ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸರ್ವರ್‌ ಸಮಸ್ಯೆ; ಕೆಲಸ ಮಾಡಿದರೂ ನರೇಗ ಉದ್ಯೋಗಿಗಳಿಗೆ ಇಲ್ಲ ಕೂಲಿ

ಎನ್ಎಂಎಂಎಸ್ ಆ್ಯಪ್‌ ಮೂಲಕ ಹಾಜರಾತಿ ಕಡ್ಡಾಯ; ಸಂಕಷ್ಟದಲ್ಲಿ ‘ನರೇಗಾ’ ಕೂಲಿಕಾರ್ಮಿಕರು
Last Updated 13 ಜನವರಿ 2023, 10:02 IST
ಅಕ್ಷರ ಗಾತ್ರ

ಕಲಬುರಗಿ: ನರೇಗಾ ಯೋಜನೆಯಡಿ ನಿರ್ವಹಿಸುವ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಪ್ರತಿದಿನ ಎನ್ಎಂಆರ್ (ನಾಮಿನಲ್‌ ಮಸ್ಟರಲ್‌ ರೋಲ್‌) ಹಾಜರಾತಿಯನ್ನು ಎನ್ಎಂಎಂಎಸ್ ಆ್ಯಪ್‌ ಮೂಲಕ ಕಡ್ಡಾಯಗೊಳಿಸಲಾಗಿದೆ. ಆದರೆ, ಇದಕ್ಕೆ ಕೂಲಿಕಾರ್ಮಿಕರು ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗಿದೆ.

ಜಿಲ್ಲೆಯ 261 ಗ್ರಾಮ ಪಂಚಾಯಿತಿ ಗಳ ಪೈಕಿ ಆಯ್ದ ಪಂಚಾಯಿತಿಗಳಲ್ಲಿ 71 ಕಾಯಕಮಿತ್ರ , 54 ಬಿಎಫ್‌ಟಿ, ಎಫ್‌ಎ (ಫೀಲ್ಡ್‌ ಅಸ್ಟಿಸ್ಟಂಟ್‌) 42 ಸೇರಿ ಒಟ್ಟು 167 ಸಿಬ್ಬಂದಿ ಇದ್ದು, ಸಿಬ್ಬಂದಿ ಕೊರತೆಯಿಂದ ಏಕಕಾಲಕ್ಕೆ ಹಾಜರಾತಿ ಪಡೆಯುವುದು ಕಷ್ಟ. ಹೀಗಾಗಿ ಕಾರ್ಮಿಕರ ದಿನಗೂಲಿ ನಷ್ಟದ ಜತೆಗೆ ಕಾಮಗಾರಿಗಳ ಕೆಲಸ ಸ್ಥಗಿತಗೊಂಡಿದೆ. ಗ್ರಾಮ ಪಂಚಾಯಿತಿಯ ‘ಕಾಯಕ ಬಂಧು’ಗಳಿಗೆ ಮೊಬೈಲ್‌ ಆ್ಯಪ್‌ ಬಳಕೆ ಬಗ್ಗೆ ತಿಳಿವಳಿಕೆ, ಸ್ಮಾರ್ಟ್‌ಫೋನ್‌ ಬಳಕೆ ಜ್ಞಾನ ಇರದಿರುವುದು ಮತ್ತೊಂದು ಸಮಸ್ಯೆ.

ಯೋಜನೆಯ ಅನುಷ್ಠಾನದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಗ್ರಾಮೀಣಾಭಿ ವೃದ್ಧಿ ಇಲಾಖೆಯ ಆಯುಕ್ತರು ಜನವರಿ 1ರಿಂದ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಎನ್ಎಂಎಂಎಸ್) ಆ್ಯಪ್ ಮೂಲಕ ಪ್ರತಿದಿನ ಎರಡು ಬಾರಿ (ಬೆಳಿಗ್ಗೆ 6 ರಿಂದ 10, ಮಧ್ಯಾಹ್ನ 1ರಿಂದ 4 ಗಂಟೆ ಒಳಗೆ) ಕೆಲಸದ ಚಿತ್ರದ ಜೊತೆ ಕೂಲಿಕಾರ್ಮಿಕರ ಹಾಜರಾತಿಯನ್ನು ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ತೊಂದರೆ ಆಗಿದೆ.

ಕೆಲಸದ ಸ್ಥಳದಲ್ಲಿ ನೆಟ್‌ವರ್ಕ್‌ ಹಾಗೂ ಸರ್ವರ್‌ ಸಮಸ್ಯೆಯಿಂದ ಕೆಲಸ ಮಾಡಿದರೂ ಹಾಜರಾತಿ ಸಿಗದ ಕಾರಣ ಆಯಾ ದಿನದ ಕೂಲಿ ನಷ್ಟವಾಗುತ್ತಿದ್ದು, ಇದರಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಯಕಮಿತ್ರ, ಕಾಯಕ ಬಂಧು, ಬಿಎಫ್‌ಟಿ, ಎಫ್‌ಎಗಳಿಗೆ (ಫೀಲ್ಡ್‌ ಅಸ್ಟಿಸ್ಟಂಟ್‌) ಹಾಜರಾತಿಯ ಹೊಣೆ ವಹಿಸಲಾಗಿದೆ.

ಈ ಹಿಂದೆ ಕೂಲಿಕಾರ್ಮಿಕರ ಹಾಜರಾತಿಯನ್ನು ವಾರಕ್ಕೊಮ್ಮೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಸಮುದಾಯ ಆಧಾರಿತ ಕಾಮ ಗಾರಿಗಳಲ್ಲಿ ಕಾರ್ಮಿಕರ ಹಾಜರಾತಿಯನ್ನು ಪ್ರತಿನಿತ್ಯವೂ ಕಾಮಗಾರಿಯ ಸ್ಥಳದಲ್ಲೇ ಕೆಲಸ ಆರಂಭಕ್ಕೂ ಮುನ್ನ ಹಾಗೂ ನಂತರ ಎನ್ಎಂಎಂಎಸ್ ಆ್ಯಪ್‌ನಲ್ಲಿ ತೆಗೆದುಕೊಳ್ಳಬೇಕಿರುವುದರಿಂದ ಸಮಸ್ಯೆಯಾಗಿದೆ.

‘ಒಂದು ಗ್ರಾಮ ಪಂಚಾಯತಿಯ 10 ಕಡೆ ಕೆಲಸ ನಡೆದರೆ ಎಲ್ಲ ಕಾಮಗಾರಿಯನ್ನು ಎರಡೆರಡು ಬಾರಿ ಚಿತ್ರ ಕ್ಲಿಕ್ಕಿಸಲು ಗ್ರಾಮ ಪಂಚಾಯತಿಯ ಒಂದಿಬ್ಬರು ಕಾಯಕಬಂಧು ಅಥವಾ ಇತರೆ ಸಿಬ್ಬಂದಿಗಳಿಂದ ಸಾಧ್ಯವಿಲ್ಲ. ಇದರಿಂದ ಜನರ ಬೇಡಿಕೆಗೆ ತಕ್ಕಂತೆ ಕಾಮಗಾರಿ ಕೈಗೊಳ್ಳಲು ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ನೇಮಕಾತಿ ನಡೆದರೆ, ಸಮಸ್ಯೆ ಬಗೆಹರಿಸಬಹುದು’ ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

‘ಪ್ರವಾಹದಂತಹ ಪ್ರಾಕೃತಿಕ ವಿಕೋಪದ ತುರ್ತು ಸಂದರ್ಭಗಳಲ್ಲಿ ನಡೆಸಲಾಗುತ್ತಿದ್ದ ಘಟನೋತ್ತರ ಕಾಮಗಾರಿಗಳಿಗೆ ತಡೆ ಬೀಳಲಿದೆ. ಸರ್ಕಾರದ ಈ ನಿರ್ಬಂಧದಿಂದ ಕೆಲಸ ಆಗುವುದಿಲ್ಲ. ಸರಾಗವಾಗಿ ಕೆಲಸ ನಡೆಯುವುದಿಲ್ಲ’ ಎಂದು ನರೇಗಾ ಎಂಜಿನಿಯರ್‌ ತಿಳಿಸಿದರು.

‘ಗ್ರಾಮೀಣ ಭಾಗಕ್ಕೆ ನರೇಗಾದಡಿ ಸಾಕಷ್ಟು ಅನುದಾನ ಬರುತ್ತಿದ್ದರಿಂದ ಹೆಚ್ಚಿನ ಕೆಲಸ ಕೈಗೊಳ್ಳಲು ಸಾಧ್ಯ ಆಗುತ್ತಿತ್ತು. ಆದರೆ, ಪ್ರತಿನಿತ್ಯ ಆ್ಯಪ್‌ನಲ್ಲಿ ಹಾಜರಾತಿಯಿಂದ ಅಂಗನವಾಡಿ, ಶೌಚಾಲಯ, ಶಾಲಾ ಕಾಂಪೌಂಡ್‌, ಕಾಂಕ್ರೀಟ್ ರಸ್ತೆ ಸೇರಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟ ಆಗಲಿದೆ’ ಎಂದು ಪಿಡಿಒ ತಿಳಿಸಿದರು.

‘ದುರ್ಬಳಕೆ ತಡೆಗಾಗಿ ಆ್ಯಪ್‌ ಬಳಕೆ’
‘ಯಂತ್ರೋಪಕರಣಗಳನ್ನು ಬಳಸಿ ನಡೆಸಲಾಗುತ್ತಿದ್ದ ಕಾಮಗಾರಿಗಳನ್ನು ತಡೆಗಟ್ಟಲು ಹಾಗೂ ಕೂಲಿ ಕೆಲಸ ಮಾಡದವರು ನರೇಗಾ ಕೂಲಿ ಹಣ ಪಡೆಯುತ್ತಿರುವುದನ್ನು ಕಡಿವಾಣ ಹಾಕಲು ಎನ್ಎಂಎಂಎಸ್ ಆ್ಯಪ್‌ ಮೂಲಕ ಪ್ರತಿದಿನ ಎನ್‌ಎಂಆರ್‌ ಹಾಜರಾತಿ ಕೈಗೊಳ್ಳಲು ಆದೇಶಿಸಲಾಗಿದೆ. ಆದರೆ ಅದು ಕಡ್ಡಾಯವಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್‌.ಕೆ.ಅತೀಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೆಟ್‌ವರ್ಕ್‌ ಸಮಸ್ಯೆಯಿಂದಲೇ ಕೂಲಿ ನಷ್ಟವಾಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಆ್ಯಪ್‌ನಲ್ಲಿ ಹಾಜರಾತಿ ಸಾಧ್ಯವಾಗದಿದ್ದರೆ ಆಯಾ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಆ್ಯಪ್‌ ಬಳಕೆ ಕುರಿತು ಶೀಘ್ರದಲ್ಲೇ ಕಾಯಕಬಂಧುಗಳಿಗೆ ತರಬೇತಿ ನೀಡಲಾಗುವುದು. ನೆಟವರ್ಕ್‌ ಸಮಸ್ಯೆಯಿಂದ ಆಗುತ್ತಿರುವ ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

**

ನೆಟ್‌ವರ್ಕ್ ಸಮಸ್ಯೆಯಿಂದ ಜಿಪಿಎಸ್ ಮಾಡಲಾಗದೇ ಕೂಲಿಕಾರ್ಮಿಕರಿಗೆ ತೊಂದರೆಯಾಗಿದೆ. ಕಾಮಗಾರಿ ಕೈಗೆತ್ತಿಕೊಳ್ಳುವುದು ಕಡಿಮೆ ಆಗಿದೆ.
–ಶ್ವೇತಾ ದಿನೇಶ್ ದೊಡ್ಡಮನಿ, ಅಧ್ಯಕ್ಷೆ, ನಂದಿಕೂರ ಗ್ರಾಮ ಪಂಚಾಯತಿ, ಕಲಬುರಗಿ

**

ನಮ್ಮ ಪಂಚಾಯಿತಿಯ 20 ಕಾಯಕ ಬಂಧುಗಳ ಪೈಕಿ ಸದ್ಯ 3 ಮಂದಿಗಷ್ಟೆ ಆ್ಯಪ್‌ನಲ್ಲಿ ಹಾಜರಾತಿ ತೆಗೆದುಕೊಳ್ಳಲು ಅವಕಾಶ ದೊರೆತಿದೆ‌. ನೋಂದಣಿಗೆ ತಾಂತ್ರಿಕ ಸಮಸ್ಯೆಯಿದೆ.
–ಗೀತಾಬಾಯಿ ಹೊನ್ನಾ, ಕಾಯಕಬಂಧು, ಕಡಗಂಚಿ ಗ್ರಾಮ ಪಂಚಾಯತಿ, ಆಳಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT