ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಸಂಘಗಳ ಸ್ಥಾಪನೆ ಗುರಿ: ಶೋಭಾ ಕರಂದ್ಲಾಜೆ

Last Updated 4 ಸೆಪ್ಟೆಂಬರ್ 2021, 6:39 IST
ಅಕ್ಷರ ಗಾತ್ರ

ಕಲಬುರ್ಗಿ: ರೈತರ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಹಾಗೂ ಆರ್ಥಿಕವಾಗಿ ‌ಹಿಂದುಳಿದ ರೈತರಿಗೆ ನೆರವು ನೀಡುವ ಉದ್ದೇಶದಿಂದ ದೇಶದಾದ್ಯಂತ 10 ಸಾವಿರ ‌ಕೃಷಿ ಉತ್ಪಾದಕರ ಸಂಘಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ‌ಎಂದು ಕೃಷಿ ಹಾಗೂ ರೈತರ ಕಲ್ಯಾಣ ‌ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 750 ಸಂಘಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದು ಶ್ಲಾಘನೀಯ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ‌ ಮುನ್ನ ಕೃಷಿ ಇಲಾಖೆಗೆ ₹ 23 ಸಾವಿರ ‌ಕೋಟಿ ಹಂಚಿಕೆಯಾಗುತ್ತಿತ್ತು. ಇಡೀ ದೇಶದ ಜನಕ್ಕೆ ಇಷ್ಟು ಹಣ ಬಹಳ ಕಡಿಮೆಯಾಗಿತ್ತು. ಹೀಗಾಗಿ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಮೋದಿ ಅವರು ₹ 1.23 ಲಕ್ಷ‌ ಕೋಟಿ ಹಣವನ್ನು ಕೃಷಿ ಇಲಾಖೆಗೆ ಹಾಗೂ ಭಾರತೀಯ ‌ಕೃಷಿ ಸಂಶೋಧನಾ ಸಂಸ್ಥೆಗೆ (ಐಸಿಎಆರ್) ₹ 8,500 ಕೋಟಿ ಹಂಚಿಕೆ ‌ಮಾಡಲಾಗಿದೆ ಎಂದು ತಿಳಿಸಿದರು.

ಕ್ಲಸ್ಟರ್ ಆಧಾರಿತ ಮಾರುಕಟ್ಟೆ: ಈಗಾಗಲೇ ಕಾಫಿ, ಮೆಣಸು, ರೋಸ್ ಈರುಳ್ಳಿಗೆ ಸೃಷ್ಟಿಯಾದಂತೆ ರೈತರ ಇತರೆ ಉತ್ಪನ್ನಗಳಿಗೆ ಕ್ಲಸ್ಟರ್ ಆಧಾರಿತ ಮಾರುಕಟ್ಟೆಯನ್ನು ಸೃಷ್ಟಿಸಲು ‌ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಚಿವೆ ಶೋಭಾ ಹೇಳಿದರು.

ಜಿಡಿಪಿಯಲ್ಲಿ ಒಟ್ಟಾರೆ ಕೃಷಿ ಪಾಲು ಮುಂಚೆ ಶೇ 13ರಷ್ಟಿತ್ತು. ಅದನ್ನು ಶೇ 20ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಶೇ 25ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಈ ಭಾಗದಲ್ಲಿ ಬೆಳೆಯುವ ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸುವ ಪ್ರಸ್ತಾವ ಬೆಲೆ ಆಯೋಗದ ‌ಮುಂದಿದೆ ಎಂದು ಸ್ಪಷ್ಟಪಡಿಸಿದರು.

ಪ್ರಶ್ನೆಗಳಿಗೆ ಉತ್ತರಿಸದ ಸಚಿವೆ:ಹರಿಯಾಣದಲ್ಲಿ ರೈತರ ಮೇಲಿನ ಲಾಠಿ ಪ್ರಹಾರ, ರಾಜ್ಯದ ‌ಕೃಷಿ ಇಲಾಖೆಯಿಂದ ಸ್ಥಗಿತಗೊಂಡ ಹಲವು ಯೋಜನೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಶಾಸಕ ಬಸವರಾಜ ಮತ್ತಿಮೂಡ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ‌ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ಎಸ್ಸಿ‌ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT