ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಬಾದ್ ಸರ್ಕಾರಿ ಪಿಯು ಕಾಲೇಜು | ಫಲಿತಾಂಶದಲ್ಲಿ ಮುಂದೆ; ಸೌಲಭ್ಯಗಳಲ್ಲಿ ಹಿಂದೆ

ನಿಂಗಣ್ಣ ಜಂಬಗಿ
Published 27 ಜೂನ್ 2024, 5:28 IST
Last Updated 27 ಜೂನ್ 2024, 5:28 IST
ಅಕ್ಷರ ಗಾತ್ರ

ಶಹಾಬಾದ್: ಗ್ರಂಥಾಲಯದಲ್ಲಿ ಸಮರ್ಪಕ ಪುಸ್ತಕಗಳಿಲ್ಲ. ವಿದ್ಯಾರ್ಥಿಗಳಿಗೆ ತಕ್ಕಷ್ಟು ಕೊಠಡಿಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ. ಗ್ರಂಥಾಲಯವಿದೆಯಾದರೂ ಅಲ್ಲಿ ಸಮರ್ಪಕ ಪುಸ್ತಕಗಳಿಲ್ಲ. ವಿಜ್ಞಾನ ವಿಭಾಗಕ್ಕೆ ಪ್ರಯೋಗಾಲಯವಿಲ್ಲ. ಕೆಲ ವಿಷಯಗಳಿಗೆ ಉಪನ್ಯಾಸಕರಿಲ್ಲ. ಕಾಲೇಜಿಗೆ ಕಾಯಂ ಪ್ರಾಚಾರ್ಯರೂ ಇಲ್ಲ...

ಪಿಯು ಫಲಿತಾಂಶದಲ್ಲಿ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದ ಸರ್ಕಾರಿ ಪಿಯು ಕಾಲೇಜಿನ ದುಃಸ್ಥಿತಿ.

ಹೊಸದಾಗಿ ನಿರ್ಮಿಸುತ್ತಿರುವ ಕೊಠಡಿ ನಿರ್ಮಾಣ ಕಾಮಗಾರಿ ಒಂದೂವರೆ ವರ್ಷದಿಂದ ಸಂಪೂರ್ಣ ನಿಂತಿದೆ. ಬಾಗಿಲು, ಕಿಟಕಿ, ಮೆಟ್ಟಿಲುಗಳು ಕಳಪೆಯಾಗಿವೆ. ಕೊಠಡಿಗಳಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ...ಸರ್ಕಾರಿ ಕಾಲೇಜಿನಲ್ಲಿರುವ ಸಮಸ್ಯೆಗಳ ಸರಣಿ ಮುಂದುವರಿಯುತ್ತದೆ.

ಶಹಾಬಾದ್ ತಾಲ್ಲೂಕಿನ ಏಕೈಕ ಸರ್ಕಾರಿ ಪಿಯು ಕಾಲೇಜು ಇದಾಗಿದ್ದು, 2007ರಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಪ್ರಾರಂಭವಾಗಿತ್ತು. ಆರಂಭದಲ್ಲಿ ಕಲಾ, ವಾಣಿಜ್ಯ ವಿಭಾಗಗಳಿದ್ದವು. ಎರಡು ವರ್ಷದಿಂದ ವಿಜ್ಞಾನ ವಿಭಾಗವೂ ಆರಂಭವಾಗಿದೆ. ಹಲವು ಕೊರತೆಗಳ ನಡುವೆಯೂ 2023-24ರ ಸಾಲಿನಲ್ಲಿ 8 ಮಂದಿ ಡಿಸ್ಟಿಂಕ್ಷನ್‌ ಪಡೆದರೆ, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸ್‌ ಆಗಿದ್ದಾರೆ. ಒಟ್ಟು ಶೇಕಡ 76ರಷ್ಟು ಫಲಿತಾಂಶ ಪಡೆದು ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು ತಾಲ್ಲೂಕಿನಲ್ಲೇ ಮೊದಲ ಸ್ಥಾನದಲ್ಲಿದೆ. ಈ ಫಲಿತಾಂಶದ ಪರಿಣಾಮ ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದೆ.

ಕಲಾ ವಿಭಾಗದಲ್ಲಿ 98, ವಾಣಿಜ್ಯ ವಿಭಾಗದಲ್ಲಿ 61, ವಿಜ್ಞಾನ ವಿಭಾಗದಲ್ಲಿ 46 ಒಟ್ಟು ಸೇರಿದಂತೆ ಸದ್ಯ ಒಟ್ಟು 205 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರ ಉಪನ್ಯಾಸಕರ ಕೊರತೆ ಇದೆ. ವಿಜ್ಞಾನ ವಿಭಾಗಕ್ಕೆ ಒಬ್ಬ ಉಪನ್ಯಾಸಕರಿಲ್ಲ. ತಂಗಳಿ, ಹೆಬ್ಬಾಳ, ರೇವಗಿ ಮತ್ತು ನರೂಣ ಸರ್ಕಾರಿ ಪಿಯು ಕಾಲೇಜುಗಳ ನಿಯೋಜಿತ ಉಪನ್ಯಾಸಕರ ಪಾಠವೇ ಇಲ್ಲಿನ ಮಕ್ಕಳಿಗೆ ಗತಿಯಾಗಿದೆ.

‘ಅರ್ಥಶಾಸ್ತ್ರ, ಸಮಾಜ ವಿಜ್ಞಾನ ಸೇರಿದಂತೆ ಹಲವು ವಿಷಯಗಳಿಗೆ ಉಪನ್ಯಾಸಕರ ಕೊರತೆ ಇದೆ. ದ್ವಿತೀಯ ದರ್ಜೆ ಸಹಾಯಕರ ಭರ್ತಿಯೂ ಆಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ಪ್ರಭಾರ ಪ್ರಾಚಾರ್ಯ ಜಗನ್ನಾಥ ಹೊಸ್ಮನಿ, ಉಪನ್ಯಾಸಕ ರವಿ ಚವ್ಹಾಣ.

‘ಕಾಲೇಜಿಗೆ ಬೇಕಾಗುವ ಕೆಲ ಸೌಲಭ್ಯಗಳನ್ನು ಸ್ಥಳೀಯ ದಾನಿಗಳಿಂದ ಪಡೆದು ಮೈದಾನ ಮತ್ತು ಸಭಾಮಂಟಪಗಳು ನಿರ್ಮಿಸಿಕೊಂಡಿದ್ದೇವೆ. ಸ್ವಚ್ಛತೆ ಬಗ್ಗೆ ನಗರಸಭೆಗೆ ಪತ್ರ ಬರೆದರೂ ಅವರು ಆವರಣ ಸ್ವಚ್ಛ ಮಾಡಲ್ಲ. ಕಾಲೇಜು ಮುಗಿದ ಬಳಿಕ ಸ್ಥಳೀಯ ಕಿಡಿಗೇಡಿಗಳು, ಕುಡುಕರು ಬಂದು ಬಾಟಲಿಗಳನ್ನು ಒಡೆಯುವುದು, ಗುಟ್ಕಾ ತಿಂದು ಉಗುಳುವಂಥ ಅಸಭ್ಯ ವರ್ತನೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಇದು ನಮಗೆ ತಲೆನೋವಾಗಿದೆ’ ಎಂಬುದು ಅವರು ಬೇಸರಿಸುತ್ತಾರೆ.

ಕಾಲೇಜು ಆವರಣದಲ್ಲಿ ಗಿಡಗಂಟಿಗಳು ಹುಲ್ಲು ಬೆಳೆದು ನಿಂತಿರುವುದು
ಕಾಲೇಜು ಆವರಣದಲ್ಲಿ ಗಿಡಗಂಟಿಗಳು ಹುಲ್ಲು ಬೆಳೆದು ನಿಂತಿರುವುದು
ಕಾಯಂ ಉಪನ್ಯಾಸಕರು ನೇಮಕ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿದರೆ ಫಲಿತಾಂಶದಲ್ಲಿ ಇನ್ನಷ್ಟು ಸಾಧನೆ ಮಾಡಲು ಅನುಕೂಲ ಆಗುತ್ತದೆ
ಜಗನ್ನಾಥ ಹೊಸ್ಮನಿ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಶಹಾಬಾದ್‌
ಹೊಸ ಕಟ್ಟಡವನ್ನು ಆದಷ್ಟು ಬೇಗ ಸಿದ್ಧಗೊಳಿಸಿ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು
ವಿಶ್ವರಾಜ ದ್ವಿತೀಯ ಪಿಯು ವಿದ್ಯಾರ್ಥಿ
ವಿಷಯವಾರು ಉಪನ್ಯಾಸಕರು ಹಾಗೂ ಉಪಕರಣ ಸೌಲಭ್ಯಗಳನ್ನು ಒದಗಿಸಿದರೆ ಕಾಲೇಜು ಉತ್ತಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ
-ನಾಗರಾಜ. ಟಿ ಕುಸಾಲೆ ಪಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT