ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿತನ ಪರಿಗಣಿಸಿ ಸಚಿವ ಸ್ಥಾನ ನೀಡಬೇಕು: ತೇಲ್ಕೂರ

Last Updated 25 ಜನವರಿ 2022, 4:26 IST
ಅಕ್ಷರ ಗಾತ್ರ

ಕಲಬುರಗಿ: ‘ಪಕ್ಷದಲ್ಲಿ ನಾನು ಹಿರಿಯನಾಗಿದ್ದು, ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷನಾಗಿ, ಒಂದು ಬಾರಿ ತಾಲ್ಲೂಕು ಅಧ್ಯಕ್ಷನಾಗಿ, ಪ್ರಸ್ತುತ ವಿಭಾಗೀಯ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗಾಗಿ, ಪಕ್ಷದಲ್ಲಿನ ನನ್ನ ಹಿರಿತನ ಹಾಗೂ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಮನವಿ ಮಾಡಿದ್ದಾರೆ.

ಆ ಮೂಲಕ ಮುಂಬರುವ ಸಂಪುಟ ಪುನಾಚರನೆ ಸಂದರ್ಭದಲ್ಲಿ ಜಿಲ್ಲೆಯಿಂದ ತಮಗೆ ಸಚಿವ ಸ್ಥಾನ ಕೊಡಬೇಕು ಎಂಬ ಮನದಿಂಗಿತವನ್ನು ಹೊರ ಹಾಕಿದ್ದಾರೆ.

ಈ ಕುರಿತು ‘‍ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‌‘ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನ ಮೊದಲ ಬೇಡಿಕೆ. ನಂತರದ ಬೇಡಿಕೆಯೆಂದರೆ ಪಕ್ಷದ ಹಿರಿತನವನ್ನು ಆಧರಿಸಿ ನನಗೆ ಸಚಿವ ಸ್ಥಾನ ಕೊಡಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ನಾನು ಯಾವುದೇ ಪರಿಸ್ಥಿತಿಯಲ್ಲಿ ಪಕ್ಷವನ್ನು ಬಿಟ್ಟಿಲ್ಲ. ಪಕ್ಷ ನಿಷ್ಠನಾಗಿಯೇ ಉಳಿದಿದ್ದೇನೆ. ನನಗೆ ಸಚಿವ ಸ್ಥಾನ ನೀಡಿದರೆ ನನ್ನ ಶಕ್ತಿ ಮೀರಿ ಹಗಲು ರಾತ್ರಿ ಕೆಲಸ ಮಾಡಿ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಹೊಸ ವರ್ಚಸ್ಸನ್ನು ತರುತ್ತೇನೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷನಾಗಿ ಈಗಾಗಲೇ ನನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದೇನೆ. ಮುಚ್ಚಿ ಹೋಗುವ ಹಂತದಲ್ಲಿದ್ದ ಬ್ಯಾಂಕನ್ನು ಎಲ್ಲರ ಸಹಕಾರದಿಂದ ಪುನಶ್ಚೇತನಗೊಳಿಸಿ ರೈತರಿಗೆ ಕೋಟ್ಯಂತರ ರೂಪಾಯಿ ಸಾಲಸೌಲಭ್ಯ ಒದಗಿಸಿದ್ದೇನೆ. ಹೊಸ ಕಟ್ಟಡ ನಿರ್ಮಾಣ ಕಾರ್ಯವೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅಲ್ಪ ಅವಧಿಯಲ್ಲಿ ಮಾಡಿದ ಈ ಸಾಧನೆ ಹಾಗೂ ಪಕ್ಷ ನಿಷ್ಠೆಯನ್ನು ಗುರುತಿಸಿ ಸಚಿವ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT