ಶನಿವಾರ, ಜನವರಿ 25, 2020
28 °C

ಸೇವಾಲಾಲ ದೇವಸ್ಥಾನ ಧ್ವಂಸಕ್ಕೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವಿಮಾನ ನಿಲ್ದಾಣಕ್ಕೆ ನೀಡಿದ್ದ ಜಾಗದಲ್ಲಿದ್ದ ಸಂತ ಸೇವಾಲಾಲರ ಹಾಗೂ ಮರಿಯಮ್ಮದೇವಿಯ ದೇವಸ್ಥಾನಗಳನ್ನು ನೆಲಸಮಗೊಳಿಸಿದ ಘಟನೆಯನ್ನು ಖಂಡಿಸಿ ಶ್ರೀನಿವಾಸ ಸರಡಗಿ–ತಾಜಸುಲ್ತಾನಪೂರ, ಕುರಿಕೋಟಾದ ಗುರು ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ರೇವಣಸಿದ್ದ ಶಿವಾಚಾರ್ಯರು ಹಾಗೂ ಸದ್ಗುರು ಸೇವಾಲಾಲ ಬಂಜಾರ ಶಕ್ತಿಪೀಠದ ಬಳಿರಾಮ ಮಹಾರಾಜರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ದೇವಸ್ಥಾನ ಹಾಗೂ ಮೂರ್ತಿಗಳನ್ನು ಯಾವುದೇ ಮುನ್ಸೂಚನೆ ನೀಡದೇ, ಬಂಜಾರ ಸಮುದಾಯದ ಧರ್ಮಗುರುಗಳ, ರಾಜಕೀಯ ಧುರೀಣರ, ಸಮುದಾಯದ ಮುಖಂಡರ ಗಮನಕ್ಕೂ ತರದೇ ಏಕಾಏಕಿ ನೆಲಸಮಗೊಳಿಸಿ ದೇವರ ಮೂರ್ತಿಗಳನ್ನು ಭಗ್ನಗೊಳಿಸಿರುವುದು ಅತ್ಯಂತ ಘೋರ ಕೃತ್ಯವಾಗಿದೆ. ನಾಲ್ಕಾರು ತಿಂಗಳುಗಳ ಹಿಂದೆ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು ಒಂದು ಬಾರಿ ಪ್ರಾಯೋಗಿಕ ಹಾರಾಟ ಮಾಡಿದರೂ, ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನೊಳಗೊಂಡಂತೆ ಕೇಂದ್ರದ ಅನೇಕ ಸಚಿವರು, ಸಂಸದರು, ರಾಜಕೀಯ ಧುರೀಣರು ಈ ವಿಮಾನ ನಿಲ್ದಾಣದ ಸೇವೆಯನ್ನು ಬಳಸಿಕೊಂಡಿದ್ದಾರೆ. ಆಗ ವಿಮಾನ ಟೇಕಾಫ್‌ ಆಗಲು ಹಾಗೂ ಇಳಿಯಲು ದೇವಸ್ಥಾನ ಅಡ್ಡಿ ಬರಲಿಲ್ಲವೇ ಎಂದು ಶ್ರೀಗಳು ಪ್ರಶ್ನಿಸಿದರು.

ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲ ಹಾಗೂ ಮರಿಯಮ್ಮದೇವಿ ದೇವಸ್ಥಾನ ಉರುಳಿಸಿದ್ದಕ್ಕೆ ಜಿಲ್ಲಾಡಳಿತ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಹೊಣೆ ಮಾಡುವ ಮೂಲಕ ತನ್ನ ಜವಾಬ್ದಾರಿ ಮತ್ತು ಕರ್ತವ್ಯದಿಂದ ವಿಮುಖವಾಗಿರುವುದನ್ನು ನೋಡಿದರೆ ಯಾರನ್ನೋ ಬಚಾವು ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕು. ಈಗಾಗಲೇ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ 15 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದೇ ಕಾಲಹರಣ ಮಾಡಲಾಗುತ್ತಿದೆ. ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮುಖಂಡರಾದ ಭೀಮಾಶಂಕರ ಚಕ್ಕಿ, ಶೀಲವಂತಯ್ಯ ಮಲ್ಲೇದಮಠ, ಸಂಗಯ್ಯಸ್ವಾಮಿ ಹಿರೇಮಠ, ಸಂತೋಷ ಆಡೆ, ಹಣಮಂತರಾಯ ಅಟ್ಟೂರ, ನಾಗಲಿಂಗಯ್ಯ ಮಠಪತಿ, ರವಿ ಶಹಾಪೂರಕರ, ಪ್ರದೀಪ ರಾಠೋಡ, ಧನರಾಜ ಚವ್ಹಾಣ, ಶಿವಶರಣಪ್ಪ ಚಿದ್ರಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು