ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಇಟಿಇ ಗವರ್ನಿಂಗ್ ಕೌನ್ಸಿಲ್‌ ಸದಸ್ಯರಾಗಿ ಪ್ರೊ.ಗಾದಗೆ ಆಯ್ಕೆ

Published 4 ಜುಲೈ 2024, 5:55 IST
Last Updated 4 ಜುಲೈ 2024, 5:55 IST
ಅಕ್ಷರ ಗಾತ್ರ

ಕಲಬುರಗಿ: ಇನ್‌ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ (ಐಇಟಿಇ)‌ ಕೇಂದ್ರ ಸಮಿತಿ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಗಾದಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಜರುಗಿದ ಆನ್‌ಲೈನ್‌ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರೊ.ಗಾದಗೆ ಅವರು ಕರ್ನಾಟಕದಿಂದ ಅತಿ ಹೆಚ್ಚು ಮತ ಗಳಿಸಿ ಜಯ ಸಾಧಿಸಿದ್ದಾರೆ. ಈ ಹಿಂದೆ ಐಇಟಿಇ ಉಪಾಧ್ಯಕ್ಷರಾಗಿ ಒಂದು ಅವಧಿ ಸೇವೆ ಸಲ್ಲಿಸಿದ ಪ್ರೊ.ಗಾದಗೆ ಅವರು ಇದೀಗ ಗವರ್ನಿಂಗ್ ಕೌನ್ಸಿಲ್‌ಗೆ ಆಯ್ಕೆಯಾಗಿ ಈ ಭಾಗವನ್ನು ಪ್ರತಿನಿಧಿಸಲಿದ್ದಾರೆ. ಮೂರು ವರ್ಷದ ಅವಧಿಗೆ ಅವರು ಆಯ್ಕೆಯಾಗಿದ್ದಾರೆ.

ಐಇಟಿಇ‌ 1953ರಲ್ಲಿ ಸ್ಥಾಪನೆಯಾಗಿದ್ದು, ದೇಶದ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ಸಂಸ್ಥೆಗಳ ಪ್ರಮುಖ ಸಮಿತಿಯಾಗಿದೆ. ದೇಶದಲ್ಲಿ 63 ಕೇಂದ್ರಗಳ‌ ಮೂಲಕ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಐಇಟಿಇ ಸುಮಾರು 1.25 ಲಕ್ಷ ಮತದಾರ ಪ್ರತಿನಿಧಿಗಳನ್ನು ಹೊಂದಿದೆ.‌ ಗವರ್ನಿಂಗ್ ಕೌನ್ಸಿಲ್‌ನ ಖಾಲಿ ಇದ್ದ 7 ಸ್ಥಾನಕ್ಕೆ ಚುನಾವಣೆ ನಡೆದಿದ್ದು, 29 ಮಂದಿ ಸ್ಪರ್ಧಿಸಿದ್ದರು. ಕರ್ನಾಟಕದಿಂದ‌ ಪ್ರೊ. ಗಾದಗೆ ಅವರಲ್ಲದೆ ಎಂ.ಎಚ್‌. ಕೋರಿ, ಸತ್ಯಾನಂದ ಅವರು ಸಹ ಆಯ್ಕೆಯಾಗಿದ್ದಾರೆ.

‘ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಸಂಶೋಧನಾ‌ ಚಟುವಟಿಕೆ, ವಿವಿಧ ಅಭಿವೃದ್ಧಿ ಕೆಲಸ ಹಾಗೂ ವಿಚಾರ ಸಂಕಿರಣ, ಸಮಾವೇಶ ಇನ್ನಿತರೆ ಕಾರ್ಯ ಕೈಗೊಳ್ಳಲು ಈ ಆಯ್ಕೆ ಪೂರಕವೆನಿಸಿದೆ‌. ಕಲಬುರಗಿ ಕೇಂದ್ರವನ್ನು ದೇಶದ ಟಾಪ್ 10 ಕೇಂದ್ರದೊಳಗೆ ತರುವುದು ಮುಖ್ಯ ಧ್ಯೇಯವಾಗಿದೆ’ ಎಂದು ಪ್ರೊ. ಗಾದಗೆ ಹೇಳಿದ್ದಾರೆ.

ಸತ್ಕಾರ: ಐಇಟಿಇಗೆ ಆಯ್ಕೆಯಾದ ಪ್ರೊ.ಗಾದಗೆ ಅವರನ್ನು ಮಂಗಳವಾರ ಇಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಪ್ರತಿನಿಧಿಗಳು, ಕೇಂದ್ರದ ಪ್ರಮುಖರು ಸತ್ಕರಿಸಿದರು. ಪ್ರಮುಖರಾದ ಶುಂಭುಲಿಂಗ ವಾಣಿ, ರಾಹುಲ್ ಮೂಲಭಾರತಿ, ಶುಭಾಂಗಿ, ಎಂ.ಎ.ವಹೀದ್, ಬ್ರಿಜ್ ಭೂಷಣ, ಶೈಲಜಾ, ಸತೀಶ, ಬಾಬುರೆಡ್ಡಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT