ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುರಳಿಧರರಾವ್‌ ಏನೂ ಅರಿಯದ ಅವಿವೇಕಿ’

ಖರ್ಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬ ಆರೋಪಕ್ಕೆ ಡಾ.ಶರಣ ಪ್ರಕಾಶ ಪಾಟೀಲ ಆಕ್ರೋಶ
Last Updated 24 ಸೆಪ್ಟೆಂಬರ್ 2019, 12:34 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹಿರಿಯ ಕಾಂಗ್ರೆಸ್‌ ಮುಖಂಡ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳಿಧರರಾವ್‌ ಏನೂ ಅರಿಯದ ಅವಿವೇಕಿ. ಅವರ ಮೇಲೆಯೇ ಹೈದರಾಬಾದ್‌ನಲ್ಲಿ ವಂಚನೆ ಆರೋಪ ದಾಖಲಾಗಿದೆ’ ಎಂದು ಮಾಜಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ತಮ್ಮ ಪೈಜಾಮ, ಬನಿಯನ್‌ನ ಎಲ್ಲ ಜೇಬುಗಳನ್ನೂ ತುಂಬಿಸಿಕೊಂಡಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದುಕಲಬುರ್ಗಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿರುವ ಮುರಳಿಧರರಾವ್‌ ಆ ಆರೋಪಗಳನ್ನು ಸಾಬೀತು ಮಾಡಲಿ. ಇಲ್ಲದಿದ್ದರೆ ಬೇಷರತ್ ಕ್ಷಮೆ ಕೇಳಲಿ’ ಎಂದು ಆಗ್ರಹಿಸಿದರು.

‘ಬಾಯಿಗೆ ಬಂದಂತೆ ಮಾತನಾಡುವುದನ್ನು ಕಾಂಗ್ರೆಸ್‌ ಸಹಿಸುವುದಿಲ್ಲ. 50 ವರ್ಷಗಳಿಂದ ರಾಜಕಾರಣದಲ್ಲಿರುವ ಖರ್ಗೆ ಅವರು ಶಾಸಕರಾಗಿ, ಸಂಸದರಾಗಿ, ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಕಳಂಕ ರಹಿತ ರಾಜಕಾರಣ ನಡೆಸುತ್ತಿದ್ದಾರೆ. ಅವರ ವಿರುದ್ಧ ಯಾವ ಆಧಾರವೂ ಇಲ್ಲದೇ ಟೀಕೆ ಮಾಡುವುದು ಸರಿಯಲ್ಲ. ಮುರಳಿಧರರಾವ್‌ ಹಾಗೆ ಮಾತನಾಡಬೇಕಾದರೆ ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡರೇಕೆ ಸುಮ್ಮನೆ ಕುಳಿತಿದ್ದರು. ಖರ್ಗೆ ಅವರ ವ್ಯಕ್ತಿತ್ವ ಅವರಿಗೆ ಗೊತ್ತಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನ ಅರ್ಧ ನಾಯಕರು ಜೈಲಿನಲ್ಲಿದ್ದಾರೆ. ಇನ್ನರ್ಧ ಬೇಲ್‌ ಮೇಲೆ ಇದ್ದಾರೆ ಎಂದು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಹಾಗೆ ಜೈಲಿನಲ್ಲಿದ್ದು ಬಂದ ಕೇಂದ್ರ ಸಚಿವರ ಪಟ್ಟಿ ಕೊಡಬೇಕೇ’ ಎಂದರು.

‘ಮುರಳಿಧರರಾವ್‌ ಮೇಲೆ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ದಂಪತಿಗೆ ಕೇಂದ್ರದಲ್ಲಿ ಉತ್ತಮ ಸ್ಥಾನ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿ ಅವರಿಂದ ₹ 2 ಕೋಟಿ ಹಣ ಪಡೆದಿದ್ದಾರೆ. ತಮ್ಮ ಹುಳುಕನ್ನು ಮುಚ್ಚಿಟ್ಟುಕೊಂಡು ಖರ್ಗೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಅವರ ಯತ್ನ ಯಶಸ್ವಿಯಾಗದು. ರಾಜ್ಯದ ಜನತೆಗೆ ಖರ್ಗೆ ಅವರು ಏನೆಂಬುದು ಗೊತ್ತು’ ಎಂದು ಶರಣ ಪ್ರಕಾಶ ಹೇಳಿದರು.

ಮಾಜಿ ಸಚಿವ ಕೆ.ಬಿ.ಶಾಣಪ್ಪ ಮಾತನಾಡಿ, ‘ಖರ್ಗೆ ಅವರಂತಹ ಹಿರಿಯ ರಾಜಕಾರಣಿಯ ಬಗ್ಗೆ ಯಾರೋ ಬೇರೆಯವರು ಇಲ್ಲಿ ಬಂದು ಮಾತನಾಡುವಾಗ ಅಲ್ಲಿಯೇ ಇದ್ದ ಹಿರಿಯ ರಾಜಕಾರಣಿ ಬಿ.ಜಿ. ಪಾಟೀಲ ಸುಮ್ಮನೆ ಏಕೆ ಕುಳಿತಿದ್ದರು’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರಿಗೆ ರೆಡಿಮೇಡ್‌ ನಾಯಕರು ಬೇಕು. ಬೇರೆ ಪಕ್ಷದಲ್ಲಿದ್ದ ನನ್ನನ್ನು, ಗೋವಿಂದ ಕಾರಜೋಳ ಅವರನ್ನು ಸೆಳೆದುಕೊಂಡಿದ್ದರು. ಈಗ ಬಿಜೆಪಿಯಲ್ಲಿರುವವರಿಗೆ ಹಿಂದಿನ ವಿಚಾರ ಯಾವುದೂ ಗೊತ್ತಿಲ್ಲ’ ಎಂದು ಟೀಕಿಸಿದರು.

ಶಾಸಕರಾದ ಎಂ.ವೈ.ಪಾಟೀಲ, ಕನೀಜ್‌ ಫಾತಿಮಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT