಹಳ್ಳಿ ಹಾಗೂ ವಾಸವದತ್ತ ಕಂಪನಿ ಬಳಿ ರಸ್ತೆ ಮೇಲೆ ರಾಜ್ಯ ಹೆದ್ದಾರಿ-10 ಕಲಬುರಗಿ-ಸೇಡಂ ರಸ್ತೆಯ ಮೇಲೆ ಬ್ಯಾರಿಕೇಡ್‌ ಹಾಕಿ, ಸಂಪೂರ್ಣ ಸಂಚಾರ ದಟ್ಟಣೆ ನಿಯಂತ್ರಿಸಿದರು. ಪ್ರತಿಭಟನೆಯಿಂದ ಸಾವಿರಾರು ವಾಹನಗಳು ನಿಂತಿದ್ದವು. ಅಲ್ಲದೆ ದೂರದಿಂದ ಆಗಮಿಸಿದ ಪ್ರಯಾಣಿಕರು ಪರದಾಡಿದರೆ, ಕೆಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹಳ್ಳಿಗರಿಂದ ಬೆಂಬಲ: ತಾಲ್ಲೂಕಿನ ಮಳಖೇಡ, ಕೋಡ್ಲಾ, ಬೆನಕನಳ್ಳಿ, ಕಲಕಂಭ, ಸಟಪಟನಳ್ಳಿ, ಕೋಲ್ಕುಂದಾ, ಮದನಾ, ರಂಜೋಳ, ಮುಧೋಳ, ಕುರಕುಂಟಾ, ಆಡಕಿ, ಬಿಲಕಲ್, ಊಡಗಿ, ನೀಲಹಳ್ಳಿ, ತೆಲ್ಕೂರ, ಹಾಬಾಳ ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದಲ್ಲಿ ಈಚೆಗೆ ರಾಘವೇಂದ್ರ ಮತ್ತು ರಾಹುಲ್ ರೆಡ್ಡಿ ಸಹೋದರರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಘಟನೆ ಮುಂದೆ ನಡೆಯದಂತೆ ಎಚ್ಚರಿಕೆ ಕ್ರಮವನ್ನು ಪೊಲೀಸರು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 

ಪ್ರತಿಭಟನೆಯಿಂದ ಮಂಗಳವಾರ ಸೇಡಂ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿರಲಿಲ್ಲ
ಪ್ರತಿಭಟನೆಯಿಂದ ಮಂಗಳವಾರ ಸೇಡಂ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿರಲಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT