ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿನ ಹೆದ್ದಾರಿಯಾದ ಕಲಬುರಗಿ–ಶಹಾಬಾದ್ ರಸ್ತೆ!

ಅಲ್ಲಲ್ಲಿ ಬಲಿ ಪಡೆಯಲು ಕಾದಿರುವ ಗುಂಡಿಗಳು, ಹಲವು ಬೈಕ್‌ಗಳು ಸ್ಕಿಡ್, ಸವಾರರಿಗೆ ಗಾಯ
Published 7 ಜುಲೈ 2024, 6:35 IST
Last Updated 7 ಜುಲೈ 2024, 6:35 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲಾ ಕೇಂದ್ರದಿಂದ ಯಾದಗಿರಿ, ರಾಯಚೂರು, ಮಂತ್ರಾಲಯ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕಲಬುರಗಿ–ಶಹಾಬಾದ್ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಯು ಸಾವಿನ ಹೆದ್ದಾರಿಯಾಗಿದ್ದು, ಜನರನ್ನು ಬಲಿ ತೆಗೆದುಕೊಳ್ಳಲು ಕಾದು ನಿಂತಿದೆ.

ಈ ರಸ್ತೆಯ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸಚಿವರು, ಶಾಸಕರು, ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಕಲಬುರಗಿಯಿಂದ–ಭಂಕೂರ ಕ್ರಾಸ್‌ ಸಮೀಪ ಸುಮಾರು 25 ಕಿ.ಮೀ. ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ನಗರದ ಹೊರವಲಯದ ಶಹಾಬಾದ್‌ ಕ್ರಾಸ್‌ನಿಂದ ಸ್ವಲ್ಪ ಮುಂಚೆ ಸಾಗಿದರೆ ಶೆಟ್ಟಿ ಕಾಲೇಜು, ನ್ಯಾಷನಲ್ ಪಬ್ಲಿಕ್‌ ಸ್ಕೂಲ್, ಕೆನ್‌ಬ್ರಿಡ್ಜ್ ಸ್ಕೂಲ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬರುತ್ತವೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೇ ಕೆಟ್ಟ ರಸ್ತೆಯನ್ನು ಬಳಸಿಕೊಂಡು ಸಂಚರಿಸಬೇಕಿದೆ. ಜೊತೆಗೆ, ನಂದೂರು–ಕೆಸರಟಗಿ ಕೈಗಾರಿಕಾ ಪ್ರದೇಶವೂ ಇಲ್ಲಿರುವುದರಿಂದ ನಿತ್ಯ ನೂರಾರು ಲಾರಿಗಳು ಲೋಡ್ ತುಂಬಿಕೊಂಡು ಇಲ್ಲಿಗೆ ಬರುತ್ತವೆ. 

ಮರತೂರು, ದೇವನತೆಗನೂರು, ಧರ್ಮಪುರ, ದೇವನತೆಗನೂರು, ಭಂಕೂರು ಕ್ರಾಸ್, ಶಹಾಬಾದ್ ಕ್ರಾಸ್, ರಾವೂರವರೆಗೆ ಅಲ್ಲಲ್ಲಿ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ರಾಷ್ಟ್ರೀಯ ಹೆದ್ದಾರಿಗೆ ಇರಬೇಕಾದ ಯಾವುದೇ ಕನಿಷ್ಠ ಸೌಲಭ್ಯಗಳೂ ಈ ರಸ್ತೆಗಳಿಗೆ ಇಲ್ಲ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. 

ಕೆಲ ತಿಂಗಳ ಹಿಂದೆ ಶುರುವಾಗಿರುವ ಕಲಬುರಗಿ–ಮಂತ್ರಾಲಯ–ಬೆಂಗಳೂರು ವೋಲ್ವೊ ಮಲ್ಟಿ ಆ್ಯಕ್ಸೆಲ್ ಬಸ್ ಸೇರಿದಂತೆ ಖಾಸಗಿ ಸಾರಿಗೆ ಸಂಸ್ಥೆಗಳ ಬೆಲೆಬಾಳುವ ಬಸ್‌ಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಇಂತಹ ಕೆಟ್ಟ ರಸ್ತೆಯಲ್ಲಿ ಐಷಾರಾಮಿ ಬಸ್‌ ಓಡಿಸುವುದರಿಂದ ಬೇಗನೇ ದುರಸ್ತಿಗೆ ಬರುತ್ತಿವೆ. ಅಲ್ಲದೇ, ರಸ್ತೆ ತೀವ್ರವಾಗಿ ಹದಗೆಟ್ಟಿರುವುದರಿಂದ ನಿಗದಿತ ಸ್ಥಳವನ್ನು ತಲುಪಲು ತಡವಾಗುತ್ತಿದ್ದು, ಪ್ರಯಾಣಿಕರಿಂದ ನಿಂದನೆಗೆ ಒಳಗಾಗಬೇಕಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು.

ನಂದೂರು ಕೈಗಾರಿಕಾ ಪ್ರದೇಶ ದಾಟುತ್ತಿದ್ದಂತೆಯೇ ಅಲ್ಲಲ್ಲಿ ದೊಡ್ಡ ತಗ್ಗುಗಳು ಎದುರಾಗುತ್ತವೆ. ಅವೈಜ್ಞಾನಿಕ ರೋಡ್ ಹಂಪ್‌ಗಳು ಪ್ರಯಾಣಿಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತವೆ. ದೇವನ ತೆಗನೂರು ಬಳಿ ಇರುವ ರೋಡ್ ಹಂಪ್‌ ಅಖಿಲ ಭಾರತ ರೋಡ್ ಕಾಂಗ್ರೆಸ್‌ನ ನಿಯಮಗಳಿಗೆ ವಿರುದ್ಧವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಷ್ಟೊಂದು ದೊಡ್ಡ ಹಂಪ್ ಇರುವಂತಿಲ್ಲ. ರಸ್ತೆಯು ಅಲ್ಲಲ್ಲಿ ಸವೆದು ಹೋಗಿದ್ದು, ಬೈಕ್‌ಗಳು ಹಾಗೂ ಕಾರಿನ ಚಕ್ರಗಳು ರಸ್ತೆಗಳ ಮಧ್ಯೆ ಸಿಲುಕಿಕೊಂಡು ಸ್ಕಿಡ್ ಆದ ಉದಾಹರಣೆಗಳಿವೆ ಎನ್ನುತ್ತಾರೆ ನಿತ್ಯ ಕಲಬುರಗಿಗೆ ಬರುವ ಶಹಾಬಾದ್ ನಿವಾಸಿ ರವಿ ಎಂ.

ಶಹಾಬಾದ್ –ರಾವೂರ ಮಧ್ಯದಲ್ಲಿ ಉಂಟಾಗಿರುವ ದೊಡ್ಡ ತಗ್ಗಿನಿಂದಾಗಿ ಪ್ರಯಾಣ ದುಸ್ತರವಾಗಿದೆ
ಚಿತ್ರಗಳು: ಸಿದ್ದರಾಜ ಮಲ್ಕಂಡಿ
ಶಹಾಬಾದ್ –ರಾವೂರ ಮಧ್ಯದಲ್ಲಿ ಉಂಟಾಗಿರುವ ದೊಡ್ಡ ತಗ್ಗಿನಿಂದಾಗಿ ಪ್ರಯಾಣ ದುಸ್ತರವಾಗಿದೆ ಚಿತ್ರಗಳು: ಸಿದ್ದರಾಜ ಮಲ್ಕಂಡಿ

‘ಈ ರಸ್ತೆ ದುಃಸ್ಥಿತಿಯಿಂದಾಗಿ ರಸ್ತೆ ಪ್ರಯಾಣವನ್ನೇ ಮಾಡುತ್ತಿಲ್ಲ. ರೈಲಿಗೆ ಬರುವುದು ಅನಿವಾರ್ಯವಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಕಲಬುರಗಿಗೆ ಬರಬೇಕೆಂದರೆ ಈ ರಸ್ತೆಯಲ್ಲಿ ನರಕಯಾತನೆ ಅನುಭವಿಸಬೇಕಾಗಿದೆ’ ಎನ್ನುತ್ತಾರೆ ಶಹಾಬಾದ್‌ನ ನಿವಾಸಿ ಸತೀಶ್ ಗುರುಜಾಳಕರ್.

ಮೆಹಬೂಬ್ ಖಾನ್
ಮೆಹಬೂಬ್ ಖಾನ್
ರಾವೂರು ಕ್ರಾಸ್‌ನಿಂದ ಕಲಬುರಗಿವರೆಗೆ ರಾಷ್ಟ್ರೀಯ ಹೆದ್ದಾರಿ ಅಧ್ವಾನಗೊಂಡಿದ್ದು ಪ್ರತಿನಿತ್ಯ ಜನರು ಹೆದ್ದಾರಿ ಮೇಲೆ ರಕ್ತ ಚೆಲ್ಲುವುದು ಸಾಮಾನ್ಯವಾಗಿದೆ. ಸ್ವಲ್ಪ ಮೈಮರೆತರೂ ಜೀವಕ್ಕೆ ಕಂಟಕ. ಕೂಡಲೇ ದುರಸ್ತಿ ಮಾಡಬೇಕು
ಮೆಹಬೂಬ್ ಖಾನ್ ಸಾಮಾಜಿಕ ಕಾರ್ಯಕರ್ತ ರಾವೂರು
ಸ್ವಾತಿ ಬೇಕನಾಳ
ಸ್ವಾತಿ ಬೇಕನಾಳ
ಪ್ರತಿದಿನ ಬಸ್‌ನಲ್ಲಿ ಬಂದು ಹೋಗಿ ಮಾಡ್ತೀವಿ. ಹದಗೆಟ್ಟ ರಸ್ತೆಯಿಂದ ವಾಹನಗಳು ಅಡ್ಡಾದಿಡ್ಡಿ ಬರುವುದರಿಂದ ಜೀವಕ್ಕೆ ಆಪತ್ತು ಇದೆ. ಕೂಡಲೇ ಹೆದ್ದಾರಿ ದುರಸ್ತಿ ಮಾಡಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಬೇಕು
ಸ್ವಾತಿ ಬೇಕನಾಳ ಕಾಲೇಜು ವಿದ್ಯಾರ್ಥಿನಿ
ಹೆದ್ದಾರಿ ಪ್ರಾಧಿಕಾರದ ಉದಾಸೀನ
ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಈ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿ ರಸ್ತೆ ನಿರ್ಮಾಣ ಮಾಡಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ರಸ್ತೆಯ ನಿರ್ವಹಣೆ ಸರಿಯಾಗಿಲ್ಲ.  ಶಹಾಬಾದ್‌ನ ಶಂಕರವಾಡಿ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಪಕ್ಕದ ಸರ್ವಿಸ್ ರಸ್ತೆ ಅಲ್ಲಿಂದ ಮುಂದೆ ಎತ್ತರದ ಸೇತುವೆಯ ಪಕ್ಕದಲ್ಲಿನ ಸರ್ವಿಸ್ ರಸ್ತೆ ವಾಡಿಯ ಬಲರಾಮ್ ಚೌಕದ ಬಳಿ ರೈಲ್ವೆ ಹಳಿ ಪಕ್ಕದಲ್ಲಿನ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮರ್ಪಕವಾಗಿ ನಿರ್ವಹಣೆ ಮಾಡದ್ದರಿಂದ ಹಲವು ಅಪಘಾತಗಳು ಸಂಭವಿಸಿವೆ. ಪ್ರಯಾಣವೂ ನಿಧಾನವಾಗಿದೆ. ಈ ಬಗ್ಗೆ ದಿಶಾ ಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾಪವಾಗಿದೆ. ಆದರೂ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಪ್ರಾಧಿಕಾರದ ಅಧಿಕಾರಿಗಳು ವರ್ತಿಸುತ್ತಾರೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.  ಹೆದ್ದಾರಿ ನಿರ್ವಹಣೆ ಮಾಡದಿರುವ ಕುರಿತು ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಯತ್ನಿಸಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT