ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಹೆಚ್ಚಿನ ಬೆಲೆಗೆ ಬೀಜ, ಗೊಬ್ಬರ ಮಾರಾಟ; 11 ಅಂಗಡಿಗಳ ಪರವಾನಗಿ ರದ್ದು

Published 20 ಜೂನ್ 2024, 13:10 IST
Last Updated 20 ಜೂನ್ 2024, 13:10 IST
ಅಕ್ಷರ ಗಾತ್ರ

ಕಲಬುರಗಿ: ನಿಗದಿತ ಬೆಲೆಗಿಂತ ಹೆಚ್ಚಿಗೆ ಬೀಜ ಮತ್ತು ಗೊಬ್ಬರವನ್ನು ಮಾರಾಟ ಮಾಡಿದ ಜಿಲ್ಲೆಯ 11 ಅಂಗಡಿಗಳ ಲೈಸೆನ್ಸನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜಂಟಿ ಕೃಷಿ ನಿರ್ದೇಶಕರು ಹಾಗೂ ಬೀಜ ಪರಿವೀಕ್ಷಕರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಒಳಗೊಂಡ ತಂಡ ರಚಿಸಿ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ದಿಢೀರ್ ದಾಳಿ ಮಾಡಿದಾಗ ಬೀಜ ಅಧಿನಿಯಮ 1966 ಹಾಗೂ ಬೀಜಗಳ (ನಿಯಂತ್ರಣ) ಆದೇಶ, 1983 ಉಲ್ಲಂಘಿಸಿರುವುದು ಕಂಡು ಬಂದಿರುವುದರಿಂದ ಕಲಬುರಗಿಯ ಓಂ ಪ್ರಕಾಶ್ ಶ್ರೀನಿವಾಸ್ ಅಂಡ್ ಸನ್ಸ್ ನೆಹರೂ ಗಂಜ್, ನೀಲಾ ಎಂಟರ್‌ಪ್ರೈಸಸ್ ಗಂಜ್, ಜೇವರ್ಗಿಯ ಶ್ರೀ ಸಾಯಿ ಟ್ರೇಡರ್ಸ್, ಸೊನ್ನದ ಸೌದಾಗರ್ ಟ್ರೇಡರ್ಸ್, ರೇವಣಸಿದ್ದೇಶ್ವರ ಅಗ್ರೊ ಕೇಂದ್ರ, ಯಡ್ರಾಮಿಯ ಭಾಗ್ಯವಂತಿ ಅಗ್ರೊ ಏಜೆನ್ಸೀಸ್, ಅಫಜಲಪುರದ ಗೊಲ್ಲಾಳೇಶ್ವರ ಅಗ್ರೋ ಏಜೆನ್ಸೀಸ್, ಸುಲೆಪೇಟದ ಕೇತಕಿ ಸಂಗಮೇಶ್ವರ ಕೃಷಿ ಸೆಂಟರ್, ವೀರಭದ್ರೇಶ್ವರ ಕೃಷಿ ಸೆಂಟರ್, ಜೇವರ್ಗಿಯ ದಂಡಗುಂಡ ಬಸವೇಶ್ವರ ಅಗ್ರೊ ಏಜೆನ್ಸಿ, ಜೇವರ್ಗಿ ಜೇರಟಗಿಯ ಕರಿಸಿದ್ದೇಶ್ವರ ಟ್ರೇಡರ್ಸ್‌ನ ಲೈಸೆನ್ಸ್ ಅಮಾನತಿನಲ್ಲಿ ಇರಿಸಲಾಗಿದೆ.

ರೈತರು ಈ ಮಾರಾಟ ಮಳಿಗೆಗಳಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಬಾರದೆಂದು ಸೂಚಿಸಲಾಗಿದೆ.

ಡಿಎಪಿ ರಸಗೊಬ್ಬರಕ್ಕೆ ಸರ್ಕಾರ ನಿಗದಿಪಡಿಸಿದ ₹ 1,350 (ಬ್ಯಾಗ್‌ಗೆ), ಯೂರಿಯಾ ರಸಗೊಬ್ಬರಕ್ಕೆ ₹ 266 ಮತ್ತು ಹತ್ತಿ (ಬೋಲ್‌ಗಾರ್ಡ್) ಬೀಜಕ್ಕೆ ₹ 864 (ಪ್ಯಾಕೆಟ್‌ಗೆ) ದರಗಳಿಗಿಂತ ಹೆಚ್ಚಿನ ದರಕ್ಕೆ ಯಾವುದೇ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಿದರೆ ರೈತರು ತಮ್ಮ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ದೂರು ನೀಡಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT